ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಒಡೆದ ಮನೆಯಾದ ಜೆಡಿಎಸ್‌

ನಿಂಗಪ್ಪ ಪಕ್ಷ ಸೇರ್ಪಡೆ ವೇಳೆ ಎಚ್‌.ಡಿ. ಕುಮಾರಸ್ವಾಮಿ ಮುಂದೆಯೇ ಕಿತ್ತಾಟ, ಒಕ್ಕಲಿಗ ಮುಖಂಡರಿಗೆ ಬಿಜೆ
Last Updated 29 ಏಪ್ರಿಲ್ 2018, 14:04 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ನಗರ ಕ್ಷೇತ್ರದಲ್ಲಿ ಜೆಡಿಎಸ್‌ ಒಡೆದ ಮನೆಯಂತಾಗಿದೆ. ಪಕ್ಷದ ಮುಖಂಡರು ಪ್ರಚಾರದಿಂದ ದೂರ ಸರಿದಿರುವಂತೆ ಕಾಣುತ್ತಿದೆ.

ಮಾಜಿ ಶಾಸಕ ಎಚ್‌.ನಿಂಗಪ್ಪ ಅವರು ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರುವ ವೇಳೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಎದುರೇ ಕಾರ್ಯಕರ್ತರು ಮತ್ತು ಅಭ್ಯರ್ಥಿ ಗೋವಿಂದರಾಜು ನಡುವೆ ಮಾತಿನ ಚಕಮಕಿ ನಡೆದಿದೆ. ಇದು ಪಕ್ಷದ ಆಂತರಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಇದು ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಎದ್ದು ತೋರಿಸಿದೆ. ಅಲ್ಲದೆ ಚರ್ಚೆಯ ವಿಷಯವೂ ಆಗಿದೆ.

‘ಕಾರ್ಯಕರ್ತರೊಬ್ಬರು ಗೋವಿಂದ ರಾಜು ಅವರ ಮನೆಗೆ ಹೋಗಿದ್ದರು. ಆಗ ಗೋವಿಂದರಾಜು ಅವರು ಒಂದು ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಚೆನ್ನಿಗಪ್ಪ, ಮತ್ತೊಬ್ಬ ಟಿಕೆಟ್‌ ಆಕಾಂಕ್ಷಿಯಾಗಿದ್ದ ನರಸೇಗೌಡ ಅವರ ಮನೆಗೆ ಹೋಗಬೇಕಿತ್ತು ಎಂದು ವ್ಯಂಗ್ಯವಾಗಿ ಛೇಡಿಸಿದ್ದರು. ಈ ವಿಚಾರವಾಗಿಯೇ ಕುಮಾರಸ್ವಾಮಿ ಅವರು ಬಂದಾಗ ಗಲಾಟೆಗೆ ಕಾರಣವಾಗಿದ್ದು.‌ ಮುಖಂಡ ಜಹಾಂಗೀರ್ ಎಲ್ಲರನ್ನು ಸಮಾಧಾನಪಡಿಸಿದರು’ ಎಂದು ಹಿರಿಯ ಮುಖಂಡರೊಬ್ಬರು ’ಪ್ರಜಾವಾಣಿ’ಗೆ ತಿಳಿಸಿದರು.

ಚುನಾವಣೆ ಘೋಷಣೆಗೆ ಮುನ್ನ ದಿನಗಳಿಂದಲೂ ಗೋವಿಂದರಾಜು ಏಕಾಂಗಿಯಾಗಿ, ತಮ್ಮದೇ ಹುಡುಗರ ಪಡೆ ಕಟ್ಟಿಕೊಂಡು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇದು ಈಗಲೂ ಮುಂದುವರಿದಿದೆ. ಪಕ್ಷದ ಯಾರೊಂದಿಗೂ,  ಅವರು ವಿಶ್ವಾಸ ತೋರುತ್ತಿಲ್ಲ ಎಂಬ ಮುನಿಸು ಪಕ್ಷದ ಹಲವು ಮುಖಂಡರಲ್ಲಿ ಇದೆ‌.

ಟಿಕೆಟ್‌ ಆಕಾಂಕ್ಷಿಗಳಾಗಿದ್ದ ನರಸೇಗೌಡ, ಬೆಳ್ಳಿ ಲೋಕೇಶ್‌ ಈವರೆಗೂ ಗೋವಿಂದರಾಜು ಜತೆ ಹಾಗೂ ಪಕ್ಷದ ಪರ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಒಕ್ಕಲಿಗ ಸಮುದಾಯದ ಸಾಕಷ್ಟು ಮುಖಂಡರು ದೂರವೇ ಉಳಿದಿದ್ದಾರೆ.  ಇದು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

’ಪಕ್ಷದಲ್ಲಿ ಹದಿಮೂರು ಮಂದಿ ಪಾಲಿಕೆ ಸದಸ್ಯರಿದ್ದೇವೆ. ಅದರಲ್ಲಿ 9 ಮಂದಿ ಪ್ರಚಾರಕ್ಕೆ ಹೋಗುತ್ತಿಲ್ಲ. ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲದ ಮೇಲೆ ನಾವು ಏಕೆ ಪ್ರಚಾರಕ್ಕೆ ಹೋಗಬೇಕು. ಚುನಾವಣೆ ಘೋಷಣೆಯಾದ ಬಳಿಕ ಪಕ್ಷದಿಂದ ಒಂದೇ ಒಂದು ಸಭೆ ನಡೆಸಿಲ್ಲ’ ಎಂದು ಪಾಲಿಕೆಯ ಸದಸ್ಯರೊಬ್ಬರು ತಿಳಿಸಿದರು. 

’ಜಿಲ್ಲಾ ಘಟಕದ ಅಧ್ಯಕ್ಷ ಚನ್ನಿಗಪ್ಪ ನೇತೃತ್ವದಲ್ಲಿಯೇ ಸಭೆ ನಡೆಯಬೇಕು. ಅಲ್ಲಿಯೇ ನಾವು ಚರ್ಚಿಸುತ್ತೇವೆ ಎಂದು ಹೇಳಿದ್ದೇವೆ. ಬೇರೆಯವರು ಸಭೆ ಕರೆದರೆ ನಾವು ಹೋಗುವುದಿಲ್ಲ. ಪಕ್ಷದ ಜಿಲ್ಲಾ ಘಟಕದಿಂದ ಇಲ್ಲಿಯವರೆಗೆ ಸಭೆ ಕರೆದಿಲ್ಲ. ನಾವು ಕೂಡ ಏನನ್ನು ಕೇಳಲು ಹೋಗಿಲ್ಲ’ ಎಂದರು.

’ಕಳೆದ ಚುನಾವಣೆಯಲ್ಲಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ನಗರ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದರು. ತಮ್ಮದೇ ಆದ ರೀತಿ ಪ್ರಚಾರ ನಡೆಸಿದ್ದರು. ಆದರೆ ಪಾಲಿಕೆಯ ಉಪ ಮೇಯರ್ ಚುನಾವಣೆಯಲ್ಲಿ ತಮ್ಮ ಸಮುದಾಯದ ಸದಸ್ಯರಿಗೆ ಅವಕಾಶ ನೀಡಲಿಲ್ಲ. ಇದು ಸಮುದಾಯದ ಜನರ ಕೋಪಕ್ಕೂ ಕಾರಣವಾಗಿತ್ತು. ಇದರ ಪರಿಣಾಮವನ್ನು ಅವರು ತಮ್ಮ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಚುನಾವಣೆ ವೇಳೆ ಅನುಭವಿಸಿದರು. ಇದರಿಂದ ಎಚ್ಚೆತ್ತು ಅವರು ಈ ಸಲ ನಗರ ಕ್ಷೇತ್ರದ ಬಗ್ಗೆ ಮೌನವಹಿಸಿದ್ದಾರೆ’ ಎಂದೂ ಅವರು ಮಾಹಿತಿ ನೀಡಿದರು.

’ಪಕ್ಷದಲ್ಲಿ ದುಡಿದವರಿಗೆ ಮಣೆ ಹಾಕುತ್ತಿಲ್ಲ. ಬೇರೆ ಪಕ್ಷದಿಂದ ಬಂದ ಗೋವಿಂದರಾಜು ಅವರಿಗೆ ಕಳೆದ ಚುನಾವಣೆಯಲ್ಲಿ ಕಡೆ ಕ್ಷಣದಲ್ಲಿ ಟಿಕೆಟ್‌ ನೀಡಲಾಯಿತು. ಸೋತ ಬಳಿಕ ಅವರು ನಗರದಲ್ಲಿ ಕಾಣಿಸಿಕೊಂಡಿದ್ದು ಅಪರೂಪ. ನಾವುಗಳೇ ಕಾರ್ಯಕರ್ತರ ಬೇಕು ಬೇಡ ನೋಡಿಕೊಂಡೆವು. ಈ ಸಲ ಟಿಕೆಟ್‌ ನೀಡಬಹುದು ಎಂದು ನಂಬಿದ್ದೆ.  ಪಕ್ಷ  ಕಡೆಗಣಿಸಿತು. ಪಕ್ಷದ ಕಾರ್ಯಕರ್ತರನ್ನು ಬೇಕಾಬಿಟ್ಟಿ ಕಾಣಲಾಗುತ್ತಿದೆ. ಇದರಿಂದ ಸಾಕಷ್ಟು ಮಂದಿ ಪ್ರಚಾರಕ್ಕೆ ಹೋಗುತ್ತಿಲ್ಲ. ಜಹಾಂಗೀರ್ ಸೇರಿ ಒಂದಿಬ್ಬರು ಮುಖಂಡರಷ್ಟೇ ಅವರಿಗೆ ಬೇಕಾಗಿದೆ. ನಮ್ಮಗಳ ಅಗತ್ಯ ಇಲ್ಲ’  ಎಂದು ಟಿಕೆಟ್‌ ಸಿಗದ  ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್‌ನ ಒಡಕಿನ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ. ಅಸಮಾಧಾನಗೊಂಡಿರುವ ಮುಖಂಡರು ನಗರದ ಖಾಸಗಿ ಹೋಟೆಲ್‌ ವೊಂದರಲ್ಲಿ ಈಚೆಗೆ ಸಭೆ ನಡೆಸಿದ್ದಾರೆ. ಅಲ್ಲಿಗೆ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್‌ ಸಹ ಆಹ್ವಾನಿಸಲಾಗಿತ್ತು ಎಂದೂ ತಿಳಿದುಬಂದಿದೆ.

‘ಒಕ್ಕಲಿಗರನ್ನು ಸೆಳೆಯಲು ಪ್ರಯತ್ನಿಸಿರುವುದು ಸತ್ಯ. ಆ ಭಾಗವಾಗಿ ಈಚೆಗೆ ಶೋಭಾ ಕರಂದ್ಲಾಜೆ ಅವರನ್ನು ಕರೆಸಲಾ
ಗಿತ್ತು. ಸದ್ಯದಲ್ಲೇ ಈ ಸಮುದಾಯದ ಮುಖಂಡರ ಗೋಪ್ಯ ಸಭೆ ನಡೆಸಲು ಸಿದ್ಧತೆ ನಡೆಸಲಾಗಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಬಂಡಾಯವಾಗಿ ಸ್ಪರ್ಧಿಸುವುದಾಗಿ ಹೇಳಿ ಕಡೆ ಗಳಿಗೆಯಲ್ಲಿ ಹಿಂದಕ್ಕೆ ಸರಿದ ಕುಣಿಗಲ್ ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ ಅವರ ಹಿಂಬಾಲಕರು ಅಸಮಾಧಾನಗೊಂಡಿದ್ದಾರೆ. ಅವರ ಹಿಂಬಾಲಕರಾಗಿದ್ದ ಹುಲಿಯೂರುದುರ್ಗದ ಮುಖಂಡ ಶಿವಣ್ಣ ಗೌಡ ಅವರ ತಂಡ ಪಕ್ಷ ತೊರೆದು ಜೆಡಿಎಸ್‌ ಸೇರುವ ಬಗ್ಗೆ ಮಾತುಕತೆ ನಡೆದಿದೆ ಎಂದು ತಿಳಿದುಬಂದಿದೆ. ಉಳಿದವರು ಮಾಜಿ ಶಾಸಕರ ಜತೆಯೇ ಇದ್ದಾರೆ. ಆದರೆ ಅವರು ಪಕ್ಷದ ಪರ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಇದು ಗುಸುಗುಸು ಸುದ್ದಿಗೆ ಕಾರಣವಾಗಿದೆ.

ಗುಬ್ಬಿಯಲ್ಲಿ ಟಿಕೆಟ್‌ ಸಿಗದೆ ಮುನಿಸಿಕೊಂಡಿರುವ ಕಾಂಗ್ರೆಸ್‌ನ ಹೊನ್ನಗಿರಿಗೌಡ ಪಕ್ಷದ ಪರ ಪ್ರಚಾರದಿಂದ ದೂರ ಉಳಿದಿದ್ದಾರೆ. ಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ಅವರು ತಮ್ಮ ಹಿಂಬಾಲಕರು ಪಕ್ಷದ ಪರ ಅಥವಾ ಬೇರೆಯವರ ಪರ ಪ್ರಚಾರಕ್ಕೆ ಹೋಗದಂತೆ ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕೊನೇ ಗಳಿಗೆಯಲ್ಲಿ ಅವರ ಕಾರ್ಯತಂತ್ರ ಏನು ಎಂಬುದು ತಿಳಿಯುತ್ತಿಲ್ಲ. ಆದರೆ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸುವುದೇ ನನ್ನ ಗುರಿ ಎಂದು ಹೇಳುತ್ತಿದ್ದಾರೆ.

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸಾಸಲು ಸತೀಶ್ ಕಾಂಗ್ರೆಸ್‌ ಜತೆಯಲ್ಲಿಯೇ ಇದ್ದಾರೆ. ಪ್ರಚಾರ ನಡೆಸುತ್ತಿದ್ದಾರೆ. ಆದರೆ ಸತೀಶ್‌ ಅವರ ಕೆಲವು ಹಿಂಬಾಲಕರು ಜೆಡಿಎಸ್‌ ಕೈ ಹಿಡಿದಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್‌ ಸಿಗದಿದ್ದ ಕಿರಣ್‌ಕುಮಾರ್ ಪ್ರಚಾರದಿಂದ ದೂರವೇ ಉಳಿದಿದ್ದಾರೆ. ಆದರೆ ಅವರು ಜೆಡಿಎಸ್‌ಗೆ ಪರೋಕ್ಷವಾಗಿ ಬೆಂಬಲ ನೀಡಿದ್ದು ಅವರ ಬೆಂಬಲಿಗರು ಆ ಪಕ್ಷದ ಪರ ಮತಕೇಳುತ್ತಿದ್ದಾರೆ ಎನ್ನುವ ವದಂತಿ ದಟ್ಟವಾಗಿಯೇ ಇದೆ.

ತಂಡಗಳ ರಚನೆ

ಬೇರೆ ಬೇರೆ ಪಕ್ಷಗಳಲ್ಲಿ ಅಸಮಾಧಾನಗೊಂಡಿರುವ ಸಮುದಾಯಗಳ ಮುಖಂಡರನ್ನು ಸೆಳೆಯುವ ಪ್ರಯತ್ನಕ್ಕೆ ಎಲ್ಲ ಪಕ್ಷಗಳು ಮುಂದಾಗಿವೆ. ಮುಖಂಡರಿಗೆ ಆಪ್ತರಾದವರ ಮೂಲಕ ಈ ಪ್ರಯತ್ನಗಳು ನಡೆಯುತ್ತಿವೆ. ಸಣ್ಣ, ಪುಟ್ಟ ಸಮುದಾಯಗಳನ್ನು ಒಲಿಸಿಕೊಳ್ಳುವ ಯತ್ನಕ್ಕೂ ಕೈ ಜೋಡಿಸಿವೆ.

’ಬೇರೆ ಪಕ್ಷಗಳಲ್ಲಿ ಅಸಮಾಧಾನಗೊಂಡಿರುವ ಸಮುದಾಯದ ಮುಖಂಡರು, ಸಣ್ಣಪುಟ್ಟ ಜಾತಿಗಳ ಮುಖಂಡರನ್ನು ಸೆಳೆಯಲು ನಗರದಲ್ಲಿ 14 ತಂಡಗಳನ್ನು ರಚಿಸಲಾಗಿದೆ. ವಾಟ್ಸ್‌ ಆ್ಯಪ್‌ ಮೂಲಕ ಎಲ್ಲವನ್ನೂ ನಿರ್ವಹಣೆ ಮಾಡಲಾಗುತ್ತಿದೆ. ಈ ತಂಡಗಳು ಪ್ರತಿ ದಿನ ಯಾರನ್ನು ಭೇಟಿ ಮಾಡಿವೆ. ಅವರ ಯತ್ನ ಸಫಲವಾಗಿದೆಯೇ ಎಂಬ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿವೆ’ ಎಂದು ಬಿಜೆಪಿಯ ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT