ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು, ಶಿಕ್ಷಣವೇ ಗುರಿ

Last Updated 14 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

* ನಿಮ್ಮ ಗೆಲುವು ಹೇಗೆ ಸಾಧ್ಯವಾಯಿತು?
ನನ್ನ ಪತಿ ನಾರಾಯಣ ಅವರು ಕಳೆದ 30 ವರ್ಷಗಳಿಂದಲೂ ವಾರ್ಡಿನಲ್ಲಿ ಜನಮುಖಿ ಕೆಲಸಗಳನ್ನು ಮಾಡಿದ್ದು ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿತು. ಇವರು ಮೊದಲು ವ್ಯವಸಾಯ ಮಾಡುತ್ತಿದ್ದು, ನಂತರ ನಂದಿನಿ ಹಾಲು ವಿತರಿಸುವ ಏಜೆಂಟ್ ಆದರು. ಇದರಿಂದ ಜನಸಾಮಾನ್ಯರ ಸಂಪರ್ಕ ಸಾಧ್ಯವಾಯಿತು. ಕ್ರಮೇಣ ಜನರ ಸಮಸ್ಯೆಗಳಿಗೆ ಸ್ಪಂದಿಸಲಾರಂಭಿಸಿದರು. ಇದು ಜನರಲ್ಲಿ ಗುರುತಿಸಿಕೊಳ್ಳಲು ಕಾರಣವಾಯಿತು. ಇದರ ಜತೆಗೆ, ಬಿಜೆಪಿ ಕಾರ್ಯಕರ್ತರ ಅವಿರತ ಶ್ರಮ, ಮುಖಂಡರ ಬೆಂಬಲ ಗೆಲುವಿಗೆ ಸಹಕಾರವಾಯಿತು.

* ವಾರ್ಡಿನಲ್ಲಿ ಸಮಸ್ಯೆಗಳಿವೆಯೇ?
ಖಂಡಿತಾ ಇವೆ. ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಒಳಚರಂಡಿ ಸಮಸ್ಯೆ ಬಿಗಡಾಯಿಸಿದೆ. 30 ವರ್ಷಕ್ಕೂ ಹಿಂದಿನ ಒಳಚರಂಡಿ ಪೈಪುಗಳು ಈಗಲೂ ಇವೆ. ಆಗಿನ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಈಗ ಜನಸಂಖ್ಯೆ ಹೆಚ್ಚಿದೆ. ಒತ್ತಡ ಸಹಿಸಿಕೊಳ್ಳಲು ಸಾಧ್ಯವಾಗದೇ ಪೈಪುಗಳು ಒಡೆಯುತ್ತಿವೆ. ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಇದರ ಜತೆಗೆ, ಸ್ವಚ್ಛತೆಯ ಕೊರತೆ ಹೆಚ್ಚಿದೆ. ಎಲ್ಲೆಂದರಲ್ಲಿ ಕಸ ತುಂಬಿ ತುಳುಕುತ್ತಿದೆ. ರಸ್ತೆ ಸಮಸ್ಯೆಯೂ ಇದೆ.

*ನಿಮ್ಮ ಪ್ರಮುಖ ಕನಸುಗಳೇನು?
ವಾರ್ಡಿನ ಜನರಿಗೆ ಸಕಾಲದಲ್ಲಿ ಸಾಕಾಗುವಷ್ಟು ನೀರು ಸಿಗುವಂತೆ ಮಾಡುವುದೇ ದೊಡ್ಡ ಕನಸು. ಶೇ 90ರಷ್ಟು ಮಂದಿ ಇಲ್ಲಿರುವವರು ಹಿಂದುಳಿದವರು. ಬಹುತೇಕ ಮಂದಿ ಕೂಲಿ ಕೆಲಸ ಮಾಡುತ್ತಾರೆ. ನಿತ್ಯ ಬೆಳಿಗ್ಗೆ ಶ್ರಮದಾಯಕ ಕೆಲಸ ಮಾಡಿ ರಾತ್ರಿ ಬಂದು ನೆಮ್ಮದಿಯಿಂದ ನಿದ್ದೆ ಮಾಡಬೇಕು. ಆದರೆ, ಈಗ ರಾತ್ರಿ ವೇಳೆ ನೀರು ಸರಬರಾಜಾಗುತ್ತಿದೆ. ಇದರಿಂದ ಜನರಿಗೆ ನಿದ್ದೆಯೂ ಇಲ್ಲದಂತಾಗಿದೆ. ಇದರ ಜತೆಗೆ+, ಎರಡು ದಿನಗಳಿಗೊಮ್ಮೆ ನೀರು ಬರುತ್ತಿರುವುದು ಸಮಸ್ಯೆಯನ್ನು ಹೆಚ್ಚಿಸಿದೆ. ಈ ಸಮಸ್ಯೆ ನಿವಾರಿಸುವುದು ಮೊದಲ ಗುರಿ. ನಂತರ, ಒಳಚರಂಡಿ ಪೈಪುಗಳನ್ನು ಬದಲಿಸಬೇಕಿದೆ. ವಾರ್ಡಿನಲ್ಲಿರುವ 7 ಉದ್ಯಾನಗಳನ್ನು ಅಭಿವೃದ್ಧಿಗೊಳಿಸಬೇಕಿದೆ. ಮತ್ತೊಂದು ಪ್ರಮುಖ ಕನಸು ಎಂದರೆ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜುಗಳನ್ನು ವಾರ್ಡಿನಲ್ಲಿ ತೆರೆಯುವುದು. ಬಡವರೇ ಹೆಚ್ಚಿರುವುದರಿಂದ ಖಾಸಗಿ ಶಾಲೆ ಹಾಗೂ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸಲು ಕಷ್ಟವಾಗುತ್ತಿದೆ. ಸರ್ಕಾರಿ ಶಾಲೆಗೆ ಕನಿಷ್ಠ ಎಂದರೂ 5 ರಿಂದ 6 ಕಿ.ಮೀ ದೂರ ಹೋಗಬೇಕಿದೆ. ಹಾಗಾಗಿ, ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜೊಂದನ್ನು ವಾರ್ಡಿನಲ್ಲಿ ಆಗುವಂತೆ ಪ್ರಯತ್ನಿಸಬೇಕಿದೆ.

*ಪ್ರಾಥಮಿಕ ಆರೋಗ್ಯ ಘಟಕ ಇದೆಯೇ? ಅದರ ಸ್ಥಿತಿ ಹೇಗಿದೆ?
ಸದ್ಯ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ಚೆನ್ನಾಗಿದೆ. ಈ ಹಿಂದೆ ಸತತ ಹೋರಾಟ ಮಾಡಿ ಆರೋಗ್ಯ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಲಾಯಿತು.

*ಇಷ್ಟೆಲ್ಲ ಕನಸುಗಳನ್ನು ಹೇಗೆ ಈಡೇರಿಸುತ್ತೀರಿ?
ಪಾಲಿಕೆ ಅನುದಾನ, ಶಾಸಕರು, ಸಂಸದರ ನಿಧಿಯಿಂದ ಹಣ ತರುತ್ತೇನೆ. ಶಾಲೆ, ಕಾಲೇಜುಗಳಿಗೆ ಸರ್ಕಾರದ ಮಟ್ಟದಲ್ಲಿ ಪತ್ರ ಬರೆದು ಒತ್ತಾಯಿಸುತ್ತೇನೆ. ಕೌನ್ಸಿಲ್‌ನಲ್ಲಿ ವಾರ್ಡಿನ ಸಮಸ್ಯೆಗಳ ಕುರಿತು ದನಿ ಎತ್ತುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT