ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಹುಣಸೂರು: ಡ್ರಂ, ಆಂಟೆನಾ ತಟ್ಟೆಯೇ ವಾದ್ಯ ಪರಿಕರ!

ನಾಗರಹೊಳೆ ನಾಣಾಚ್ಚಿ ಗದ್ದೆ ಹಾಡಿ ಯುವಕರ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ
Last Updated 23 ಅಕ್ಟೋಬರ್ 2021, 3:03 IST
ಅಕ್ಷರ ಗಾತ್ರ

‌ಹುಣಸೂರು: ಆ ಕಲಾವಿದರ ಬಳಿ ಆಧುನಿಕ, ದುಬಾರಿ ಬೆಲೆಯ ವಾದ್ಯ ಪರಿಕರಗಳಿಲ್ಲ. ನೀರಿನ ಡ್ರಂ, ತುಕ್ಕು ಹಿಡಿದ ಡಿಟಿಎಚ್ ಆಂಟೆನಾ ತಟ್ಟೆ, ಕೈಗೆ ಸಿಕ್ಕ ಕೋಲು ಅವರ ವಾದ್ಯ ಪರಿಕರಗಳು. ಇವುಗಳನ್ನು ಬಳಸಿ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸುತ್ತಿದ್ದರೆ ಸಭಿಕರು ಮಂತ್ರಮುಗ್ಧರಾಗುತ್ತಾರೆ.

ಹೌದು, ಗಿರಿಜನರ ಮೂಲ ಸಂಸ್ಕೃತಿ, ಆಚಾರ–ವಿಚಾರಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ನಾಗರಹೊಳೆ ನಾಣಾಚ್ಚಿ ಗದ್ದೆ ಹಾಡಿ ಯುವಕರ ಕಲಾ ತಂಡವು ಸಂಗೀತ ಕಾರ್ಯಕ್ರಮ ನೀಡುತ್ತಾ ಗಮನ ಸೆಳೆದಿದೆ.

ಜೇನುಕುರುಬ ಸಮುದಾಯದ ಯುವ ಪೀಳಿಗೆ ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಪರಂಪರೆ, ಸಂಪ್ರದಾಯ, ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ. ಅವರನ್ನು ಒಳಗೊಳ್ಳುವ ಮೂಲಕ ಮೂಲ ಸಂಸ್ಕೃತಿಯನ್ನು ಸಂರಕ್ಷಿಸಲು ಈ ತಂಡ 17 ವರ್ಷಗಳಿಂದ ಶ್ರಮಿಸುತ್ತಿದೆ.

‘ಅರಣ್ಯವಾಸಿ ಗಿರಿ ಜನರಿಗೆ ಹೃದಯ ಶ್ರೀಮಂತಿಕೆ ಹೆಚ್ಚು. ಸಂಪ್ರದಾಯ, ಭಕ್ತಿ, ಕಾಳಜಿ, ಭಾವನೆಗಳಿದ್ದು, ಅದನ್ನು ಮೂಲ ಗಿರಿಜನ ಭಾಷೆಯಲ್ಲೇ ಗೀತೆಗಳನ್ನು ರಚಿಸಿ ಹಾಡುವ ಮೂಲಕ ಜನಮಾನಸಕ್ಕೆ ಮುಟ್ಟಿಸುವ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ತಂಡದ ನಾಯಕ ನಾಣಾಚ್ಚಿ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಲ್ಯವಿವಾಹ, ಜೀತ ಪದ್ಧತಿ, ಸಾರಾಯಿ ಮುಕ್ತಗೊಳಿಸುವುದು,ಶಿಕ್ಷಣ, ಆರೋಗ್ಯ ಸೇರಿದಂತೆ ವಿಷಯಗಳಿಗೆ ಸಂಬಂಧಿಸಿದಂತೆ ಗೀತೆ ರಚಿಸಿ ರಾಗ ಸಂಯೋಜಿಸಿ ಹಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಈ ತಂಡದಲ್ಲಿ ಕುಮಾರ್, ಅಜಯ್ ಜೆ.ಕೆ, ಪ‍್ರತಾಪ್ ಜೆ.ಆರ್, ಉದಯ, ಸುದೀಪ್, ಲೇಖ ಮತ್ತು ಅನಿತಾ ಇದ್ದಾರೆ. ಇವರು ತಮ್ಮದೇ ಶೈಲಿಯಲ್ಲಿ ಹಾಡುತ್ತಾರೆ. ಹಿಮ್ಮೇಳವಾಗಿ ನಿತಿನ್, ಅನಿಲ್, ರಾಜಣ್ಣ, ನವೀನ್, ಸೂರ್ಯ ಮತ್ತು ಸುಭಾಷ್ ಇದ್ದು, ಹಾಡುಗಳಿಗೆ ವಾದ್ಯ ನುಡಿಸುತ್ತಾರೆ.

2015–16ರಲ್ಲಿ ಕೇರಳದಲ್ಲಿ ಆಯೋಜಿಸಿದ್ದ ಗಿರಿಜನ ಸಾಂಪ್ರದಾಯಿಕ ಗೀತ ಗಾಯನ ಕಾರ್ಯಕ್ರಮದಲ್ಲಿ ಈ ತಂಡದ ಕಲಾವಿದರು ಭಾಗವಹಿಸಿದ್ದರು. 2017ರಲ್ಲಿ ದೆಹಲಿಯಲ್ಲಿ ಆಯೋಜಿಸಿದ್ದ ಬುಡಕಟ್ಟು ಉತ್ಸವ, ಮಧ್ಯಪ್ರದೇಶದಲ್ಲಿ 2018ರಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದರು.

‘ನಾವು ನೀಡುವ ಸಂಗೀತ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಭಾವನೆ ಸಿಗುವುದಿಲ್ಲ. ₹15 ಸಾವಿರದಿಂದ ₹20 ಸಾವಿರ ಸಿಕ್ಕರೂ ಆ ಹಣವನ್ನುಸಮಾಜದ ಮಕ್ಕಳ ಶಿಕ್ಷಣಕ್ಕೆ ಬಳಸುತ್ತೇವೆ’ ಎಂದು ನಾಣಾಚ್ಚಿ ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT