ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಭೀತಿಯಿಂದ ಜಿಪಂ, ತಾಪಂ ಚುನಾವಣೆಗೆ ಬಿಜೆಪಿ ಹಿಂದೇಟು: ಧ್ರುವನಾರಾಯಣ

Last Updated 14 ಜುಲೈ 2022, 11:41 IST
ಅಕ್ಷರ ಗಾತ್ರ

ಮೈಸೂರು: ‘ಬಿಜೆಪಿಯವರು ಸೋಲುವ ಭೀತಿಯಿಂದಾಗಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಆರೋಪಿಸಿದರು.

ಗ್ರಾಮಾಂತರ ‌ಜಿಲ್ಲಾ ಕಾಂಗ್ರೆಸ್ ಸಮಿತಿ, ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಗಳ ಸಮಿತಿಯಿಂದ ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಂಚಾಯತ್‌ರಾಜ್ ಜಿಲ್ಲಾ ಸಮ್ಮೇಳನ ಹಾಗೂ ಪದಾಧಿಕಾರಿಗಳ ಅಧಿಕಾರ ‌ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಧಿಕಾರ ವಿಕೇಂದ್ರೀಕರಣದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಹೀಗಾಗಿ, ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಗೊಳಿಸುತ್ತಿಲ್ಲ. ನೆಪವೊಡ್ಡಿ ಚುನಾವಣೆ ಮುಂದೂಡುತ್ತಿದ್ದಾರೆ’ ಎಂದು ದೂರಿದರು.

‘ಇದು ಚುನಾವಣೆ ವರ್ಷವಾದ್ದರಿಂದ ವಿಧಾನಸಭಾ ಕ್ಷೇತ್ರವಾರು ಅಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ಪಾದಯಾತ್ರೆ ನಡೆಸಬೇಕು. ಸ್ವಾತಂತ್ರ್ಯಕ್ಕೆ ಮುನ್ನ ಹಾಗೂ ಸ್ವಾತಂತ್ರ್ಯದ ನಂತರ ಪಕ್ಷವು ದೇಶಕ್ಕೆ ನೀಡಿದ ಕೊಡುಗೆಗಳನ್ನು ಜನರಿಗೆ ತಿಳಿಸಿಕೊಡಬೇಕು’ ಎಂದರು.

ಬೆಂಗಳೂರಲ್ಲಿ ತ್ರಿವರ್ಣ ಧ್ವಜ ಮೆರವಣಿಗೆ:

‘ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಎಐಸಿಸಿಯು ವಿವಿಧ ಕಾರ್ಯಕ್ರಮ ರೂಪಿಸಿದೆ. ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ. ಪಾದಯಾತ್ರೆ ನಡೆಸಲಾಗುತ್ತದೆ. ಆ.15ರಂದು ಬೆಂಗಳೂರಿನಲ್ಲಿ ಲಕ್ಷ ಕಾರ್ಯಕರ್ತರು ತ್ರಿವರ್ಣ ಧ್ವಜ ಹಿಡಿದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾಲ್ಗೊಳ್ಳುವುದಕ್ಕಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಬಿಜೆಪಿಯವರು ಕೇಂದ್ರೀಕೃತ ವ್ಯವಸ್ಥೆಯ ಮೇಲೆ ಒಲವುಳ್ಳವರು. ಹೀಗಾಗಿ, ಸ್ಥಳೀಯ ಸಂಸ್ಥೆಗಳಿಗೆ ಸರಿಯಾಗಿ ಅನುದಾನ ನೀಡಿಲ್ಲ. ಸೌಲಭ್ಯಗಳು ದೊರೆಯುತ್ತಿಲ್ಲ. ಜಿ.ಪಂ.ನಲ್ಲಿ ಜನಪ್ರತಿನಿಧಿಗಳು ಇಲ್ಲದಿದ್ದರಿಂದ ಸಾರ್ವಜನಿಕರು ಶಾಸಕರ ಬಳಿಗೇ ಅಲೆಯಬೇಕಾದ ಪರಿಸ್ಥಿತಿ ಇದೆ’ ಎಂದು ದೂರಿದರು.

ನಿಂತ ನೀರಾದ ಅಭಿವೃದ್ಧಿ

‘ಬಿಜೆಪಿ ಸರ್ಕಾರ ಬಂದ ಮೇಲೆ ಹಳ್ಳಿಗಳಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ’ ಎಂದು ಶಾಸಕ ಅನಿಲ್ ಚಿಕ್ಕಮಾದು ಆರೋಪಿಸಿದರು.

‘ರಾಜ್ಯದಲ್ಲಿರುವ ಮುಂಚೂಣಿ ನಾಯಕರಲ್ಲಿ ಅನೇಕರು ತಾ.ಪಂ ಮತ್ತು ಜಿ.ಪಂ ಚುನಾವಣೆಯಲ್ಲಿ ಗೆದ್ದು ಮೇಲೆ ಬಂದವರು. ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದವರಿಗೆ ಅಧಿಕಾರ ಮತ್ತು ಯೋಜನೆಗಳ ಅರಿವಿರುತ್ತದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಗಳ ಸಮಿತಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ‘ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಸಂವಿಧಾನ ತಿದ್ದುಪಡಿ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಬಲ ನೀಡಿದ್ದರು’ ಎಂದು ತಿಳಿಸಿದರು.

ರಾಜೀವ್‌ಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಘೋಷಿಸಲಾಯಿತು. ಅಧ್ಯಕ್ಷರಾಗಿ ಬಿ. ಮಲ್ಲೇಶ್‌, ವಿ.ಸಿ.ಶ್ರೀನಿವಾಸಮೂರ್ತಿ (ಉಪಾಧ್ಯಕ್ಷ), ಡಿ.ಎಂ.ರಾಜು (ಕಾರ್ಯದರ್ಶಿ) ಅಧಿಕಾರ ಸ್ವೀಕರಿಸಿದರು. ಶ್ರೀನಿವಾಸ್ (ಎಚ್.ಡಿ. ಕೋಟೆ) ಸುರೇಶ್ (ಹುಣಸೂರು), ಶಿವಕುಮಾರ್ (ಚಾಮುಂಡೇಶ್ವರಿ), ವಾಸಿಂ ಪಾಷಾ (ಕೆ.ಆರ್. ನಗರ) ನವೀನ್ ಕುಮಾರ್ (ನಂಜನಗೂಡು), ಉಮೇಶ್ (ವರುಣಾ), ಸುರೇಶ್ (ಇಲವಾಲ ಬ್ಲಾಕ್) ಕ್ಷೇತ್ರವಾರು ಪದಾಧಿಕಾರಿಗಳನ್ನಾಗಿ ನೇಮಿಸಲಾಯಿತು.

ಕೆಪಿಸಿಸಿ ಉಪಾಧ್ಯಕ್ಷ ಸೂರಜ್ ಹೆಗಡೆ, ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಲಹಾ ಸಮಿತಿ ಸದಸ್ಯ ಘೋರ್ಪಡೆ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕೆಪಿಸಿಸಿ ಕಾರ್ಯದರ್ಶಿ ನಾಗವಾಲ ನರೇಂದ್ರ, ಮುಖಂಡರಾದ ಕೆ.ಮರೀಗೌಡ, ಉಮಾಶಂಕರ್, ವೆಂಕಟರಾಮು, ಜಿ.ವಿ. ಸೀತಾರಾಂ, ಸುಧಾ ಮಹದೇವಯ್ಯ, ಬಸವಣ್ಣ, ಹೆಡತಲೆ ಮಂಜುನಾಥ್, ಭಾಸ್ಕರ್, ಅರುಣ್‌ಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT