ತೋಟಗಳಲ್ಲಿ ನಕಲಿ ಮದ್ಯದ ಗಮಲು

ಶನಿವಾರ, ಏಪ್ರಿಲ್ 20, 2019
26 °C
ಉಚಿತ ಸಿಕ್ಕಿತೆಂದು ಕುಡಿದೀರಿ ಜೋಕೆ!

ತೋಟಗಳಲ್ಲಿ ನಕಲಿ ಮದ್ಯದ ಗಮಲು

Published:
Updated:

ಮೈಸೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯ ಗ್ರಾಮಾಂತರ ಭಾಗಗಳ ಜಮೀನುಗಳು ಮತ್ತು ತೋಟದ ಮನೆಗಳಲ್ಲಿ ಮುಗುಮ್ಮಾಗಿಯೇ ಸಣ್ಣ ಸಣ್ಣ ಔತಣಕೂಟಗಳು ನಡೆಯಲಾರಂಭಿಸಿವೆ. ಕೇವಲ ಒಂದೆರಡು ಗಂಟೆಗಳಲ್ಲಿ ಇವುಗಳು ಮುಗಿದು ಹೋಗುತ್ತವೆ. ಇಲ್ಲೆಲ್ಲ ನಕಲಿ ಮದ್ಯದ ವಾಸನೆ ಬರಲಾರಂಭಿಸಿದೆ.

ಅ‍ಪರಿಚಿತರು ವಿಚಾರಿಸಿದರೆ ಯಾರದ್ದೋ ಕುಟುಂಬದ ಕಾರ್ಯಕ್ರಮ ಎಂದು ಹೇಳುತ್ತಾರೆ. ಕುಟುಂಬದ ಕಾರ್ಯಕ್ರಮಗಳಲ್ಲಿ ಹೆಂಗಸರೇ ಅಧಿಕ ಸಂಖ್ಯೆಯಲ್ಲಿರುತ್ತಾರೆ. ಆದರೆ, ಇಂತಹ ಕಾರ್ಯಕ್ರಮಗಳಲ್ಲಿ ಹುಡುಕಿದರೂ ಒಬ್ಬ ಸ್ತ್ರೀ ಸಹ ಸಿಗುವುದಿಲ್ಲ. ಇವೆಲ್ಲವೂ ರಾಜಕೀಯ ನಾಯಕರು ತಮ್ಮತ್ತ ಸೆಳೆಯಲು ಆಯೋಜಿಸುವ ‘ಪಾರ್ಟಿ’ಗಳು ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಇಲ್ಲಿ ಮಾಂಸಾಹಾರ ಊಟ ಸಾಮಾನ್ಯ ಎನಿಸಿದೆ. ಇದರ ಜತೆಗೆ ಮದ್ಯದ ಸರಬರಾಜೂ ಇದೆ. ಅವರಿಷ್ಟದ ಬ್ರಾಂಡ್ ಇಲ್ಲಿ ಲಭ್ಯವಿದ್ದರೂ ಅದು ಅಸಲಿ ಅಲ್ಲ ನಕಲಿ ಎಂಬುದು ಕೆಲವರ ಅಭಿಪ್ರಾಯ.

ಸಾಮಾನ್ಯವಾಗಿ ರಾಜಕೀಯ ನಾಯಕರು ತಮ್ಮ ತಮ್ಮ ಪಕ್ಷಗಳತ್ತ ಮತದಾರರನ್ನು ಸೆಳೆಯಲು ಬೂತ್‌ ಮಟ್ಟದ ಪುಡಿ ರಾಜಕಾರಣಿಗೆ ಹೆಚ್ಚಾಗಿ ಹಣ ನೀಡಿರುತ್ತಾರೆ. ಈತ ತನ್ನ ಆಪ್ತಬಳಗದಲ್ಲಿ ಗುರುತಿಸಿಕೊಂಡಿರುವವರಿಗೆ ಔತಣಕೂಟ ಏರ್ಪಡಿಸುತ್ತಾರೆ. ಆದರೆ, ಹಣ ಉಳಿಸಲು ಈತ ಇವರಿಗೆಲ್ಲ ಸರಬರಾಜು ಮಾಡುವುದು ಮಾತ್ರ ಅಸಲಿ ಹೆಸರನ್ನು ಹೊತ್ತ ನಕಲಿ ಮದ್ಯದ ಬಾಟಲಿಗಳು.

ಬಹಳಷ್ಟು ವೇಳೆ ಕಾರ್ಯಕರ್ತರೇ ತಮ್ಮ ಮುಖಂಡರನ್ನು ‘ಏನೂ ಇಲ್ಲವೇ’ ಎಂದು ಕೇಳುತ್ತಾರೆ. ಇಂತಹ ಸಮಯದಲ್ಲಿ ‘ಏನೂ ಇಲ್ಲ’ ಎಂದರೆ ಅಭ್ಯರ್ಥಿಯು ಭಾಗವಹಿಸುವ ಸಮಾವೇಶಗಳಿಗೆ, ಸಭೆಗಳಿಗೆ ಹಾಗೂ ಮತಯಾಚನೆಗೆ ಬರುವುದಿಲ್ಲ ಎಂದು ಹೆದರಿ ಪುಡಿ ರಾಜಕಾರಣಿಗಳು ತಮ್ಮ ಶಕ್ತಿ ಪ್ರದರ್ಶಿಸಲು ಇಂತಹ ಔತಣಕೂಟಗಳನ್ನು ಏರ್ಪಡಿಸುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ.ಕೋಟೆ ತಾಲ್ಲೂಕಿನ ಹೆಸರು ಹೇಳಲು ಬಯಸದ ವ್ಯಕ್ತಿಯೊಬ್ಬರು, ‘ಚುನಾವಣಾಧಿಕಾರಿಗಳು ಏನೆಲ್ಲ ಕ್ರಮ ಕೈಗೊಂಡರೂ ಇಂತಹ ಔತಣಕೂಟಗಳ ಜಾಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಇಲ್ಲೆಲ್ಲ ಕೇವಲ ಪುಡಾರಿ ರಾಜಕಾರಣಿಯ ಆಪ್ತಬಳಗದಲ್ಲಿರುವವರಿಗಷ್ಟೇ ಆಮಂತ್ರಣ ಇರುತ್ತದೆ. ಕನಿಷ್ಠ ಎಂದರೂ 3 ಗಂಟೆಗಳಲ್ಲಿ ಇಂತಹ ಕಾರ್ಯಕ್ರಮಗಳು ಮುಗಿದು ಹೋಗುತ್ತವೆ’ ಎಂದು ಹೇಳಿದರು.

ನಕಲಿ ಮದ್ಯ ಎಲ್ಲಿಂದ?
ಈಗಾಗಲೇ ನಕಲಿ ಮದ್ಯದ ಬಾಟಲಿಗಳು ತಮಿಳುನಾಡು ಮತ್ತು ಕೇರಳದಿಂದ ರಾಜ್ಯದ ಗಡಿ ಪ್ರವೇಶಿಸಿವೆ. ಚುನಾವಣೆ ಘೋಷಣೆಯಾಗಬಹುದು ಎಂಬ ಲೆಕ್ಕಾಚಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಮದ್ಯ ತಯಾರಾಗಿದ್ದು, ಘೋಷಣೆಯಾದ ಒಂದೆರಡು ದಿನಗಳಲ್ಲಿ ನಗರ ಮತ್ತು ಬೆಂಗಳೂರು ಸೇರಿದಂತೆ ಆಯಾಕಟ್ಟಿನ ಜಿಲ್ಲೆಗಳಲ್ಲಿ ಹಂಚಿಕೆಯಾಗಿವೆ. ಈ ಮಾಫಿಯಾದಲ್ಲಿರುವ ವ್ಯಕ್ತಿಗಳು ರಹಸ್ಯವಾಗಿ ದಾಸ್ತಾನಿರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಇವೆ.

ತಕ್ಷಣಕ್ಕೆ ಸಾವಿಲ್ಲ, ಆದರೆ ಅಪಾರ ಕಟ್ಟಿಟ್ಟ ಬುತ್ತಿ
ನಕಲಿ ಮದ್ಯ ಎಂದರೆ ಅದೇನು ಕಳ್ಳಭಟ್ಟಿ ಸಾರಾಯಿ ಅಲ್ಲ. ತಕ್ಷಣಕ್ಕೆ ಜೀವ ಹೋಗುವಂಥ ಯಾವುದೇ ಅಂಶಗಳು ಅದರಲ್ಲಿ ಇಲ್ಲ. ಆದರೆ, ಅದರ ಗುಣಮಟ್ಟ ತೀರಾ ಕಳಪೆ. ಅಪಾಯಕಾರಿ, ಅಗ್ಗದ ರಾಸಾಯನಿಕಗಳನ್ನು ಇದರಲ್ಲಿ ಬೆರೆಸಲಾಗುತ್ತದೆ. ಈ ಮದ್ಯವನ್ನು ಪದೇಪದೇ ಸೇವಿಸುವುದು ಆರೋಗ್ಯಕ್ಕೆ ಅಪಾಯ.

ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮದ್ಯ ವಶ
ಚುನಾವಣೆ ಘೋಷಣೆಯಾದಾಗಿನಿಂದ ಜಿಲ್ಲೆಯಲ್ಲಿ ಭಾನುವಾರದವರೆಗೆ ₹ 1 ಕೋಟಿಗೂ ಅಧಿಕ ಮೌಲ್ಯದ ಮದ್ಯವನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ.

ಅಬಕಾರಿ ಇಲಾಖೆಯು 33,601.815 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ. ಪೊಲೀಸ್ ಇಲಾಖೆಯು 208.62 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ. ಒಟ್ಟು ಇವುಗಳ ಮೌಲ್ಯ ₹ 1.41 ಕೋಟಿ. ಒಟ್ಟು 651 ಎಫ್‌ಐಆರ್‌ಗಳು ದಾಖಲಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !