ಗುರುವಾರ , ಡಿಸೆಂಬರ್ 5, 2019
22 °C
ಬಿಜೆಪಿ ಅಭ್ಯರ್ಥಿಗಳು, ಅನರ್ಹ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡರು

ದೇಶಪ್ರೇಮ ಯಾರ ಜಹಗೀರಲ್ಲ: ಈಶ್ವರ ಖಂಡ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಬಿಜೆಪಿಯವರು ನಕಲಿ ರಾಷ್ಟ್ರೀಯವಾದಿಗಳು. ಎಂದೆಂದೂ ದೇಶಕ್ಕಾಗಿ ಹೋರಾಟ ನಡೆಸಿದವರಲ್ಲ. ದೇಶಪ್ರೇಮ ಎಂಬುದು ಯಾರೊಬ್ಬರ ಜಹಗೀರದಾರಿಯಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.

ಮೈಸೂರು ನಗರ ಹಾಗೂ ಜಿಲ್ಲಾ ಗ್ರಾಮಾಂತರ ಮಹಿಳಾ ಘಟಕದ ಅಧ್ಯಕ್ಷರ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಗುರುವಾರ ಪಕ್ಷದ ಬಾವುಟ ನೀಡಿ ಮಾತನಾಡಿದ ಅವರು, ‘ರಾಷ್ಟ್ರದ ಗಮನವೆಲ್ಲ ಉಪಚುನಾವಣೆಯತ್ತ ನೆಟ್ಟಿದೆ. ಲೋಕಸಭಾ ಚುನಾವಣೆಯಲ್ಲಿ ವಿವಿಧ ಕಾರಣಗಳಿಗೆ ಹಿನ್ನಡೆಯಾಗಿರಬಹುದು. ಇದೀಗ ಅಧಿಕಾರದ ದಾಹಕ್ಕಾಗಿ ಬೆನ್ನಿಗೆ ಚೂರಿ ಹಾಕಿದವರಿಗೆ ಪಾಠ ಕಲಿಸುವ ಕಾಲ ಬಂದಿದೆ. ಪಕ್ಷದ್ರೋಹಿಗಳಿಗೆ ತಕ್ಕಪಾಠ ಕಲಿಸಲು ಕಾರ್ಯಕರ್ತರು ಮತದಾರನ ಮನೆ ಬಾಗಿಲಿಗೆ ಹೋಗಿ ಮನದಟ್ಟು ಮಾಡಿಕೊಡಬೇಕಿದೆ’ ಎಂದು ನೆರೆದಿದ್ದ ಕಾರ್ಯಕರ್ತ ಸಮೂಹಕ್ಕೆ ಮನವಿ ಮಾಡಿದರು.

‘ಬಿಜೆಪಿಯವರು ಸಮಾನತೆಯ ವಿರೋಧಿಗಳು. ಪಟ್ಟಭದ್ರರ ಕೈಗೊಂಬೆ. ಮಹಿಳೆಯರ ಬಗ್ಗೆ ಕಿಂಚಿತ್ ಗೌರವ ಹೊಂದಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವಲ್ಲಿ, ಮಹಿಳಾ ಹಕ್ಕುಗಳನ್ನು ದಮನಗೊಳಿಸುವಲ್ಲಿ ನಿಸ್ಸೀಮರು. ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ಚುನಾಯಿತ ಬಿಜೆಪಿ ಜನಪ್ರತಿನಿಧಿಗಳು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಂಡ ಹಲವು ನೈಜ ನಿದರ್ಶನಗಳಿವೆ. ಮಹಿಳೆಯರನ್ನು ಗೌರವಿಸಿ, ಸಮಾನತೆ ನೀಡಿರುವ ಕಾಂಗ್ರೆಸ್‌ ‘ಕೈ’ ಬಲಪಡಿಸಬೇಕು’ ಎಂದು ಇದೇ ಸಂದರ್ಭ ಕೋರಿದರು.

ಶಾಸಕ ಯು.ಟಿ.ಖಾದರ್ ಮಾತನಾಡಿ, ‘ಕಾಂಗ್ರೆಸ್ ಕಾರ್ಯಕರ್ತರು ಬೂತ್‌ ಕೆಲಸವೊಂದನ್ನು ಬಿಟ್ಟು, ಹಳ್ಳಿ ರಾಜಕಾರಣದಿಂದ ಹಿಡಿದು ಅಂತರರಾಷ್ಟ್ರೀಯ ರಾಜಕಾರಣವನ್ನು ಅರಿತ ನಿಸ್ಸೀಮರು. ಆದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಉಪಚುನಾವಣೆ ಮತದಾನಕ್ಕೆ 15 ದಿನ ಬಾಕಿಯಿದೆ. ಇದೀಗ ಎಲ್ಲವನ್ನೂ ಬಿಟ್ಟು, ಬೂತ್‌ನತ್ತ ಚಿತ್ತ ಹರಿಸಿದರೆ ಮಾತ್ರ ಗೆಲುವು ಕಟ್ಟಿಟ್ಟಬುತ್ತಿ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು’ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

‘ಜನಬೆಂಬಲ ಇದ್ದವರು ಮಾತ್ರ ನಾಯಕರು. ಹುದ್ದೆ ಮುಖ್ಯವಲ್ಲ. ಯಾವ ಕೆಲಸ ಮಾಡುತ್ತೇವೆ ಎಂಬುದು ಮುಖ್ಯ. ಇಂದು ರಾಜಕೀಯ ಸುಲಭವಲ್ಲ. ಟೀಕೆ–ಟಿಪ್ಪಣಿ ಸಹಜ. ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿಕೊಂಡು ಮುಂದುವರೆಯಿರಿ. ದೇಶವೇ ಇದೀಗ ನಮ್ಮತ್ತ ನೋಡುತ್ತಿದೆ. ಸ್ವಾಭಿಮಾನ ಗೆಲ್ಲಬೇಕಿದೆ. ಹುಣಸೂರು ಕ್ಷೇತ್ರ ಗೆಲ್ಲುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಕಾರ್ಯಕರ್ತನು ಹೊತ್ತುಕೊಳ್ಳಿ’ ಎಂದು ಮನವಿ ಮಾಡಿಕೊಂಡರು.

ನಿಕಟಪೂರ್ವ ಅಧ್ಯಕ್ಷೆ ನಂದಿನಿ ಚಂದ್ರಶೇಖರ್ ಮಾತನಾಡಿದರು. ಮೈಸೂರು ನಗರ ಘಟಕದ ಅಧ್ಯಕ್ಷೆಯಾಗಿ ಪುಷ್ಪಲತಾ ಚಿಕ್ಕಣ್ಣ, ಗ್ರಾಮಾಂತರ ಘಟಕದ ಅಧ್ಯಕ್ಷೆಯಾಗಿ ಲತಾ ಸಿದ್ದಶೆಟ್ಟಿ ಅಧಿಕಾರ ಸ್ವೀಕರಿಸಿದರು.

ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ಮೇಯರ್ ಮೋದಾಮಣಿ, ಮಂಜುಳಾ ಮಾನಸ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿಷ್ಣುನಾದ್‌, ಶಾಸಕ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಸೇರಿದಂತೆ ಪಕ್ಷದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು