ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ರೆಮ್‌ಡಿಸಿವಿರ್‌ ಮಾರಾಟ ಜಾಲ ಪತ್ತೆ

ಕಾಳಸಂತೆಯಲ್ಲಿ 800ಕ್ಕೂ ಅಧಿಕ ಮಂದಿಗೆ ಪೂರೈಕೆ ಮಾಡಿರುವ ಶಂಕೆ
Last Updated 19 ಏಪ್ರಿಲ್ 2021, 18:13 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ನಕಲಿ ರೆಮ್‌ಡಿಸಿವಿರ್‌ ಮಾರಾಟ ಜಾಲವನ್ನು ಬೇಧಿಸಿದ್ದು, ಜಾಲದ ಪ್ರಮುಖ ಆರೋಪಿ ಗಿರೀಶ್‌ (34) ಎಂಬಾತನನ್ನು ಬಂಧಿಸಿದ್ದಾರೆ.

ಈತನಿಂದ 34 ಬಾಟಲಿಯಷ್ಟು ನಕಲಿ ರೆಮ್‌ಡಿಸಿವಿರ್‌ ಹಾಗೂ ₹ 2.82 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈತ ಸುಮಾರು 800ಕ್ಕೂ ಅಧಿಕ ಬಾಟಲಿಗಳನ್ನು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣದ ಇತರೆ ಆರೋಪಿಗಳಾದ ಶಿವಪ್ಪ (37), ಮಂಗಳಾ (32) ಎಂಬುವವರನ್ನು ವಶಕ್ಕೆ ಪಡೆದಿದ್ದು, ಪ್ರಶಾಂತ್ ಹಾಗೂ ಮಂಜುನಾಥ್‌ ಎಂಬುವವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

‘ಕೋವಿಡ್‌ ರೋಗಿಗಳಿಗೆ ನೀಡಲಾಗುವ ರೆಮ್‌ಡಿಸಿವಿರ್‌ಗೆ ಹೆಚ್ಚಿನ ಬೇಡಿಕೆ ಇದ್ದು, ಇವುಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಕುರಿತು ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ವೇಳೆ ನಕಲಿ ರೆಮ್‌ಡಿಸಿವಿರ್‌ ಮಾರಾಟ ಮಾಡುತ್ತಿದ್ದ ಆಘಾತಕಾರಿ ಅಂಶ ಗೊತ್ತಾಯಿತು’ ಎಂದು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕಳೆದ 11 ವರ್ಷಗಳಿಂದ ಜೆಎಸ್ಎಸ್‌ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಿರೀಶ್‌, ವಿದ್ಯಾನಗರದ ತನ್ನ ನಿವಾಸದಲ್ಲಿ ಖಾಲಿಯಾದ ರೆಮ್‌ಡಿಸಿವಿರ್‌ನ ಬಾಟಲಿಗಳಿಗೆ ನಕಲಿ ಔಷಧ ತುಂಬಿಸುತ್ತಿದ್ದ. ಈತನಿಗೆ ಪ್ರಮುಖಆಸ್ಪತ್ರೆಯ ಭದ್ರತಾ ಸಿಬ್ಬಂದಿ ಶಿವಪ್ಪ ಹಾಗೂ ಪ್ರಮುಖಕೋವಿಡ್‌ ಕೇರ್ ಸೆಂಟರ್‌ನ ಸ್ವೀಪರ್‌ ಮಂಗಳಾ ಅವರು ಬಳಸಿ ಎಸೆದ ರೆಮ್‌ಡಿಸಿವಿರ್‌ನ ಅಸಲಿ ಬಾಟಲಿಗಳನ್ನು ಪೂರೈಕೆ ಮಾಡುತ್ತಿದ್ದರು. ಈ ಬಾಟಲಿಗಳಿಗೆ ನಕಲಿ ಔಷಧ ತುಂಬಿಸಿದ ನಂತರ ಗಿರೀಶ್‌, ವಿವಿಧ ಔಷಧ ಕಂಪನಿಗಳ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಮತ್ತು ಮಂಜುನಾಥ್ ಅವರಿಗೆ ನೀಡಿ ಬೇಡಿಕೆ ಇದ್ದ ಕಡೆಗೆ ಪೂರೈಕೆ ಮಾಡುತ್ತಿದ್ದ’ ಎಂದು ಮಾಹಿತಿ ನೀಡಿದರು.

ಪುಡಿ ರೂಪದ ರೆಮ್‌ಡಿಸಿವಿರ್‌ಗೆ ಸೆಫ್ಟ್ರಿಆ್ಯಕ್ಸನ್‌ ಎಂಬ ಆ್ಯಂಟಿ ಬಯಟಿಕ್‌ ಮತ್ತು ದ್ರವ ರೂಪದ ರೆಮ್‌ಡಿಸಿವಿರ್‌ಗೆ ನಾರ್ಮಲ್ ಸಲೈನ್‌ನ್ನು ತುಂಬಿಸುತ್ತಿದ್ದ. ಇವುಗಳಿಗೆ ಕನಿಷ್ಠ ಎಂದರೂ ಈತನಿಗೆ ₹ 100 ವೆಚ್ಚ ತಗುಲುತ್ತಿತ್ತು. ಇದನ್ನು ಈತ ಬೇಡಿಕೆ ಇದ್ದ ಕಡೆ ಕಾಳಸಂತೆಯಲ್ಲಿ ₹ 4 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಇಲ್ಲಿಯವರೆಗೆ 800ಕ್ಕೂ ಅಧಿಕ ಬಾಟಲಿಗಳನ್ನು ಮಾರಾಟ ಮಾಡಿರುವ ಶಂಕೆ ಇದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT