ವೈಭವದ ದಸರೆಗೆ ಸಂಭ್ರಮದ ಚಾಲನೆ

7
ಮೈಸೂರಿನಲ್ಲಿ ಸಾಂಸ್ಕೃತಿಕ ಸಂಗಮ, ನವರಾತ್ರಿಯ ಸಡಗರ

ವೈಭವದ ದಸರೆಗೆ ಸಂಭ್ರಮದ ಚಾಲನೆ

Published:
Updated:

ಮೈಸೂರು: ಸಾಂಸ್ಕೃತಿಕ ಸಂಗಮದ ದಸರಾ ಮಹೋತ್ಸವಕ್ಕೆ ಚಾಮುಂಡಿಬೆಟ್ಟದಲ್ಲಿ ಬುಧವಾರ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ಲಭಿಸಿತು.

ಉದ್ಯಮಿ, ಲೇಖಕಿ ಸುಧಾಮೂರ್ತಿ ಬೆಳಿಗ್ಗೆ 7.30ಕ್ಕೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ನಾಡಹಬ್ಬ ಉದ್ಘಾಟಿಸಿದರು. ವೇದಿಕೆಯಲ್ಲಿ ಬೆಳ್ಳಿರಥದಲ್ಲಿ ಪ್ರತಿಷ್ಠಾಪಿಸಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು. ಇದರೊಂದಿಗೆ ನವರಾತ್ರಿ ಸಡಗರ ಗರಿಗೆದರಿತು. 9 ದಿನಗಳ ವೈವಿಧ್ಯಮಯ ದಸರಾ ಕಾರ್ಯಕ್ರಮಗಳು ಪ್ರವಾಸಿಗರನ್ನು ಸೆಳೆಯಲಿವೆ. ಕೊನೆ ದಿನವಾದ ವಿಜಯದಶಮಿಯಂದು ವಿಶ್ವವಿಖ್ಯಾತ ಜಂಬೂಸವಾರಿ ನಡೆಯಲಿದೆ.

ದಸರೆಗೆ ಚಾಲನೆ ನೀಡಿದ ಸುಧಾಮೂರ್ತಿ, ಕನ್ನಡದ ಜನತೆಗೆ ನಮಸ್ಕರಿಸುತ್ತಲೇ ಆದಿಕವಿ ಪಂಪನನ್ನು ನೆನಪಿಸಿಕೊಂಡರು. ಪಂಪನ ಮಾತುಗಳನ್ನು ಸ್ಮರಿಸುತ್ತಲೇ ಕನ್ನಡದ ಕಂಪು, ನಾಡು, ನುಡಿ, ಕನ್ನಡಿಗರ ಭಾವನಾತ್ಮಕ ವಿಚಾರಗಳನ್ನು ಮೆಲುಕು ಹಾಕಿದರು.

‘ನನಗೆ ಆಹಾರ, ಉಸಿರು, ನೀರು, ಭಾಷೆ– ಎಲ್ಲವೂ ಕನ್ನಡವೇ ಆಗಿದೆ’ ಎಂದು ಹೇಳುವ ಮೂಲಕ ಕನ್ನಡಿಗರನ್ನು ಉತ್ತುಂಗ ಶಿಖರದಲ್ಲಿ ನಿಲ್ಲಿಸಿದರು.

ವಿಜಯನಗರ ಅರಸರ ಕಾಲದಲ್ಲಿ ದಸರಾ ಆರಂಭ, ಮೈಸೂರಿನ ಯದು ವಂಶದ ರಾಜರು ಮುಂದುವರೆಸಿಕೊಂಡು ಬಂದ ಬಗೆಯನ್ನು ನೆನಪು ಮಾಡಿಕೊಂಡರು. 10 ನಿಮಿಷಗಳ ಪುಟ್ಟ ಭಾಷಣವನ್ನು ಕನ್ನಡಿಗರು, ಕನ್ನಡ ಭಾಷೆಗೆ ಸೀಮಿತಗೊಳಿಸಿದರು. ಅವರ ಪತಿ, ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಕುಟುಂಬದವರು ವೇದಿಕೆ ಮುಂಭಾಗದಲ್ಲಿ ಆಸೀನರಾಗಿದ್ದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಭಾಷಣದಲ್ಲಿ ಸುಧಾಮೂರ್ತಿ ಅವರ ಸಾಮಾಜಿಕ ಬದ್ಧತೆಯನ್ನು ನೆನಪಿಸಿಕೊಂಡರು. ತಾಯಿ ಹೃದಯದ ಮಹಿಳೆಯಿಂದ ಈ ಬಾರಿ ದಸರಾ ಕಾರ್ಯಕ್ರಮ ಉದ್ಘಾಟಿಸಿದ್ದು, ನಾಡಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯ ಮಾತನಾಡುವ ವೇದಿಕೆ ಇದಲ್ಲ ಎಂದು ಹೇಳುತ್ತಲೇ ರಾಜಕೀಯ ವಿಚಾರ ಪ್ರಸ್ತಾಪಿಸಿದರು. ‘ನೆಮ್ಮದಿ, ಸಂತೋಷದಿಂದ ಮುಖ್ಯಮಂತ್ರಿ ಸ್ಥಾನದಲ್ಲಿ ನಾನು ಕುಳಿತಿಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು, ಆಕಸ್ಮಿಕವಾಗಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಆದರೆ, ನನ್ನನ್ನು ನಂಬಿದರೆ ನಾಡಿನ ಜನತೆಗೆ ಒಳಿತು ಮಾಡುವೆ. ರೈತರು, ಬಡವರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಕುಟುಂಬಗಳನ್ನು ಅನಾಥರನ್ನಾಗಿ ಮಾಡಬೇಡಿ ಕೈಮುಗಿದು ಬೇಡಿಕೊಳ್ಳುತ್ತೇನೆ’ ಎಂದು ಭಾವುಕರಾಗಿ ನುಡಿದರು.

‘ರಾಜ್ಯದ ಪ್ರತಿ ಕುಟುಂಬವೂ ನೆಮ್ಮದಿಯಿಂದ ಬದುಕಬೇಕು ಎಂಬ ಆಶಯದೊಂದಿಗೆ ಯೋಜನೆ ರೂಪಿಸುತ್ತಿದ್ದೇನೆ. ಕಾರ್ಯಕ್ರಮಗಳಿಗೆ ಹಣದ ಕೊರತೆ ಇಲ್ಲ. ಹಣ ಸದ್ಬಳಕೆಯಲ್ಲಿ ಲೋಪವಿದೆ. ನಮ್ಮಿಂದ ಆಗಿರುವ ಲೋಪಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಸುಧಾಮೂರ್ತಿ ಅವರಂತೆ ಎಲ್ಲರೂ ಹೃದಯ ವೈಶಾಲ್ಯ ತೋರಿದರೆ ನಾಡು ಮತ್ತಷ್ಟು ಅಭಿವೃದ್ಧಿಯಾಗುತ್ತದೆ’ ಎಂದು ಹೇಳಿದರು.

***
ಕೊಡಗು ಮನೆ ನಿರ್ಮಾಣಕ್ಕೆ ₹ 25 ಕೋಟಿ

ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದ್ದು, ಸಂತ್ರಸ್ತರ ಮನೆ ನಿರ್ಮಾಣಕ್ಕೆ ಇನ್ಫೊಸಿಸ್ ಪ್ರತಿಷ್ಠಾನದಿಂದ ₹ 25 ಕೋಟಿ ನೀಡುವುದಾಗಿ ಸುಧಾಮೂರ್ತಿ ಪ್ರಕಟಿಸಿದರು.

‘ಜನರ ಹಣ ಜನರಿಗೆ ಸೇರಬೇಕು. ಹೀಗಾಗಿ, ನೊಂದವರಿಗೆ ನಮ್ಮ ಸ್ಪಂದನೆ ಇದೆ. ಕೊಡಗಿನಲ್ಲಿ ನಿವೇಶನ, ನೀರು, ವಿದ್ಯುತ್‌ ಕಲ್ಪಿಸಿದರೆ ಮನೆ ನಿರ್ಮಿಸಲು ಆರ್ಥಿಕ ನೆರವು ನೀಡಲಾಗುವುದು’ ಎಂದರು.

ಮೈಸೂರು ಹೆಬ್ಬಾಳ ಕೆರೆ ಅಭಿವೃದ್ಧಿಗೆ ₹ 35 ಕೋಟಿ ವೆಚ್ಚ ಮಾಡಲಾಗಿದೆ. ಇನ್ನೂ ₹ 10–15 ಕೋಟಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಶಾಸಕರ ಗೈರು
ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ದಸರಾ ಉದ್ಘಾಟನೆಗೆ ಸಾಮಾನ್ಯವಾಗಿ ಎಲ್ಲ ಪಕ್ಷಗಳ ಶಾಸಕರು ಪಾಲ್ಗೊಳ್ಳುತ್ತಾರೆ. ಜೆಡಿಎಸ್– ಕಾಂಗ್ರೆಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರೂ ಕಾಂಗ್ರೆಸ್ ಶಾಸಕರು ಭಾಗವಹಿಸಲಿಲ್ಲ.

ಸಚಿವ ಪುಟ್ಟರಂಗಶೆಟ್ಟಿ, ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಕುಮಾರ್, ಸಂಸದ ಆರ್.ಧ್ರುವನಾರಾಯಣ ಅವರ ಗೈರು ಹಾಜರಿ ಎದ್ದು ಕಾಣುತಿತ್ತು. ಬಿಜೆಪಿ ಶಾಸಕರು, ಸಂಸದರು ಪಾಲ್ಗೊಂಡಿದ್ದರು. ‘ಸಮ್ಮಿಶ್ರ ಸರ್ಕಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಮೈತ್ರಿ ಧರ್ಮ ಪಾಲಿಸುತ್ತಿಲ್ಲ’ ಎಂದು ಈಚೆಗೆ ತನ್ವೀರ್ ಸೇಠ್ ವಾಗ್ದಾಳಿ ನಡೆಸಿದ್ದರು.

ಮಹಿಷಾ ದಸರೆಗೆ ವಿರೋಧ
‘ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಮಹಿಷಾ ದಸರಾ ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದು ಸರಿಯಲ್ಲ. ಇದನ್ನು ಸರ್ಕಾರ ತಡೆಯಬೇಕು’ ಎಂದು ಸಂಸದ ಪ್ರತಾಪ ಸಿಂಹ ಆಗ್ರಹಿಸಿದರು.

‘ಯದುವಂಶದ ಮಹಾರಾಜರಿಗೆ ತೊಂದರೆ ಉಂಟು ಮಾಡಿದ ಟಿಪ್ಪು ಸುಲ್ತಾನ್‌ ಜಯಂತಿಯನ್ನು ನಿಲ್ಲಿಸಬೇಕು’ ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !