ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ತ್ಯಾಜ್ಯ ವಿಲೇವಾರಿ: ಇರಲಿ ಎಚ್ಚರ

ಮೈಸೂರು ಮಹಾನಗರ ಪಾಲಿಕೆಯಿಂದ ಎಂಟು ಟನ್ ಇ–ತ್ಯಾಜ್ಯ ಸಂಗ್ರಹ, ವಿಲೇವಾರಿಯದ್ದೇ ಸಮಸ್ಯೆ
Last Updated 8 ಮಾರ್ಚ್ 2021, 5:29 IST
ಅಕ್ಷರ ಗಾತ್ರ

ಮೈಸೂರು: ಮನೆಯಲ್ಲಿ ಟ್ಯೂಬ್‌ಲೈಟ್‌, ಸಿಎಫ್‌ಎಲ್‌ ಬಲ್ಬ್‌, ರಿಮೋಟ್‌ ಹಾಗೂ ಬ್ಯಾಟರಿ ಸೇರಿದಂತೆಹಾಳಾದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಬಹಳಷ್ಟು ಮಂದಿ ಎಲ್ಲೆಂದರಲ್ಲಿ ಬಿಸಾಡುತ್ತಾರೆ ಅಥವಾ ಕಸದೊಂದಿಗೆ ಪಾಲಿಕೆ ವಾಹನಗಳಿಗೆ ಹಾಕುತ್ತಾರೆ. ಇದರಿಂದ ಪರಿಸರಕ್ಕೆ ಮಾರಕ ಆಗುವುದಲ್ಲದೇ ಮನುಷ್ಯನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

ಇ–ತ್ಯಾಜ್ಯದಲ್ಲಿರುವ ಅಪಾಯಕಾರಿ ರಾಸಾಯನಿಕಗಳು ವಾತಾವರಣ ಸೇರಿ ತಂದೊಡ್ಡುವ ಸಮಸ್ಯೆ ಅಷ್ಟಿಷ್ಟಲ್ಲ. ಇದನ್ನು ಮನಗಂಡು ಮೈಸೂರು ಮಹಾನಗರ ಪಾಲಿಕೆ ಕಳೆದ ವರ್ಷ ಸ್ವಚ್ಛ ಸರ್ವೇಕ್ಷಣ್‌ ಅಡಿ ‘ಇ ತ್ಯಾಜ್ಯದಿಂದ ನಮ್ಮ ನಡಿಗೆ ಹಸಿರು ಕಡೆಗೆ‌’ ಅಭಿಯಾನ ಆರಂಭಿಸಿತ್ತು. ಮನೆಗಳಲ್ಲಿ ಸಂಗ್ರಹವಾಗಿರುವ ಇ–ತ್ಯಾಜ್ಯವನ್ನು ನಿಗದಿತ ದಿನದಂದು ಪೌರ ಕಾರ್ಮಿಕರಿಗೆ ನೀಡಿ ಸಹಕರಿಸಬೇಕು ಎಂದು ಸಾರ್ವಜನಿಕರನ್ನು ಕೋರಿಕೊಂಡಿತ್ತು. ಆದರೆ, ಕೋವಿಡ್‌ ನಂತರ ಈ ಅಭಿಯಾನ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂಬುದು ಪರಿಸರವಾದಿ ಗಳು ಹಾಗೂ ಸಾರ್ವಜನಿಕರ ಆರೋಪ ವಾಗಿದೆ. ಪಾಲಿಕೆ ಅಧಿಕಾರಿಗಳು ಮಾತ್ರ, ‘ಯಾವುದೇ ಕಾರಣಕ್ಕೂ ಇ–ತ್ಯಾಜ್ಯ ಸಂಗ್ರಹ ನಿಲ್ಲಿಸಿಲ್ಲ’ ಎನ್ನುತ್ತಾರೆ.

ಎಂಟು ಟನ್ ಇ –ತ್ಯಾಜ್ಯ ಸಂಗ್ರಹ: ನಗರ ಪಾಲಿಕೆ ವತಿಯಿಂದ 65 ವಾರ್ಡ್‌ಗಳಲ್ಲೂ ಪ್ರತ್ಯೇಕವಾಗಿ ಇ–ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದ್ದು, ಕಳೆದ ಸೆಪ್ಟೆಂಬರ್ ತಿಂಗಳಿಂದ ಇಲ್ಲಿಯವರೆಗೆ ಸುಮಾರು ಎಂಟು ಟನ್ ಕಲೆಹಾಕಲಾಗಿದೆ.

‘ಪ್ರತಿ ತಿಂಗಳು 3ನೇ ಭಾನುವಾರ ಪೌರ ಕಾರ್ಮಿಕರು ಮನೆಮನೆಗೆ ಹೋಗಿ ಇ–ತ್ಯಾಜ್ಯ ಸಂಗ್ರಹಿಸುತ್ತಾರೆ. ಅದನ್ನು ಶೂನ್ಯ ತ್ಯಾಜ್ಯ ಘಟಕದಲ್ಲಿ ಇಟ್ಟಿದ್ದೇವೆ’ ಎಂದು ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ.ಜಿ.ನಾಗರಾಜ್‌ ತಿಳಿಸಿದರು.

‘ಮನೆಮನೆಯಿಂದ ಇ –ತ್ಯಾಜ್ಯ ಸಂಗ್ರಹ ಮಾಡೋದನ್ನು ನಿಲ್ಲಿಸಿಲ್ಲ. ಜನರಿಗೆ ಗೊತ್ತಾಗಲಿ ಎಂದೇ ಪ್ರತಿ ಮನೆಗಳ ಮುಂದೆ ಸ್ಟಿಕರ್ ಅಂಟಿಸಿದ್ದೇವೆ. ಸಾರ್ವಜನಿಕರು ಈ ಮುಂಚೆ ಎಲ್ಲೆಂದರಲ್ಲಿ ಇ– ತ್ಯಾಜ್ಯ ಬಿಸಾಡುತ್ತಿದ್ದರು. ಈಗ ಅರಿವು ಮೂಡಿದೆ, ಪೌರ ಕಾರ್ಮಿಕರಿಗೇ ನೀಡುತ್ತಾರೆ. ಸಂಗ್ರಹಿಸಿದ ಮೇಲೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರಮಾಣೀಕರಿಸಿದ ಏಜೆನ್ಸಿಗಳಿಗೆ ಹರಾಜು ಮೂಲಕ ನೀಡುತ್ತೇವೆ. ಅದು ವ್ಯವಸ್ಥಿತವಾಗಿ ವಿಲೇವಾರಿ ಆಗಬೇಕು, ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಮಾತ್ರ ಆ ಏಜೆನ್ಸಿಗಳು ಇರೋದು’ ಎಂದು ಅವರು ಮಾಹಿತಿ ನೀಡಿದರು.‌

‘ಇ– ತ್ಯಾಜ್ಯದಿಂದ ಆಗುವ ದುಷ್ಪರಿ ಣಾಮದ ಬಗ್ಗೆ ಅರಿವು ಮೂಡಿಸಲು ಸಂಘ, ಸಂಸ್ಥೆಗಳು, ಎನ್‌ಜಿಒಗಳು ಪಾಲಿಕೆಯೊಂದಿಗೆ ಕೈ ಜೋಡಿಸಲು ಮುಂದೆ ಬಂದಿವೆ’ ಎಂದು ಹೇಳಿದರು.

ಆರೋಗ್ಯದ ಮೇಲೆ ದುಷ್ಪರಿಣಾಮ: ರಿಮೋಟ್, ಎಲ್.ಇ.ಡಿ ಲೈಟ್, ಕಂಪ್ಯೂಟರ್ ಪಿ.ಸಿ.ಬಿಯಲ್ಲಿ (ಪ್ರಿಂಟೆಡ್‌ ಸರ್ಕ್ಯೂಟ್‌ ಬೊರ್ಡ್‌) ಅತ್ಯಲ್ಪ ಮಟ್ಟದ ಬೆಲೆಬಾಳುವ ಲೋಹ ಇರುತ್ತದೆ. ಆ ಲೋಹ ಪಡೆಯಲು ಅದನ್ನು ಸುಡುವ ಪ್ರವೃತ್ತಿಯೂ ಇದೆ. ವೈರ್‌ಗಳನ್ನು ಸುಟ್ಟು ಅದರಿಂದ ತಾಮ್ರ, ಅಲ್ಯೂಮಿನಿಯಂ ಅನ್ನು ಕೆಲವರು ಅವೈಜ್ಞಾನಿಕವಾಗಿ ತೆಗೆಯುತ್ತಾರೆ. ಆಗ ಅತ್ಯಧಿಕ ಪ್ರಮಾಣದ ವಾಯು ಮಾಲಿನ್ಯ ಆಗುತ್ತದೆ.

‘ಇ ತ್ಯಾಜ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಿಪೇರಿ ಮಾಡಿಸಲಾಗದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೆಲವರು ಕಸದೊಂದಿಗೆ ಎಸೆಯುತ್ತಾರೆ. ಟ್ಯೂಬ್‌ಲೈಟ್ ಒಳಗೆ ಮರ್ಕ್ಯುರಿ ವೇಪರ್ ಅನಿಲ ಇರುತ್ತದೆ. ಒಡೆದಾಗ ಅದು ಪರಿಸರದೊಂದಿಗೆ ಸೇರಿಕೊಂಡು, ಪರಿಸರಕ್ಕೂ, ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಳೆಯ ರಿಮೋಟ್‌ಗಳಲ್ಲಿ ‌ಎಲೆಕ್ಟ್ರಾನಿಕ್ ಬೋರ್ಡ್‌ಗಳಿರುತ್ತವೆ. ಇವುಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು’ ಎಂದು ವಿಜಯನಗರ, 4ನೇ ಹಂತದ ನಿವಾಸಿ ಸ್ವರೂಪ್ ಎಚ್ಚರಿಸುತ್ತಾರೆ.

‘ಯುಪಿಎಸ್‌ ಬ್ಯಾಟರಿಗಳಲ್ಲಿ ಸುಮಾರು 20 ಕೆ.ಜಿ ಸೀಸ ಇರುತ್ತದೆ. ಬಹಳಷ್ಟು ಜನ ಅನಧಿಕೃತ ವ್ಯಾಪಾರಿ ಗಳಿಗೆ ಕೊಡುತ್ತಾರೆ. ಅವರು ಅವೈಜ್ಞಾ ನಿಕವಾಗಿ ಸಲ್ಫರಿಕ್‌ ಆ್ಯಸಿಡ್‌ ಅನ್ನು ನೆಲಕ್ಕೆ ಅಥವಾ ಚರಂಡಿಗಳಿಗೆ ಸುರಿಯು ತ್ತಾರೆ. ಇದರಿಂದ ಭೂಮಿ, ಜಲ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಬಹಳ ಅಪಾಯ ಕಾರಿ ತ್ಯಾಜ್ಯವಿದು’ ಎನ್ನುತ್ತಾರೆ ಅವರು.

ಕೋವಿಡ್‌ನಿಂದ ತೊಡಕು: ‘ಕೈಗಾರಿಕೆ ಗಳು ಇ–ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳಿಗೇ ನೀಡುತ್ತಿವೆ. ಮೈಸೂರಿನಲ್ಲಿ ಇಂಥಮೂರು ಘಟಕಗಳಿವೆ (ಹೆಬ್ಬಾಳ 2, ಬನ್ನಿಮಂಟಪ 1 ). ವೈಜ್ಞಾನಿಕ ವಿಧಾನದಲ್ಲಿ ಅವರು ಸಂಸ್ಕರಣೆ ಮಾಡುತ್ತಾರೆ’ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಬಿ.ಎಂ.ಪ್ರಕಾಶ್‌ ಪ್ರತಿಕ್ರಿಯಿಸಿದರು.

‘ಇ–ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಜವಾಬ್ದಾರಿ ಮೈಸೂರು ಮಹಾನಗರ ಪಾಲಿಕೆಯದ್ದು. ಜನರಲ್ಲಿ ಅರಿವು ಮೂಡಿಸುವ ಬಗ್ಗೆ ಪಾಲಿಕೆ ಯವರಿಗೆ ಸಂಸ್ಥೆಯಿಂದ ಮಾರ್ಗದರ್ಶನ ನೀಡುತ್ತೇವೆ. ಕೋವಿಡ್‌ನಿಂದಾಗಿ ಸಮಾರಂಭಗಳನ್ನು ಮಾಡಲು ಆಗಲಿಲ್ಲ. ಶಾಸಕ ಎಸ್‌.ಎ.ರಾಮದಾಸ್‌ ಅವರು ವಾರದಲ್ಲಿ ಎರಡು ದಿನ ಇ–ತ್ಯಾಜ್ಯ ಸಂಗ್ರಹ, ಅರಿವು ಮೂಡಿಸಲುಕಳೆದ ವರ್ಷ ಅಭಿಯಾನ ಆರಂಭಿಸಿದ್ದರು. ಕೋವಿಡ್‌ನಿಂದ ಸ್ವಲ್ಪ ಅಡೆತಡೆಯಾಗಿರ ಬಹುದು’ ಎಂದು ಅವರು ಹೇಳಿದರು.

ಇ–ತ್ಯಾಜ್ಯ ಉತ್ಪತ್ತಿ ವೇಗಕ್ಕೂ ಕಡಿವಾಣ ಮುಖ್ಯ

ಇ- ತ್ಯಾಜ್ಯ ಉತ್ಪತ್ತಿಗೆ ಕಾರಣವನ್ನು ಅಧ್ಯಯನ ಮಾಡಿದಲ್ಲಿ ಅದನ್ನು ಮೂಲ ದಲ್ಲೇ ಒಂದಿಷ್ಟು ಕಡಿಮೆಗೊಳಿಸಬಹುದು. ಉಪಕರಣದ ಜೀವಿತಾವಧಿ ಮುಕ್ತಾಯ, ಬದಲಾಗುವ ತಂತ್ರಜ್ಞಾನ, ಹೊಸ ವಿನ್ಯಾಸದೆಡೆಗೆ ಆಸಕ್ತಿ, ಸೆಳೆಯುವ ಜಾಹೀರಾತು, ಅಕ್ಕಪಕ್ಕದವರೊಡನೆ ಹೋಲಿಕೆ ಇವೆಲ್ಲಾ ಹಾಲಿ ಇರುವ ಉತ್ಪನ್ನ ವ್ಯರ್ಥವಾಗಲು ಒಂದು ಕಾರಣ. ಸಕಾಲಕ್ಕೆ ಸರ್ವೀಸ್ ಸಿಗದಿರು ವುದು, ಹೆಚ್ಚಿರುವ ಸೇವಾ ವೆಚ್ಚ, ಬಿಡಿ ಭಾಗಗಳ ಅಲಭ್ಯತೆ ಇನ್ನೊಂದು ಕಾರಣ’ ಎಂದು ಇಂಧನ ಹಾಗೂ ಪರಿಸರ ಸಲಹೆಗಾರ ಅನಿಲ್ ಕುಮಾರ್ ನಾಡಿಗೇರ್ ಹೇಳುತ್ತಾರೆ.

ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ‌‘ಉಪಯೋಗಿಸಿ ಎಸೆಯುವ’ ಸಂಸ್ಕೃತಿ ಕ್ರಮೇಣ ಹೆಚ್ಚುತ್ತಿದೆ. ಚೀನಾ ಆಮದಿನ ಪ್ರಭಾವವಿದು. ಮಾರುವಾಗ ಸ್ಪರ್ಧಾತ್ಮಕವಾಗಿರುವ ದರ, ಸರ್ವೀಸ್ ವಿಚಾರಕ್ಕೆ ಬಂದಾಗ ಅವರನ್ನು ‘‌ಇನ್ನೂ ಸ್ವಲ್ಪ ಕೊಟ್ಟರೆ ಹೊಸದೇ ಬರುತ್ತದೆ’ ಎಂಬಂತಿರುತ್ತದೆ. ಇನ್ನೂ ಬೇಸರದ ಸಂಗತಿ ಎಂದರೆ ಅನೇಕ ಎಲೆಕ್ಟ್ರಾನಿಕ್ ಉಪಕರಣಗಳು ಸರ್ವೀಸ್ ಮಾಡಲು ಸಾಧ್ಯವಾಗದ ರೀತಿಯಲ್ಲಿ ವಿನ್ಯಾಸ ಹೊಂದಿರುತ್ತವೆ. ಇದರಿಂದ ಮಧ್ಯಮ ವರ್ಗದ ಜನರಿಗೆ ಅನಿವಾರ್ಯವಾಗಿ ಹೊಸದನ್ನು ಖರೀದಿಸುವಂತಾಗುತ್ತದೆ’ ಎನ್ನುತ್ತಾರೆ ಅವರು.

‘ಮಿಕ್ಸಿ, ಟಿ.ವಿ., ಮೈಕ್ರೊವೇವ್, ಫ್ಯಾನ್, ಏರ್ ಕಂಡೀಷನರ್, ಯುಪಿಎಸ್‌ ನಂಥ ಅನೇಕ ಉಪಕರಣಗಳಿಗೆ ಉತ್ತಮ ಸರ್ವಿಸ್ ಸಿಕ್ಕಲ್ಲಿ ಅವುಗಳ ಜೀವಿತಾ ವಧಿ ಹೆಚ್ಚುತ್ತದೆ. ಇಲ್ಲಿ ತಂತ್ರಜ್ಞರ ಕೊರತೆ ಕಾಣುತ್ತಿದೆ. ಸರ್ವಿಸ್ ಮೂಲಕ ಉಪಕರಣಗಳ ಜೀವಿತಾವಧಿ ಹೆಚ್ಚಳ ಹಾಗೂ ಮರುಬಳಕೆ; ಇವು ಇ –ತ್ಯಾಜ್ಯ ಉತ್ಪತ್ತಿಯ ವೇಗ ಕಡಿಮೆಗೊಳಿಸುತ್ತದೆ’ ಎಂದು ಅವರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT