ಬಡವರ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ

7

ಬಡವರ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ

Published:
Updated:
Deccan Herald

ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಮಸೂದೆ ಉತ್ತಮವಾಗೇ ಇದೆ. ಹಲವು ಕ್ರಾಂತಿಕಾರಕ ವಿಚಾರಗಳು ವೈದ್ಯಕೀಯ ಕ್ಷೇತ್ರದಲ್ಲಿ ಸುಧಾರಣೆ ತರುವಂತೆಯೂ ಇವೆ. ಆದರೆ, ಅದರಲ್ಲಿನ ಕೆಲವು ಅಂಶಗಳು ವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿವೆ ಎಂಬುದು ವೈದ್ಯರ ಆರೋಪ. ಈ ಕೆಲವು ಅಂಶಗಳನ್ನು ಹೊರತು‍ಪಡಿಸಿ ಮಸೂದೆ ಮಂಡಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ರಾಜ್ಯ ಸಮಿತಿ ಸದಸ್ಯ ಡಾ.ಎಸ್.ಪಿ.ಯೋಗಾನಂದ ‘ಪ್ರಜಾವಾಣಿ’ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಮಸೂದೆ ಹೇಗೆ ಮಾರಕ?

ವಾಸ್ತವದಲ್ಲಿ ಇದು ಒಳ್ಳೆಯ ಮಸೂದೆಯೇ. ಇದು ಸಾಕಷ್ಟು ಕ್ರಾಂತಿಕಾರಕವೂ ಆಗಿದೆ. ಆದರೆ, ಕೆಲವು ಅಂಶಗಳು ಮಾತ್ರ ಇಲ್ಲಿ ಮಾರಕವಾಗಿವೆ. ಈ ಅಂಶಗಳು ಮಸೂದೆಯ ಮೂಲ ಉದ್ದೇಶಕ್ಕೇ ಪೆಟ್ಟು ಕೊಡುತ್ತವೆ. ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕ ಹಾಗೂ ಸೀಟುಗಳನ್ನು ನಿಗದಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಅದನ್ನು ಕಿತ್ತುಕೊಂಡು ಕೇಂದ್ರ ಸರ್ಕಾರ ಏಕರೂಪ ಶುಲ್ಕವನ್ನು ದೇಶದಾದ್ಯಂತ ನಿಗದಿಪಡಿಸಲು ಮುಂದಾಗಿದೆ. ಇದರಿಂದಾಗುವ ಅನಾಹುತ ಬಹುದೊಡ್ಡದು.

ಹಣಕಾಸಿನ ಪರಿಸ್ಥಿತಿಯ ವಿಚಾರ ಬಂದಾಗ ಉತ್ತರ ಭಾರತದ ಗುಜರಾತಿಗೂ ಕರ್ನಾಟಕಕ್ಕೂ ಒಂದೇ ಮಾಡಲು ಸಾಧ್ಯವೇ? ನಮ್ಮ ಮಕ್ಕಳಿಗೆ ಶುಲ್ಕ ಭರಿಸಲು ಆಗದೇ ಪಡಿಪಾಟಲು ಅನುಭವಿಸುವಂತೆ ಆಗುತ್ತದೆ. ಅಲ್ಲದೇ, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಕಾಲೇಜುಗಳ ಆಡಳಿತ ಮಂಡಳಿಗಳು ತಮಗಿಷ್ಟ ಬಂದವರಿಗೆ, ಇಷ್ಟಬಂದಷ್ಟು ಶುಲ್ಕ ಪಡೆಯುವಂತೆ ಅವಕಾಶ ನೀಡಲಾಗಿದೆ. ಬಾಕಿ ಶೇ 50ರಷ್ಟು ಸೀಟುಗಳಿಗೆ ಮೀಸಲಾತಿ ನಿಯಮಗಳ ಪಾಲನೆಯಾಗಿಲ್ಲ. ಹೀಗಿರುವಾಗ ಇದು ಕೇವಲ ಶ್ರೀಮಂತರಿಗೆ ಕೆಂಪು ಹಾಸು ಹಾಕುವ ವ್ಯವಸ್ಥೆಯಾಗಿ ಮಾರ್ಪಡುತ್ತದೆ. ಮುಂಚೆ ಇದು ಕೇವಲ ಶೇ 15ರಷ್ಟಿತ್ತು.

ಇನ್ನೂ ಒಂದು ಸಮಸ್ಯೆ ಈ ಮಸೂದೆಯಲ್ಲಿದೆ. ಆಯುರ್ವೇದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು 6 ತಿಂಗಳು ಅಲೋಪತಿ ಶಿಕ್ಷಣ ಪಡೆದರೆ ಅಲೋಪತಿ ವೈದ್ಯರಿಗೆ ಸರಿಸಮಾನ ಎಂದು ಘೋಷಿಸುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ. ಇದರಿಂದ ಇಡೀ ವೈದ್ಯಕೀಯ ಕ್ಷೇತ್ರವೇ ತತ್ತರಿಸಿಹೋಗುವ ಅಪಾಯವಿದೆ. ಐದೂವರೆ ವರ್ಷ ಎಂಬಿಬಿಎಸ್‌ ಓದಿ, ನಂತರ 3 ವರ್ಷ ‘ಎಂ.ಡಿ’ ಮಾಡಿ, ನಂತರ ‘ಡಿ.ಎಂ’ ಓದಿರುವ ಅಲೋಪತಿ ವೈದ್ಯರೇ ಗುಣಮಟ್ಟದ ಕಾರ್ಯಕ್ಷಮತೆ ನೀಡುತ್ತಿಲ್ಲ. ಇನ್ನು ಆಯುರ್ವೇದದವರು ನಮ್ಮ ಜತೆ ಕುಳಿತರೆ ರೋಗಿಗಳನ್ನು ಕೊಂದೇ ಬಿಡುತ್ತಾರೆ. ಆಗ ಜನರು ಬೈಯುವುದು ಅಂತಿಮವಾಗಿ ಅಲೋಪತಿ ವೈದ್ಯರನ್ನೇ.

ರಾಜ್ಯ ಸರ್ಕಾರಗಳು ಈ ಮಸೂದೆಗೆ ಒಪ್ಪಿಗೆ ಕೊಡುತ್ತವೆಯೇ ಮತ್ತು ಏಕೆ ವಿರೋಧಿಸುತ್ತಿಲ್ಲ?

ಈ ಮಸೂದೆಯಿಂದ ರಾಜ್ಯ ಸರ್ಕಾರಗಳಿಗೆ ನ್ಯಾಯ ಸಿಗುವುದಿಲ್ಲ. ಸರ್ಕಾರದ ಬೊಕ್ಕಸಕ್ಕೆ ಹಣ ಬರುವ ಬದಲು ಖಾಸಗಿ ಸಂಸ್ಥೆಗಳಿಗೆ ಹಣ ಹೋಗುತ್ತದೆ. ಅಲ್ಲದೇ, ಇಡೀ ರಾಷ್ಟ್ರಕ್ಕೆ ಒಂದೇ ಶುಲ್ಕ ಮಾದರಿ ನಿಗದಿಪಡಿಸಿದರೆ ರಾಜ್ಯಕ್ಕೆ ಅನ್ಯಾಯವಾಗುತ್ತದೆ. ಇದರ ಹಿಂದೆ ರಾಜಕಾರಣಿಗಳ ಸ್ವ ಹಿತಾಸಕ್ತಿ ಇದೆ. ತಾವೂ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿ ಹಣ ದೋಚುವ ಹುನ್ನಾರ ಇದೆ. ಈಗಾಗಲೇ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ರಾಜಕಾರಣಿಗಳಿಗೂ ಅನುಕೂಲವಾಗುತ್ತದೆ. ರಾಜ್ಯ ಸರ್ಕಾರದ ಸ್ವಾಯತ್ತತೆಯನ್ನೇ ಕಿತ್ತುಕೊಂಡಂತೆ ಅಲ್ಲವೇ ಇದು? ರಾಜಕಾರಣಿಗಳಿಗೆ ಸಮಾಜದ ಹಿತಬೇಕಿಲ್ಲ.

ರಾಷ್ಟ್ರೀಯ ವೈದ್ಯಕೀಯ ಮಂಡಳಿಗಳಿಗೆ ವೈದ್ಯರನ್ನು ಚುನಾಯಿಸುವ ಪದ್ಧತಿ ರದ್ದುಗೊಳಿಸಿರುವುದು ಏಕೆ? ಇದರಿಂದ ವೈದ್ಯರ ಹಿತಾಸಕ್ತಿಗೆ ತೊಂದರೆಯಾಗುವುದಿಲ್ಲವೇ?

ಮಸೂದೆಯಲ್ಲಿನ ಈ ಅಂಶವಂತೂ ಅಪಾಯಕಾರಿಯಾಗಿದೆ. ಈಗ ಭಾರತೀಯ ವೈದ್ಯಕೀಯ ಸಮಿತಿಗೆ ಪ್ರತಿ ರಾಜ್ಯದಿಂದ ಇಬ್ಬರು ವೈದ್ಯ ಪ್ರತಿನಿಧಿಗಳು ಚುನಾಯಿತರಾಗಿ ಹೋಗುವ ಪದ್ಧತಿ ಇದೆ. ಈಗ ಸಮಿತಿಯನ್ನೇ ರದ್ದುಗೊಳಿಸಿ, ರಾಷ್ಟ್ರೀಯ ವೈದ್ಯಕೀಯ ಮಂಡಳಿಗಳಿಗೆ ವೈದ್ಯರನ್ನು ನಾಮ ನಿರ್ದೇಶನ ಮಾಡುವ ವ್ಯವಸ್ಥೆ ಬರುತ್ತಿದೆ. ಇದಕ್ಕೆ ನೀಡಿರುವ ಕಾರಣ, ಚುನಾಯಿತಗೊಳ್ಳುವ ವೈದ್ಯರು ಭ್ರಷ್ಟರಾಗುತ್ತಾರೆ ಎನ್ನುವುದು. ಹಾಗಾದರೆ, ನಾಮನಿರ್ದೇಶನಗೊಳ್ಳುವ ವೈದ್ಯರು ಭ್ರಷ್ಟಗೊಳ್ಳುವುದಿಲ್ಲವೇ? ಇದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲವೇ?

ಮಸೂದೆ ಸಿದ್ಧಪಡಿಸಿದ ಸಮಿತಿಯಲ್ಲಿ ವೈದ್ಯರ ಪ್ರತಿನಿಧಿಗಳು ಇರಲಿಲ್ಲವೇ?

ಸಾಮಾಜಿಕ ಚಿಂತನೆ ಇರುವ ವೈದ್ಯರು ಕಡಿಮೆಯಾಗುತ್ತಿರುವುದರ ಲಕ್ಷಣ ಇದು. ಹಣ ಮಾಡುವುದೇ ವೈದ್ಯರ ಉದ್ದೇಶವಾಗುತ್ತಿದೆ ಎಂಬ ಆತಂಕ ನನಗೂ ಕಾಡುತ್ತಿದೆ. ಅಲ್ಲದೇ, ಈ ಮಸೂದೆಯ ವಿಚಾರಕ್ಕೆ ಬರುವುದಾದರೆ ಮಸೂದೆ ರಚನೆಗಾಗಿ ಜಂಟಿ ಸಂಸದೀಯ ಸಮಿತಿ ರಚನೆಯಾಗಿತ್ತು. ಅದರ ಸದಸ್ಯರೆಲ್ಲರೂ ಸಂಸದರು. ಆ ಸಂಸದರಿಗೆ ಸಲಹೆ ನೀಡಲು ವೈದ್ಯರನ್ನು ಕೋರಲಾಗಿತ್ತು. ಆದರೆ, ಆ ವೈದ್ಯರು ಸಮಿತಿ ಸದಸ್ಯರಾಗಿರಲಿಲ್ಲ. ಈ ಮಸೂದೆಯಲ್ಲಿನ ಕೆಲವು ಮಾರಕ ಅಂಶಗಳನ್ನು ತೆಗೆಯುವಂತೆ ಹಲವು ವೈದ್ಯರು ಕೋರಿದ್ದಾರೆ. ಆದರೆ, ಯಾರೂ ಅದಕ್ಕೆ ಬೆಲೆ ಕೊಟ್ಟಿಲ್ಲ.

ಮಸೂದೆಯನ್ನು ಸಡಿಲಗೊಳಿಸಿದರೆ ನಿಮ್ಮ ಒಪ್ಪಿಗೆ ಇದೆಯೇ? ಇಲ್ಲವಾದರೆ ವೈದ್ಯರ ಹೋರಾಟದ ಮುಂದಿನ ಹೆಜ್ಜೆಯೇನು?

ಈ ಮಾರಕ ಅಂಶ ತೆಗೆದರೆ ನಮ್ಮ ಒಪ್ಪಿಗೆ ಇದೆ. ಹಾಗೊಂದು ಪಕ್ಷ ಸರ್ಕಾರವು ಒಪ್ಪದೇ ಇದ್ದಲ್ಲಿ ನಾವೇನು ಮಾಡಲು ಸಾಧ್ಯ? ಏಕೆಂದರೆ, ಸಂಸದರಾಗಲಿ, ಮಾಧ್ಯಮದವರಿಗಾಗಲಿ ಇದರ ಬಗ್ಗೆ ಆಸಕ್ತಿ ಇಲ್ಲ. ಇದಕ್ಕಾಗಿಯೇ ನಾವು ಪ್ರತಿಭಟನೆ ಮಾಡಿದೆವು. ಖಾಸಗಿ ಕ್ಲಿನಿಕ್, ಆಸ್ಪತ್ರೆ ಹೊರರೋಗಿಗಳ ವಿಭಾಗವನ್ನು ಒಂದು ದಿನ ಮುಚ್ಚಿದೆವು. ನಾವಿನ್ನೇನು ಮಾಡಲು ಸಾಧ್ಯ. ರಾಜಕಾರಣಿಗಳಿಗೆ ಹಣ ಮಾಡಲು ಸುಲಭ ಮಾರ್ಗ. ಹಾಗಾಗಿಯೇ, ನಮಗೆ ಬೆಂಬಲ ಕೊಡುತ್ತಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !