ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಕಾಲಿಕ ಸತ್ಯದ ಬಗ್ಗೆ ಮಾತನಾಡುವವರು ಶಾಶ್ವತವಾಗಿ ಉಳಿಯುತ್ತಾರೆ: ಕರಜಗಿ

Last Updated 24 ಜುಲೈ 2022, 7:46 IST
ಅಕ್ಷರ ಗಾತ್ರ

ಮೈಸೂರು: ‘ಸಾರ್ವಕಾಲಿಕ ಸತ್ಯದ ಬಗ್ಗೆ ಮಾತನಾಡುವವರು ಶಾಶ್ವತವಾಗಿ ಉಳಿಯುತ್ತಾರೆ’ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಪ್ರತಿಪಾದಿಸಿದರು.

ಇಲ್ಲಿನ ಡಿವಿಜಿ ಬಳಗ ಪ್ರತಿಷ್ಠಾನದಿಂದ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಡಿವಿಜಿ ಪ್ರಶಸ್ತಿ–2022’ ಸ್ವೀಕರಿಸಿ ಅವರು ಮಾತನಾಡಿದರು.

‘ನಾವು ಮಾಡುವ ಕಾರ್ಯದಿಂದ ಸಾವನ್ನು ಗೆಲ್ಲಬಹುದು. ಸುಖವಿರಲಿ–ದುಃಖವಿರಲಿ, ಜಯವಿರಲಿ–ಅಪಜಯವಿರಲಿ ದಿನ‌ಗಳು ಕಳೆದಂತೆ ಘಟನೆಗಳ‌‌ ತೀವ್ರತೆ ಕಡಿಮೆಯಾಗುತ್ತಾ ಹೋಗುತ್ತದೆ. ಪ್ರೀತಿ ಪಾತ್ರರನ್ನು ಕಳೆದುಕೊಂಡರೂ ಮರೆತು ಬದುಕುತ್ತೇವೆ. ಇದೇ‌ ಪ್ರಕೃತಿ. ಆದರೆ, ಕೆಲವು ವಿಷಯಗಳು, ವ್ಯಕ್ತಿಗಳು, ಚಿಂತನೆಗಳು, ಪುಸ್ತಕಗಳು ಮೊದಲಾದವುಗಳು ಮಾತ್ರ ದಿನ‌ಗಳು ಕಳೆದಂತೆ ಹೆಚ್ಚು ಪ್ರಖರವಾಗುತ್ತಾ ಹೋಗುತ್ತವೆ. ಸ್ವಾಮಿ ವಿವೇಕಾನಂದ, ಡಿವಿಜಿ ಕಗ್ಗಗಳು, ಭಗವದ್ಗೀತೆ ಮೊದಲಾದವು ಅದಕ್ಕೆ ಉದಾಹರಣೆಗಳಾಗಿವೆ. ಭಗವದ್ಗೀತೆಯನ್ನು ಸುಟ್ಟರೂ ಏನೂ ಆಗುವುದಿಲ್ಲ. ಅದನ್ನು ಹಿಂದೆಂದಿಗಿಂತಲೂ ಈಗ ಹೆಚ್ಚಿನವರು ಓದುತ್ತಿದ್ದಾರೆ’ ಎಂದು ತಿಳಿಸಿದರು.

ದೊಡ್ಡವರೊಂದಿಗೆ ಬದುಕುವುದು ಕಷ್ಟ:ಡಿವಿಜಿ ಅವರೊಂದಿಗಿನ ಒಡನಾಟ ನೆನೆದ ಅವರು, ‘ದೊಡ್ಡವರ ಸಂಪರ್ಕ-ದರ್ಶನಕ್ಕೆ ದೇವರ ಕೃಪೆ ಬೇಕು. ಆ ಕೃಪೆ ನನಗಾಯಿತು. ದ.ರಾ.ಬೇಂದ್ರ, ಡಿಜಿವಿ, ರಾಜರತ್ನಂ ಅವರಂತಹ ದಿಗ್ಗಜರ ಒಡನಾಟ ದೊರೆಯಿತು. ಅವರಿಂದ ಬಹಳಷ್ಟು ಕಲಿತೆ. ಶ್ರೀರಾಮ, ಮಹಾತ್ಮ ಗಾಂಧಿಯಂತಹ ದೊಡ್ಡವರ ಮಾತುಗಳನ್ನು ಕೇಳುವುದು ಸುಲಭ. ಆದರೆ, ಅವರೊಂದಿಗೆ ಬದುಕುವುದು ಕಷ್ಟ’ ಎಂದು ಹೇಳಿದರು.

‘ಯಾವುದಾದರೂ ವಸ್ತುವಿನ ಮಹತ್ವ ತಿಳಿಯಬೇಕಾದರೆ ಕೊಂಚವಾದರೂ ಅಂತರ ಬೇಕಾಗುತ್ತದೆ. ಕಣ್ಣಿನ ಮುಂದೆ ಬೆರಳು ಇಟ್ಟುಕೊಂಡರೆ ಮುಂದಿರುವ ದೊಡ್ಡ ಬೆಟ್ಟವೂ ಕಾಣುವುದಿಲ್ಲ’ ಎಂದು ವ್ಯಾಖ್ಯಾನಿಸಿದರು.

ವಿದೇಶಗಳಲ್ಲೂ ನೆನೆಯುತ್ತಾರೆ:‘ಮಿದುಳಿಗೆ ಹೋಗುವುದು ಹೆಚ್ಚು ನೆನಪಿನಲ್ಲಿ ಉಳಿಯದು. ಹೃದಯಕ್ಕೆ ಹೋಗುವುದನ್ನು ನೆನಪಿಸಿಕೊಳ್ಳುವ ಅಗತ್ಯವಿಲ್ಲ. ಮನಸ್ಸಿನಲ್ಲಿ ಅದು ಸದಾ ಉಳಿಯುತ್ತದೆ. ಅಂತೆಯೇ, ಯಾವ ಚೈತನ್ಯವು ಹತ್ತಾರು ಮುಖಗಳಲ್ಲಿ ‌ವಿಜೃಂಭಿಸುತ್ತದೆಯೋ ಅದು ಶಾಶ್ವತವಾಗಿ ಉಳಿಯುತ್ತದೆ. ಅದಕ್ಕೆ ‌ಡಿವಿಜಿ‌ ನಿದರ್ಶನವಾಗಿದ್ದಾರೆ. ಈಗಲೂ ಅವರನ್ನು ವಿದೇಶಗಳಲ್ಲೂ ನೆನೆಯುತ್ತಾರೆ. ಅವರ ಕಗ್ಗಗಳನ್ನು ಓದುತ್ತಾರೆ. ಜನಪ್ರತಿನಿಧಿಗಳು ಕೂಡ ಕಗ್ಗಗಳನ್ನು ತಮ್ಮ ಭಾಷಣಗಳಲ್ಲಿ ಅದರಲ್ಲೂ ವಿಧಾನಮಂಡಲ ಅಧಿವೇಶನದಲ್ಲಿ ಉಲ್ಲೇಖಿಸುತ್ತಾರೆ. ಈ ರೂಪದಲ್ಲಿ ಡಿವಿಜಿ ಉಳಿದಿದ್ದಾರೆ’ ಎಂದು ನೆನೆದರು.

‘ಡಿವಿಜಿ ಸಮಾಜ ಸೇವೆಯಲ್ಲಿ ತೊಡಗಿದ್ದರು. ವಿಧವಾ ವಿವಾಹ ಮಾಡಿಸುತ್ತಿದ್ದರು. ಧರ್ಮದ ಬಗೆಗಿರುವ ಹುಚ್ಚು‌ ನಂಬಿಕೆಗಳು ತಪ್ಪು ಎಂದು ಹೇಳುತ್ತಿದ್ದರು. ಆತ್ಮಾಭಿಮಾನ ಮತ್ತು ಹಣ ಗಳಿಕೆ ವಿಷಯದಲ್ಲಿ ಗೊಂದಲ ಉಂಟಾದರೆ ಅತ್ಮಾಭಿಮಾನಕ್ಕೆ ಆದ್ಯತೆ ಕೊಡಬೇಕು. ಡಿವಿಜಿ ಅವರ ಜೀವನವು ಸಾಹಿತ್ಯಕ್ಕಿಂತಲೂ ದೊಡ್ಡದಾಗಿತ್ತು. ಹೀಗಾಗಿ ಅವರು ಇನ್ನೂ ‌ಉಳಿದುಕೊಂಡಿದ್ದಾರೆ’ ಎಂದರು.

ಪ್ರಶಸ್ತಿ ‍ಪ್ರದಾನ ಮಾಡಿದ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌, ‘ಡಿವಿಜಿ ಅವರ ಕಗ್ಗಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಪ್ರತಿಭಾಶಾಲಿಗಳಲ್ಲಿ ಪ್ರಮುಖರು. ಸಾಹಿತ್ಯದ ಅಶ್ವತ್ಥವೃಕ್ಷವಾದ ಅವರ ಸೇವೆ ಅಪಾರವಾದುದು. ವಿದ್ವತ್ತು-ರಸಿಕತೆಯ ಅವರ ಸಾಹಿತ್ಯ ಬಾಳಿಗೊಂದು‌ ನಂಬಿಕೆ ನೀಡುತ್ತದೆ. ಕರಜಗಿ ಅವರು ನಿತ್ಯ ಜ್ಞಾನ ದಾಸೋಹಿ’ ಎಂದು ಬಣ್ಣಿಸಿದರು.

ಪ್ರತಿಷ್ಠಾನದ ಸಂಚಾಲಕ ಕನಕರಾಜು ಸಿ. ಮತ್ತು ವಿದ್ವಾನ್ ಜಿ.ಎಸ್.ನಟೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT