ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಈದ್‌ –ಉಲ್‌– ಫಿತ್ರ್‌ ಸಂಭ್ರಮ

ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು; ಹಬ್ಬಕ್ಕೆ ಸಕಲ ಸಿದ್ಧತೆ
Last Updated 16 ಜೂನ್ 2018, 6:07 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯದರು ಶನಿವಾರ ಈದ್‌– ಉಲ್– ಫಿತ್ರ್‌ ಹಬ್ಬವನ್ನು ಸಡಗರದಿಂದ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ರಂಜಾನ್ ತಿಂಗಳ ಕೊನೆಯಲ್ಲಿ ಚಂದ್ರ ದರ್ಶನ ಆದ ಮರುದಿನ ಈ ಹಬ್ಬವನ್ನು ಆಚರಿಸುವುದು ವಾಡಿಕೆ. ರಾಜ್ಯದ ಕರಾವಳಿ ಭಾಗದ ಮುಸ್ಲಿಮರು ಶುಕ್ರವಾರವೇ ಈದ್‌ ಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿ ಶನಿವಾರ ಹಬ್ಬದ ಆಚರಣೆ ನಡೆಯಲಿದೆ. ಹಬ್ಬದ ಅಂಗವಾಗಿ, ಜಿಲ್ಲೆಯಾದ್ಯಂತ ಈದ್ಗಾ ಮೈದಾನಗಳು, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ನಡೆಯಲಿವೆ.

ಸಕಲ ಸಿದ್ಧತೆ: ಮುಸ್ಲಿಮರ ಪ್ರತಿ ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಜಿಲ್ಲೆಯಾದ್ಯಂತ ಶನಿವಾರದ ಸಾಮೂಹಿಕ ಪ್ರಾರ್ಥನೆಗಾಗಿ ಸಿದ್ಧತೆಗಳು ನಡೆದಿವೆ. ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆಯೂ ಜೋರಾಗಿದೆ. ಬಟ್ಟೆ, ಬಳೆಗಳ ಅಂಗಡಿಗಳಲ್ಲಿ ಜನಸಂದಣಿ ಕಂಡು ಬಂತು.

ಹಾಲಿಗೆ ಬೇಡಿಕೆ: ಈ ಹಬ್ಬದಂದು ‘ಶೀರ್‌ ಖುರ್ಮಾ’ (ಶಾವಿಗೆ ಪಾಯಸ) ಎಂಬ ಭಕ್ಷ್ಯವನ್ನು ತಯಾರಿಸಲಾಗುತ್ತದೆ. ಇದನ್ನು ಹಾಲಿನಿಂದ ಮಾಡಲಾಗುತ್ತದೆ. ಹಾಗಾಗಿ, ಹಾಲಿಗೆ ಹೆಚ್ಚಿಕೆ ಬೇಡಿಕೆ ಇರುತ್ತದೆ.

ಎಲ್ಲರೂ ಒಂದೇ: ‘ಇದು ದಾನದ ಹಬ್ಬ. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂಬ ತತ್ವವನ್ನು ಇದು ಪ್ರತಿಪಾದಿಸುತ್ತದೆ’ ಎಂದು ಹಬ್ಬದ ಆಚರಣೆ ಮಹತ್ವವನ್ನು ವಿವರಿಸಿದರು ಚಾಮರಾಜನಗರದ ಮದೀನಾ ಮಸೀದಿಯ ಧರ್ಮಗುರು ಸೈಯದ್‌ ಮುಖ್ತಾರ್.

‘ಸ್ಥಿತಿವಂತರು ಈ ಹಬ್ಬದ ಸಂದರ್ಭದಲ್ಲಿ ನಿರ್ಗತಿಕರಿಗೆ, ಬಡವರಿಗೆ ದಾನ ಮಾಡಬೇಕು. ಬಟ್ಟೆ ಇಲ್ಲದವರಿಗೆ ಹೊಸ ಬಟ್ಟೆ ಕೊಡಿಸಬೇಕು. ಕೈಯಲ್ಲಿ ಒಂದು ಲಕ್ಷ ರೂಪಾಯಿ ಇದ್ದರೆ, ಅದರಲ್ಲಿ ₹2,500 ದಾನ ಮಾಡಬೇಕು’ ಎಂದು ಅವರು ವಿವರಿಸಿದರು.

‘ಈ ಸಂದರ್ಭದಲ್ಲಿ ಯಾರನ್ನೂ ಭೇದಭಾವದಿಂದ ಕಾಣುವಂತಿಲ್ಲ. ಸಾಮೂಹಿಕ ಪ್ರಾರ್ಥನೆಯ ಸಂದರ್ಭದಲ್ಲಿ ಸಿರಿವಂತ ವ್ಯಕ್ತಿಯ ಬಳಿಯಲ್ಲಿ ಬಡವನೋ ಇಲ್ಲಾ ಭಿಕ್ಷುಕನೋ ನಿಂತರೆ, ಆತನನ್ನು ಯಾವುದೇ ಕಾರಣಕ್ಕೂ ದೂರ ತಳ್ಳುವಂತಿಲ್ಲ. ಸಚಿವರೇ ಬರಲಿ, ಅಧಿಕಾರಿ ಇರಲಿ... ಪ್ರತಿಯೊಬ್ಬರೂ ಒಂದೇ ಎಂಬ ಭಾವನೆಯಿಂದ ಪ್ರಾರ್ಥನೆ ನಡೆಸಬೇಕು’ ಎಂದು ಅವರು ಹೇಳಿದರು.

ಪ್ರಾರ್ಥನೆಗೆ ಮಹತ್ವ

ಈದ್‌ ಉಲ್‌ ಫಿತ್ರ್‌ನಲ್ಲಿ ಸಾಮಾಹಿಕ ಪ್ರಾರ್ಥನೆಗೆ ತುಂಬಾ ಮಹತ್ವವಿದೆ. ಪಟ್ಟಣದಲ್ಲಿ ಎರಡು ಈದ್ಗಾ ಮೈದಾನಗಳಲ್ಲಿ ಮತ್ತು ಮಸೀದಿಗಳಲ್ಲಿ ಪ್ರಾರ್ಥನೆ ನಡೆಯಲಿದೆ.‌

‘ಕ್ರೀಡಾಂಗಣದ ಸಮೀಪ ಇರುವ ದೊಡ್ಡ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಸಾವಿರಾರು ಜನ ಇಲ್ಲಿ ಸೇರಲಿದ್ದಾರೆ. ಸೋಮವಾರಪೇಟೆ ಬಳಿಯ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 8.30ಗೆ ಪ್ರಾರ್ಥನೆ ನಡೆಯಲಿದೆ’ ಎಂದು ಸೈಯದ್‌ ಮುಖ್ತಾರ್‌ ಹೇಳಿದರು.

ಉಳಿದಂತೆ, ಅಶಕ್ತರು ಮತ್ತು ಈದ್ಗಾ ಮೈದಾನಕ್ಕೆ ಬರಲು ಸಾಧ್ಯವಾಗದವರಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ವ್ಯವಸ್ಥೆ ಇದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT