ಬುಧವಾರ, ಏಪ್ರಿಲ್ 8, 2020
19 °C
ಸರ್ಕಾರ ಬದಲಾಯ್ತೇ ವಿನಾಃ ಸಮಸ್ಯೆ ಬಗೆಹರಿಯಲಿಲ್ಲ; ಕಗ್ಗತ್ತಲು ತಪ್ಪಲಿಲ್ಲ

ಸಚಿವರ ಸೂಚನೆಗೂ ಕಿಮ್ಮತ್ತಿಲ್ಲ;ವಿದ್ಯುತ್ ದೀಪ ಬೆಳಗಲಿಲ್ಲ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಜುಲೈ ಒಂದರಿಂದ ರಿಂಗ್‌ ರೋಡ್‌ನ ಬೀದಿ ದೀಪಗಳು ಬೆಳಗಬೇಕು. ಮೈಸೂರು ನಗರ ಸೇರಿದಂತೆ ಹೊರ ವಲಯದಲ್ಲಿರುವ ಬೀದಿ ದೀಪಗಳು ಸಹ ರಾತ್ರಿ ವೇಳೆ ಬೆಳಕು ಚೆಲ್ಲಬೇಕು...’

‘ಬೀದಿ ದೀಪ ದುರಸ್ತಿಗೆ ಸಂಬಂಧಿಸಿ ದಂತೆ ಮೈಸೂರು ಮಹಾನಗರ ಪಾಲಿಕೆ ಆಡಳಿತ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆಡಳಿತ ಮಂಡಳಿ ಹಗ್ಗ ಜಗ್ಗಾಟ ನಡೆಸದೆ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಹಾಳಾಗಿರುವ ಬೀದಿ ದೀಪಗಳ ದುರಸ್ತಿಯನ್ನು ಸಮವಾಗಿ ನಿಭಾಯಿಸಬೇಕು...’

‘ಬೀದಿ ದೀಪಗಳ ವಿದ್ಯುತ್‌ ಬಿಲ್ಲನ್ನು ಸಮ ಪ್ರಮಾಣದಲ್ಲಿ ‘ಸೆಸ್ಕ್‌’ಗೆ ಪಾವತಿ ಸಬೇಕು. ಬೀದಿ ದೀಪದ ಸಮಸ್ಯೆ ಇನ್ಮುಂದೆ ಕಾಡಬಾರದು. ಬಿಗಡಾಯಿಸಬಾರದು. ಸರ್ಕಾರದ ಹಂತದಲ್ಲಿ ಮಂಜೂರಾಗು ವುದಿದ್ದರೆ ಹೇಳಿ. ನಾನೇ ಖುದ್ದು ಬಗೆಹರಿಸಿಕೊಡುವೆ...’

ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜೂನ್‌ 20ರಂದು ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಪಾಲಿಕೆ, ‘ಮುಡಾ’ ಅಧಿಕಾರಿಗಳಿಗೆ ನೀಡಿದ್ದ ಖಡಕ್ ಸೂಚನೆಯಿದು.

ಸಚಿವರು ಹತ್ತು ದಿನಗಳೊಳಗೆ ಸಮಸ್ಯೆ ಬಗೆಹರಿಸಿ ಎಂದು ಸಭೆಯಲ್ಲಿ ಆದೇಶಿಸಿ ದ್ದರು. ಸಭೆ ನಡೆದು ತಿಂಗಳು ಗತಿಸಿತು. ಈ ಅವಧಿಯಲ್ಲಿ ಸರ್ಕಾರವೂ ಉರುಳಿತು... ಆದರೆ, ಜಿಲ್ಲಾ ಉಸ್ತುವಾರಿ ಸಚಿವರ ಆದೇಶಕ್ಕೆ ಮಾತ್ರ ಯಥಾಪ್ರಕಾರ ಪಾಲಿಕೆ, ಮುಡಾ ಆಡಳಿತ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ. ಇದರಿಂದ ಮೈಸೂರು ನಗರ ದಿನದಿಂದ ದಿನಕ್ಕೆ ಕತ್ತಲೆಗೆ ತಳ್ಳಲ್ಪಡುತ್ತಿದೆ. ಬೀದಿಗಳಲ್ಲಿ ರಾತ್ರಿ ವೇಳೆ ಬೀದಿದೀಪಗಳ ಬೆಳಕು ಮೂಡದಾಗಿದೆ ಎಂಬ ಆಕ್ರೋಶ, ಅಸಮಾಧಾನ ಮೈಸೂರಿಗರದ್ದಾಗಿದೆ.

ಕಡತದಲ್ಲೇ ಸೂಚನೆ; ವಿಳಂಬ ಧೋರಣೆ: ಸಚಿವರ ಆದೇಶ, ಸೂಚನೆ ಯಾವ ಹಂತ ದಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂಬುದರ ಕುರಿತಂತೆ ‘ಪ್ರಜಾವಾಣಿ’ ಮಾಹಿತಿ ಸಂಗ್ರ ಹಿಸಿದಾಗ, ಕಡತದಲ್ಲೇ ಉಳಿದಿದೆ ಎಂಬುದು ಗೊತ್ತಾಗಿದೆ. ವಿಳಂಬ ಧೋರಣೆ ಕಂಡು ಬಂದಿದೆ. ಇದನ್ನು ಅಧಿಕಾರಿ ವಲಯವೇ ಖಚಿತಪಡಿಸಿದೆ.

‘ರಿಂಗ್ ರಸ್ತೆಯ ಬೀದಿ ದೀಪಗಳ ಬಗ್ಗೆ ಸಾಕಷ್ಟು ದೂರಿವೆ. ಇದು ಪುನರಾ ವರ್ತನೆಯಾಗದಂತೆ ಮುಡಾ ಕ್ರಮ ಕೈಗೊಳ್ಳಬೇಕು. ಹಾಳಾಗಿರುವ ಬೀದಿ ದೀಪಗಳನ್ನು ಬದಲಿಸುವ ಜತೆ, ಸಮರ್ಪಕ ವಾಗಿರುವವನ್ನು ಮತ್ತೊಮ್ಮೆ ಪರಿಶೀಲಿಸಿ, ಅಗತ್ಯವಿದ್ದರೆ ಹೊಸ ದೀಪಗಳನ್ನು ಅಳವಡಿಸಿ, ಪಾಲಿಕೆಗೆ ಹಸ್ತಾಂತರಿಸಬೇಕು’ ಎಂದು ಜಿ.ಟಿ.ದೇವೇಗೌಡ ಸಭೆಯಲ್ಲಿ ಸೂಚಿಸಿದ್ದರು. ಇದಕ್ಕೆ ಮುಡಾ ಆಯುಕ್ತ, ಪಾಲಿಕೆ ಆಯುಕ್ತರು ಸಮ್ಮತಿಸಿದ್ದರು. ಆದರೆ ಬರೋಬ್ಬರಿ ತಿಂಗಳು ಗತಿಸಿದರೂ ಈ ಬೀದಿ ದೀಪಗಳ ದುರಸ್ತಿ ನಡೆದಿಲ್ಲ ಎಂಬುದು ಬೆಳಕಿಗೆ ಬಂದಿದೆ.

‘ಇನ್ನೂ ನಗರ ವ್ಯಾಪ್ತಿಯಲ್ಲಿ ಮುಡಾ ದಿಂದ ಪಾಲಿಕೆಗೆ ಹಸ್ತಾಂತರಗೊಂಡ ಹಲವು ಬಡಾವಣೆಗಳಲ್ಲಿ ಬೀದಿ ದೀಪ ಅಳವಡಿಸಿಲ್ಲ. ಇದನ್ನು ಮುಡಾವೇ ಮಾಡಿ ಕೊಡಬೇಕು ಎಂಬ ಸಚಿವರ ಸೂಚನೆ ನನೆಗುದಿದೆ ಬಿದ್ದಿದೆ. 100ಕ್ಕೆ 100ರಷ್ಟು ಸರಿಪಡಿಸಿಕೊಡದ ಹೊರತು ಪಾಲಿಕೆ ಇವುಗಳ ನಿರ್ವಹಣೆ ಹೊಣೆ ಹೊರಲ್ಲ. ಇದರ ಜತೆಗೆ ವಿದ್ಯುತ್‌ ಶುಲ್ಕ ಪಾವತಿಯ ವಿಷಯವೂ ಇಂದಿಗೂ ಇತ್ಯರ್ಥಗೊಂಡಿಲ್ಲ. ಈ ಎಲ್ಲವೂ ಮುಡಾದ ಕಡತಗಳಲ್ಲೇ ಉಳಿದಿವೆ. ಪಾಲಿಕೆಗೆ ಯಾವೊಂದು ಅನುಷ್ಠಾನಕ್ಕಾಗಿ ಬಂದಿಲ್ಲ’ ಎಂದು ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಸಚಿವರ ಸೂಚನೆಯಂತೆ ರಿಂಗ್‌ ರೋಡ್‌ನ ಬೀದಿದೀಪ ದುರಸ್ತಿಗೆ ಈಗಾಗಲೇ ಕ್ರಮ ತೆಗೆದುಕೊಂಡಿದೆ. ₹ 30 ಲಕ್ಷದಿಂದ ₹ 32 ಲಕ್ಷದ ಅಂದಾಜು ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಿ, ಐದು ಪ್ಯಾಕೇಜ್‌ನಲ್ಲಿ ಟೆಂಡರ್‌ ಕರೆದು, ಗುತ್ತಿಗೆದಾರರಿಗೆ ಕೆಲಸ ವಹಿಸಿಕೊಡಲಾಗಿದೆ’ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಿ.ಎಸ್.ಕಾಂತರಾಜು ಹೇಳಿದರು.

‘ಬೀದಿ ದೀಪಗಳ ವಿದ್ಯುತ್‌ ಶುಲ್ಕವನ್ನು ಪಾಲಿಕೆ ಜತೆ ಸಮ ನಾಗಿ ಪಾವತಿಸುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾ ವನೆಯೊಂದನ್ನು ಕಳುಹಿಸಿ ಕೊಡಲಾಗಿದೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಯಾವ ಸೂಚನೆ ಬರಲಿದೆ ಅದನ್ನು ಪಾಲಿಸಲಾಗುವುದು’ ಎಂದು ಅವರು ತಿಳಿಸಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಹಾಳಾಗಿರುವ ಬೀದಿ ದೀಪಗಳ ದುರಸ್ತಿಗಾಗಿ 26 ಪ್ಯಾಕೇಜ್‌ನಲ್ಲಿ ಟೆಂಡರ್‌ ಕರೆದು, ಏಳೆಂಟು ಗುತ್ತಿಗೆದಾರರಿಗೆ ಕೆಲಸ ವಹಿಸಿಕೊಡ ಲಾಗಿದೆ. ಆದಷ್ಟು ಬೇಗ ದುರಸ್ತಿಗೊಳಿಸಿ, ಸಮಸ್ಯೆಗೆ ಇತಿಶ್ರೀ ಹಾಡಲಾಗುವುದು’ ಎಂದು ಪಾಲಿಕೆಯ ವಿದ್ಯುತ್‌ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾಗೇಶ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)