ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀಣಿಸುತ್ತಿರುವ ಸಂಶೋಧನೆಗೆ ಉತ್ತೇಜನ

ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿ ಸಭೆಯಲ್ಲಿ ನಿರ್ಧಾರ
Last Updated 16 ಸೆಪ್ಟೆಂಬರ್ 2019, 14:04 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಕ್ಷೀಣಿಸುತ್ತಿರುವ ಸಂಶೋಧನೆಗೆ ಉತ್ತೇಜನ ನೀಡಲಿಕ್ಕಾಗಿಯೇ ವಿ.ವಿ.ಯ ಶಿಕ್ಷಣ ಮಂಡಳಿ ಸೋಮವಾರ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿತು.

ವಿಷಯ ಪ್ರಸ್ತಾಪಿಸಿದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌, ‘ಸಂಶೋಧನೆ ನಡೆಸಲಿಕ್ಕಾಗಿಯೇ ವಿಜ್ಞಾನ ಭವನಕ್ಕೆ 20 ಸಂಶೋಧನಾ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳೋಣ. ತಲಾ ₹ 12,000 ಫೆಲೋಶಿಪ್‌ ಕೊಡೋಣ’ ಎನ್ನುತ್ತಿದ್ದಂತೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.

ಸಂಶೋಧನಾ ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಹಾಸ್ಟೆಲ್‌ ನಿರ್ಮಿಸುವ ಪ್ರಸ್ತಾಪಕ್ಕೂ ಸಭೆ ಸಮ್ಮತಿ ನೀಡಿತು.

ದೂರಶಿಕ್ಷಣ ಕೇಂದ್ರ ಈಗಾಗಲೇ ವಿ.ವಿ.ಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕಾಗಿಯೇ ಪ್ರತ್ಯೇಕ ಮಂಡಳಿ ರಚನೆ, ಇಗ್ನೋ ನಿಯಮಾವಳಿ ಅಳವಡಿಕೆ, ಜೈವಿಕ ತಂತ್ರಜ್ಞಾನ, ಕನ್ನಡ ವಿಭಾಗ, ಕಂಪ್ಯೂಟರ್ ಸೈನ್ಸ್ ವಿಭಾಗಗಳಿಗೆ ಹೆಚ್ಚುವರಿ ಬೋಧನಾ ಕೊಠಡಿ ಕಲ್ಪಿಸುವುದು, ಮೈಸೂರು ವಿ.ವಿ.ಯ ಇತಿಹಾಸ ಬಿಂಬಿಸಲು ಮ್ಯೂಸಿಯಂ ಆರಂಭಿಸುವ ಪ್ರಸ್ತಾವನೆಗಳಿಗೆ ಸಭೆ ಅನುಮೋದನೆ ನೀಡಿತು.

ಪ್ರೊ.ಜಿ.ನಾಗೇಂದ್ರಪ್ಪ ವಿರೋಧದ ನಡುವೆಯೂ ಮುಂದಿನ ಶಿಕ್ಷಣ ಮಂಡಳಿ ಸಭೆಯಿಂದ ಡಿಜಿಟಲೀಕರಣ ನಡೆಸುವುದಕ್ಕೂ ಸಭೆ ಒಪ್ಪಿಗೆ ಸೂಚಿಸಿತು.

ತಕರಾರು: ವಿ.ವಿ.ಯಲ್ಲಿ ಈಗಾಗಲೇ ಆರಂಭವಾಗಿರುವ ಬಿ.ಕಾಂ–ಎಲ್‍ಎಲ್‍ಬಿ ಐದು ವರ್ಷಗಳ ಇಂಟಿಗ್ರೇಟೆಡ್ ಕೋರ್ಸ್‌ಗೆ ಸಂಬಂಧಿಸಿದ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಇದಕ್ಕೆ ಹಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಪ್ರೊ.ಜಿ.ನಾಗೇಂದ್ರಪ್ಪ ಮಾತನಾಡಿ ಕೋರ್ಸ್‌ ಬಗ್ಗೆ ಸಮಗ್ರ ಮಾಹಿತಿ ಒದಗಿಸುವಂತೆ ಆಗ್ರಹಿಸಿದರು. ವಿರೋಧವನ್ನು ವ್ಯಕ್ತಪಡಿಸಿದರು. ವಿ.ವಿ. ಕಾನೂನು ಶಾಲೆಯ ಡೀನ್ ಸಿ.ಬಸವರಾಜು ಆಕ್ಷೇಪಕ್ಕೆ ಸಂಬಂಧಿಸಿದಂತೆ ಸಭೆಗೆ ಮಾಹಿತಿ ಒದಗಿಸಿದರು. ಬೋಧನಾ ಸಿಬ್ಬಂದಿ ಬಗ್ಗೆ ಸರ್ಕಾರದಿಂದಲೇ ಸೂಕ್ತ ಮಾಹಿತಿ ಪಡೆಯೋಣ ಎನ್ನುವ ಮೂಲಕ ಕುಲಪತಿ ಚರ್ಚೆಗೆ ತೆರೆ ಎಳೆದರು.

ವಿ.ವಿ.ಆರಂಭಿಸಿರುವ ಮೂಕ್ಸ್ ಕೋರ್ಸ್‍ಗಳೆಡೆಗೆ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಈ ಕೋರ್ಸ್‍ಗೆ ‘ತಳಿಶಾಸ್ತ್ರ ನೀತಿಗಳು ಮತ್ತು ಮಾನವ ತಳಿಶಾಸ್ತ್ರ' ಪಠ್ಯಕ್ರಮ ಸಿದ್ಧಪಡಿಸಿದ್ದು, ಸ್ನಾತಕ ಕೋರ್ಸ್‍ಗಳಿಗೆ ಅಳವಡಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ಬಿ.ಇಡಿ ಪ್ರವೇಶ ಸಂಖ್ಯೆ ಹೆಚ್ಚಳಕ್ಕೆ ಆಕ್ಷೇಪ

ಮಂಡ್ಯದ ಸೆಂಟ್ ಜೋಸೆಫ್ ಕಾಲೇಜ್ ಆಫ್ ಟೀಚರ್ಸ್ ಎಜುಕೇಷನ್, ಎಇಟಿ ಕಾಲೇಜ್ ಆಫ್ ಎಜುಕೇಷನ್, ಮಾಂಡವ್ಯ ಕಾಲೇಜ್ ಆಫ್ ಎಜುಕೇಷನ್ ಕಾಲೇಜುಗಳಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಕಾರಣಕ್ಕೂ 50 ವಿದ್ಯಾರ್ಥಿಗಳ ಬದಲಿಗೆ 100 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕೊಡಬಾರದು.

ಇದು ಎಲ್ಲಾ ಕಾಲೇಜುಗಳಿಗೂ ಅನ್ವಯವಾಗಬೇಕು. ಅನುಮತಿ ಪಡೆಯುವ ಕಾಲೇಜು ಕಡ್ಡಾಯವಾಗಿ ಎರಡು ತರಗತಿ, ಸಂಖ್ಯೆಗನುಗುಣವಾದ ಬೋಧನಾ ಸಿಬ್ಬಂದಿ ಹೊಂದಬೇಕು. ಈ ಬಗ್ಗೆ ವಿ.ವಿ. ಹದ್ದಿನ ಕಣ್ಗಾವಲಿಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಪ್ರವೇಶಾತಿ ಹೆಚ್ಚಳಕ್ಕೆ ವಿರೋಧ

ಬಿಎಸ್‌ಸಿ ಅಗ್ರಿ ವಿ.ವಿ.ಯ ವ್ಯಾಪ್ತಿಗೆ ಒಳಪಡಲ್ಲ. ಚನ್ನಪಟ್ಟಣದ ಕೃಷಿ ಕಾಲೇಜೊಂದು ನಮ್ಮಲ್ಲಿಗೆ ಸಂಯೋಜನೆ ಮಾಡಿಕೊಂಡು ಪ್ರತಿ ವರ್ಷವೂ 100 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಮೂಲಕ ಶುಲ್ಕದ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದೆ ಎಂದು ಸಭೆಯಲ್ಲಿ ಕೆಲ ಸದಸ್ಯರು ದೂರಿದರು.

ಸಿಂಡಿಕೇಟ್‌, ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿಯ ಅನುಮತಿಯಿಲ್ಲದೆ ಇಂತಹ ಕೃತ್ಯ ನಡೆಯುತ್ತಿವೆ. ಕುಲಪತಿ ಕಠಿಣ ಕ್ರಮ ಜರುಗಿಸಬೇಕು ಎಂದು ಸದಸ್ಯರು ಆಗ್ರಹಿಸಿದ್ದಕ್ಕೆ, ಹೇಮಂತ್‌ಕುಮಾರ್ ಮುಂದಿನ ವರ್ಷ ಸಮಸ್ಯೆ ಪರಿಹರಿಸುವೆ. ತಂಡವೊಂದನ್ನು ರಚಿಸಿ ಇದಕ್ಕೆ ಕಡಿವಾಣ ಹಾಕುವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT