ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ | ಒತ್ತುವರಿ ತೆರವು; 146 ಕೆರೆಗಳಿಗೆ ಹರಿದ ಜಲಸಿರಿ

ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 146 ಕೆರೆಗಳಿಗೆ ಹರಿದ ಜಲಸಿರಿ
Last Updated 22 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಮೈಸೂರು: ಹುಣಸೂರು ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿಗಿಂತ ಸಂಪೂರ್ಣ ಭಿನ್ನವಾದ ಸಮಸ್ಯೆ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿತ್ತು. ಬಹುತೇಕ ಕೆರೆಗಳು ಒತ್ತುವರಿಯಾಗಿ, ಕೆರೆಗಳ ವಿಸ್ತೀರ್ಣ ದಿನೇದಿನೇ ಕುಗ್ಗುತ್ತಿತ್ತು. ಜತೆಗೆ, ಒತ್ತುವರಿದಾರರು ಕೆರೆಯಲ್ಲಿ ನೀರು ನಿಲ್ಲದಂತೆ ಮಾಡುವ ಮೂಲಕ ಮತ್ತಷ್ಟು ಒತ್ತುವರಿಗೆ ಕೈಹಾಕಿದ್ದರು.

ಈ ಸಮಸ್ಯೆಯನ್ನು ಮನಗಂಡ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಮೊದಲು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು. ಭಾರಿ ಪ್ರತಿರೋಧ ವ್ಯಕ್ತವಾದರೂ ಲೆಕ್ಕಿಸದೆ ಸುಮಾರು 67 ಕೆರೆಗಳ ಒತ್ತುವರಿ ತೆರವುಗೊಳಿಸಲಾಯಿತು. ಬರೋಬ್ಬರಿ 78 ಎಕರೆ ಕೆರೆ ಪ್ರದೇಶ ಜಿಲ್ಲಾ ಪಂಚಾಯಿತಿಯ ವಶವಾಯಿತು.

ನಂತರ, ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ₹ 12 ಕೋಟಿಯಷ್ಟು ಹಣವನ್ನು 146 ಕೆರೆಗಳ ಅಭಿವೃದ್ಧಿಗೆ ಮೀಸಲಿಟ್ಟು, ಕೆಲಸ ಆರಂಭಿಸಲಾಯಿತು. ₹ 7.5 ಕೋಟಿ ಅನುದಾನ ಖರ್ಚಾಗುವ ಹೊತ್ತಿಗೆ ಶೇ 90ರಷ್ಟು ಕೆರೆಗಳಲ್ಲಿ ನೀರು ಬಂದು, ಯಶಸ್ಸು ಲಭಿಸಿದೆ.

ಒತ್ತುವರಿಯಿಂದಾಗಿ ತಮ್ಮ ಮೂಲಸ್ವರೂಪವನ್ನೇ ಕಳೆದುಕೊಂಡಿದ್ದ ಕೆಂಪಿಕೆರೆ, ಹೊಲಗಟ್ಟೆ, ಜಿ.ಬಸವನಹಳ್ಳಿ ಕೆರೆ, ಜೋಗನಹಳ್ಳಿ ಕೆರೆ, ತಂದ್ರಗುಡಿಕೊಪ್ಪಲಿನ ಕೆರೆ,ಜಾತಕದ ಕಟ್ಟೆ ಸೇರಿದಂತೆ 67 ಕೆರೆಗಳು ಈಗ ನಳನಳಿಸುತ್ತಿವೆ.

ಪ್ರಮುಖವಾಗಿ ಕೆರೆಯ ಹೂಳೆತ್ತಿ, ಏರಿಯನ್ನು ಭದ್ರಪಡಿಸುವುದರ ಜತೆಗೆ ಸೋಪಾನಕಟ್ಟೆ, ರಿವಿಟ್‌ಮೆಂಟ್, ಕ್ಯಾಟಲ್ ರ‍್ಯಾಂಪ್, ಕೋಡಿ ನಿರ್ಮಾಣ, ಪೈಪ್ ಮತ್ತು ಡಕ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಏರಿಯ ಸುತ್ತ ಜೀವ ವೈವಿಧ್ಯ ಪ್ರೋತ್ಸಾಹಕ ಸಸ್ಯಗಳನ್ನು ನೆಡುತ್ತಿರುವುದು ಮತ್ತೊಂದು ವಿಶೇಷ.

ಕಂಪಲಾಪುರ ಪಂಚಾಯಿತಿಯ ಹೊಲಕಟ್ಟೆ ಮತ್ತು ಕೆಂಪಿಕೆರೆಯಲ್ಲಿ ತುಂಬಿದ್ದ ಅಗಾಧ ಪ್ರಮಾಣದ ಹೂಳನ್ನು ತೆಗೆಯಲು ತಲಾ ₹ 5 ಲಕ್ಷ ಬಳಕೆ ಮಾಡಲಾಯಿತು. ರಾಮನಾಥತುಂಗ ಗ್ರಾಮ ಪಂಚಾಯಿತಿಯ ದೊಡ್ಡವಡ್ಡಕೇರಿ ಗ್ರಾಮದ ನೆರಲೆಕಟ್ಟೆಯಲ್ಲಿ ತುಂಬಿದ್ದ ಹೂಳನ್ನು ಎತ್ತಿಸಲು ₹ 10 ಲಕ್ಷ ವ್ಯಯಿಸಲಾಯಿತು. ಇದೇ ಬಗೆಯಲ್ಲಿ ಎಲ್ಲ 146 ಕೆರೆಗಳ ಹೂಳೆತ್ತಿದ್ದರಿಂದ ಕೃಷಿಕಾರ್ಮಿಕರಿಗೆ ಉದ್ಯೋಗವೂ ಲಭಿಸಿತು. ತಾತ್ಕಾಲಿಕವಾಗಿ ಅವರ ವಲಸೆಯನ್ನು ತಡೆಯುವಲ್ಲಿ ನರೇಗಾ ಯಶಸ್ವಿಯಾಯಿತು.

ಅಭಿವೃದ್ಧಿಗೊಂಡ ಕೆರೆಗಳ ಪೈಕಿ ಶೇ 90ರಷ್ಟು ಕೆರೆಗಳಲ್ಲಿ ಈಗ ನೀರು ತುಂಬಿದೆ. ಕಂಪಲಾಪುರ, ಹಾರನಹಳ್ಳಿ ಸೇರಿದಂತೆ ಅನೇಕ ಭಾಗಗಳಲ್ಲಿದ್ದ ಕೊಳವೆಬಾವಿಗಳಲ್ಲಿ ನೀರು ಉಕ್ಕಿದೆ. ಹಕ್ಕಿಗಳಿಗೆ, ಪ್ರಾಣಿಗಳಿಗೆ ಕುಡಿಯುವುದಕ್ಕೆ ಕೆರೆಗಳ ನೀರು ಸಹಕಾರಿಯಾಗಿದೆ.

‘ಕೆರೆಗಳೆಲ್ಲವೂ ತುಂಬಿದ್ದು, ಈ ಬಾರಿ ಬೇಸಿಗೆ ಹೊತ್ತಿಗೆ ಬತ್ತಿ ಹೋಗುವ ಸಾಧ್ಯತೆ ಕಡಿಮೆ. ಸಾಕಷ್ಟು ಕೆರೆಗಳನ್ನು ಅಭಿವೃದ್ಧಿಪಡಿಸಿದ್ದು, ಪುನಶ್ಚೇತನಗೊಂಡಿವೆ’ ಎಂದು ಮಾಲೇಗೌಡನಕೊಪ್ಪಲುವಿನ ಲಕ್ಷ್ಮಣೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಪಿರಿಯಾಪಟ್ಟಣ ಕೆರೆ ಅಭಿವೃದ್ಧಿ ನೋಟ

ಗ್ರಾಮ ಪಂಚಾಯಿತಿ 34

ಅಭಿವೃದ್ಧಿಯಾದ ಕೆರೆಗಳು 146

ಹಣ ವಿನಿಯೋಗದ ಗುರಿ ₹ 12 ಕೋಟಿ

ಖರ್ಚು ಮಾಡಲಾದ ಹಣ ₹ 7.5 ಕೋಟಿ

ಒಟ್ಟು ಮಾನವ ದಿನ 1.34 ಲಕ್ಷ

ಒತ್ತುವರಿ ತೆರವು 78 ಎಕರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT