ದ್ವೇಷಮುಕ್ತ ಸಮಾಜ ನಿರ್ಮಾಣವಾಗಲಿ

7
ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ

ದ್ವೇಷಮುಕ್ತ ಸಮಾಜ ನಿರ್ಮಾಣವಾಗಲಿ

Published:
Updated:
Deccan Herald

ಮೈಸೂರು: ಪರಸ್ಪರ ಭಿನ್ನಾಭಿಪ್ರಾಯಗಳನ್ನು ಮರೆತು ದ್ವೇಷಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಜತೆಯಾಗೋಣ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಕರೆ ನೀಡಿದರು.

ಜಿಲ್ಲಾಡಳಿತ ವತಿಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಆಶಯದಲ್ಲಿ ಜಾತ್ಯತೀತ ಪರಿಕಲ್ಪನೆ ಸಾಕಾರಗೊಳ್ಳಬೇಕು. ಆಹಾರ, ವಸತಿ ಮತ್ತು ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ತಲುಪುವಂತಾಗಬೇಕು ಎಂದು ಹೇಳಿದರು.

ಸ್ವಾತಂತ್ರ್ಯ ಪಡೆದು ಏಳು ದಶಕಗಳು ಕಳೆದರೂ ದೇಶದಲ್ಲಿ ಇಂದು ಅಜ್ಞಾನ, ಅನರಕ್ಷತೆ, ಮೂಡನಂಬಿಕೆಯಂತಹ ಸಮಸ್ಯೆಗಳು ಉಳಿದುಕೊಂಡಿವೆ. ಈ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲಂತಹ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು.

ವಿಶ್ವದ ಬಲಾಢ್ಯ ರಾಷ್ಟ್ರಗಳಲ್ಲಿ ಒಂದಾಗಿ ರೂಪುಗೊಂಡಿರುವ ದೇಶವನ್ನು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಇನ್ನಷ್ಟು ಶ್ರೀಮಂತಗೊಳಿಸಬೇಕು. ಆಂತರಿಕ ಒಗ್ಗಟ್ಟನ್ನು ಕಾಪಾಡಿಕೊಂಡು ಎಲ್ಲ ರಂಗಗಳಲ್ಲೂ ದೇಶ ಸ್ವಾವಲಂಬಿಯಾಗುವಂತೆ ಯೋಜನೆ ರೂಪಿಸಬೇಕು ಎಂದು ಕರೆ ನೀಡಿದರು.

ಯುವ ಶಕ್ತಿಯನ್ನು ಬಳಸಿಕೊಂಡು ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಸಾಧನೆಗಳನ್ನು ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಮಹಿಳೆಯರು, ಶೋಷಿತ ವರ್ಗದವರ ಪರವಾಗಿರುವ ಸುಂದರ ಭಾರತ ರೂಪುಗೊಳ್ಳಬೇಕು. ಅಬಲರು ಪ್ರಬಲರಾಗಬೇಕು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತೊಡಗಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಶಾಸಕರಾದ ತನ್ವೀರ್‌ ಸೇಠ್‌, ಎಲ್‌.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್, ಎಸ್ಪಿ ಅಮಿತ್‌ ಸಿಂಗ್‌, ನಗರ ಪೊಲೀಸ್‌ ಆಯುಕ್ತ ಡಾ.ಎ.ಎಸ್‌.ಸುಬ್ರಮಣ್ಯೇಶ್ವರರಾವ್, ಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನಾ, ಮೇಯರ್ ಬಿ.ಭಾಗ್ಯವತಿ, ಉಪಮೇಯರ್ ಇಂದಿರಾ ಮಹೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾ ಅಮರನಾಥ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !