ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರಕೂಟರ ಅವಧಿ ಧಾರ್ಮಿಕ ಸಹಿಷ್ಣತೆಯ ಕಾಲ’

ರಾಷ್ಟ್ರಕೂಟ ಉತ್ಸವದಲ್ಲಿ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಅಭಿಮತ
Last Updated 5 ಮಾರ್ಚ್ 2018, 10:04 IST
ಅಕ್ಷರ ಗಾತ್ರ

ಸೇಡಂ: ‘8-9ನೇ ಶತಮಾನದಲ್ಲಿ ಆಡಳಿತ ಮಾಡಿದ ರಾಷ್ಟ್ರಕೂಟರು ಶಿವನ ಆರಾಧಕರಾಗಿದ್ದರೂ ಅನೇಕ ದೇಗುಲಗಳನ್ನು ನಿರ್ಮಿಸಿ ಅನ್ಯಧರ್ಮವನ್ನು ಪ್ರೋತ್ಸಾಹಿಸಿದ್ದರು’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಲಖೇಡದಲ್ಲಿ ಭಾನುವಾರ ನಡೆದ ರಾಷ್ಟ್ರಕೂಟ ಉತ್ಸವದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಅವರ ಆಡಳಿತದ ಅವಧಿಯಲ್ಲಿ ಮುಸ್ಲಿಮರಿಗೆ, ಜೈನರಿಗೆ, ಶೈವರಿಗೆ ಸೇರಿದಂತೆ ಇನ್ನಿತರ ಕವಿಗಳಿಗೆ ಆಶ್ರಯ ನೀಡಲಾಗಿತ್ತು. ಪಂಪ, ರನ್ನ, ಪೊನ್ನ, ಶಿವಕೋಟಾಚಾರ್ಯ ಮತ್ತು ಕವಿರಾಜ ಮಾರ್ಗ ಕೃತಿ ರಚಿಸಿ ಶ್ರೀವಿಜಯ ರಾಷ್ಟ್ರಕೂಟರ ಆಡಳಿತದಲ್ಲಿ ಆಶ್ರಯ ಪಡೆದಿದ್ದರು. ಹಿಂದೂ, ಜೈನ, ಇಸ್ಲಾಂ ಸೇರಿದಂತೆ ಇನ್ನಿತರ ಧರ್ಮಗಳನ್ನು ಬೆಳೆಸಿದ್ದರು. ಸೇಡಂ, ಮಳಖೇಡನಲ್ಲಿ ಅನೇಕ ಜೈನ ಬಸಿದಿಗಳನ್ನು ರಾಷ್ಟ್ರಕೂಟರು ನಿರ್ಮಿಸಿದ್ದಾರೆ. ಅನೇಕ ಶಿಲಾಶಾಸನಗಳಲ್ಲಿ ಧರ್ಮ ಮತ್ತು ಆಡಳಿತದ ಕುರಿತು ಕಾಣಬಹುದಾಗಿದೆ’ ಎಂದರು.

‘ರಾಷ್ಟ್ರಕೂಟರ ಆಡಳಿತದಲ್ಲಿ ವೀರ ಉಸ್ಮಾನ ಹಿಂದೂ-ಮುಸ್ಲಿಂ ಕುರಿತು ಧಾರ್ಮಿಕ ಏಕತೆಯನ್ನು ಪ್ರತಿಪಾದಿಸಿದ್ದಾರೆ. ಅಮೋಘವರ್ಷ ನೃಪತುಂಗನ ಆಡಳಿತದಲ್ಲಿ ರಾಜ್ಯ ಬರಗಾಲದಲ್ಲಿದ್ದಾಗ ಕೊಲ್ಲಾಪುರದ ಮಹಾಲಕ್ಷ್ಮಿಗೆ ಕಿರಿಬೆರಳನ್ನೇ ನೀಡಿ ಜಾತಿ, ಧರ್ಮಾತೀತತೆಯಿಂದ ಮೆರೆದಿದ್ದಾರೆ. ಇಂತಹ ರಾಜರು, ಕವಿಗಳು, ಇಂದಿನ ಜನಪ್ರತಿನಿಧಿಗಳಿಗೆ ಹಾಗೂ ಯುವಕರಿಗೆ ಮಾರ್ಗದರ್ಶನವಾಗಬೇಕಿದೆ’ ಎಂದು ತಿಳಿಸಿದರು.

ಪ್ರಾಧ್ಯಾಪಕ ಆರ್.ಎಂ.ಷಡಕ್ಷರಯ್ಯ ಮಾತನಾಡಿ, ‘ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಲಾದ ಜೈನ ಬಸಿದಿಗಳು, ಕೋಟೆಗಳು, ಸ್ಮಾರಕಗಳು ಹಾಗೂ ಶಿಲಾಶಾಸನಗಳು ಧರ್ಮದ ಕುರಿತು ಉಲ್ಲೇಖಿಸಿವೆ. ಅವರು ಪ್ರತಿಯೊಂದರ ಕುರಿತು ಬರೆದು, ನಿರ್ಮಿಸಿದ್ದಾರೆ. ಮಳಖೇಡ ಕೋಟೆಯಲ್ಲದೆ, ಕೊಂಕನಳ್ಳಿ, ನೀಲಹಳ್ಳಿ, ದಂಡೋತಿ ಅವರ ಸಾಮ್ರಾಜ್ಯ ವಿಸ್ತರಣೆಯಯಾಗಿತ್ತು’ ಎಂದರು.

ಪ್ರಾಧ್ಯಾಪಕಿ ಮಂಜುಳಾ ಚಿಂಚೋಳಿ ತಮ್ಮ ಆಶಯ ನುಡಿಗಳಲ್ಲಿ ‘ರಾಷ್ಟ್ರಕೂಟರ ಆಡಳಿತದಲ್ಲಿ ಕೇವಲ ರಾಜರುಗಳೇ ಮಾತ್ರ ಆಡಳಿತ ಮಾಡಿರಲಿಲ್ಲ. ರಾಣಿಯರು ಕೂಡ ಆಡಳಿತ ನಡೆಸಿದ್ದರು. ಅಮೋಘವರ್ಷ ನೃಪತುಂಗ ರಾಜನ ಪುತ್ರಿ ಚಂದ್ರಮಬ್ಬೆ ರಾಜ್ಯ ವಿಸ್ತರಣೆಯಲ್ಲಿ ತೊಡಗಿದ್ದಳು’ ಎಂದು ತಿಳಿಸಿದರು.
ಶಂಕರ ಹೂಗಾರ ವಚನಗಾಯನ ಪ್ರಸ್ತುತ ಪಡಿಸಿದರು. ಎಂ.ಬಿ.ಕಟ್ಟಿ ನಿರೂಪಿಸಿದರು.

**

ಮಳಖೇಡವನ್ನು ತಮ್ಮ ರಾಜಧಾನಿಯನ್ನಾಗಿ ಆಡಳಿತ ಮಾಡಿಕೊಂಡಿದ್ದ ರಾಷ್ಟ್ರಕೂಟರು ಶಿವನ ಆರಾಧಕರಾಗಿದ್ದರೂ ಸಹ ಜೈನ ಮಂದಿರಗಳನ್ನು ನಿರ್ಮಿಸಿ ಧಾರ್ಮಿಕ ಸಹಿಷ್ಣುತೆಯಿಂದ ಮೆರೆದಿದ್ದಾರೆ.
-ಅಪ್ಪಗೆರೆ ಸೋಮಶೇಖರ, ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT