ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಸ್ವಾವಲಂಬನೆಗೆ ರೈತ ಕಾರಣ: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ

‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಪ್ರದರ್ಶನ
Last Updated 19 ಡಿಸೆಂಬರ್ 2021, 13:27 IST
ಅಕ್ಷರ ಗಾತ್ರ

ಮೈಸೂರು: ‘ದೇಶದಲ್ಲಿ ಆಹಾರ ಸ್ವಾವಲಂಬನೆ ಸಾಧಿಸಲು ರೈತರು ಕಾರಣ. ರೈತನಿಲ್ಲದೆ ದೇಶದ ಉಳಿಗಾಲವಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ತಿಳಿಸಿದರು.

ನೆಲೆ ಹಿನ್ನೆಲೆ ಸಂಸ್ಥೆಯು ನಗರದ ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರ ನಿರ್ದೇಶಕ ಕೇಸರಿ ಹರವೂ ಅವರ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಪ್ರದರ್ಶನದಲ್ಲಿ ಮಾತನಾಡಿದರು.

‘ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ಒಂದು ವರ್ಷ 2 ತಿಂಗಳು ಹೋರಾಟ ನಡೆಸಿದ್ದರು. ಇದರಲ್ಲಿ 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಈ ಪ್ರತಿಭಟನೆಯನ್ನು ನೋಡಲು ನಾನೂ ದೆಹಲಿಗೆ ಹೋಗಿದ್ದೆ. ಇಂತಹ ಮಹತ್ವದ ಹೋರಾಟದ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಿರುವುದು ಶ್ಲಾಘನೀಯ ಕೆಲಸ’ ಎಂದರು.

‘ದೇಶದಲ್ಲಿ ತಲೆದೋರಿದ್ದ ಆಹಾರದ ಕೊರತೆಯನ್ನು ನೀಗಿಸಲು ವಿಜ್ಞಾನಿಗಳು ವಿವಿಧ ತಳಿಗಳನ್ನು ಕಂಡು ಹಿಡಿದರು. ರೈತರು ಅಗತ್ಯ ಆಹಾರ ಧಾನ್ಯಗಳನ್ನು ಬೆಳೆಯಲು ಆರಂಭಿಸಿದ್ದರಿಂದ ಇಂದು ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ’ ಎಂದು ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್‌.ಶಿವಪ್ಪ ಮಾತನಾಡಿ, ‘ಕೇಸರಿ ಹರವೂ ಸಂವೇದನಾಶೀಲ ನಿರ್ದೇಶಕ. ಕೋಲಾರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸುವ ಸಂದರ್ಭದಲ್ಲಿ ಅವರೊಂದಿಗೆ ನಾನು ಕೆಲಸ ಮಾಡಿದ್ದೆ. ಸಂಕಟ, ನೋವನ್ನು ದೃಶ್ಯದ ಮೂಲಕ ಪರಿಣಾಮಕಾರಿಯಾಗಿ ಸೆರೆಹಿಡಿಯುತ್ತಾರೆ’ ಎಂದರು.

ಎಪಿಎಂಸಿ ಮಾಜಿ ಉಪಾಧ್ಯಕ್ಷ ಜವರಪ್ಪ, ಚಿಂತಕರಾದ ನಾ.ದಿವಾಕರ, ಜಿ.ಪಿ. ಬಸವರಾಜು, ಪಂಡಿತಾರಾಧ್ಯ, ರಂಗಕರ್ಮಿಗಳಾದ ಸಿ.ಬಸವಲಿಂಗಯ್ಯ, ಎಚ್‌.ಜನಾರ್ದನ್‌, ರೈತ ಮುಖಂಡ ಹೊಸಕೋಟೆ ಬಸವರಾಜು ಸೇರಿದಂತೆ ಅನೇಕರು ಇದ್ದರು.

‘ಪ್ರಜಾಪ್ರಭುತ್ವಕ್ಕೆ ಗೆಲುವು’

‘ಈ ಹೋರಾಟವನ್ನು ರೈತರ ಗೆಲುವು ಎಂದು ಮಾಧ್ಯಮಗಳು ಬಣ್ಣಿಸಿವೆ. ಆದರೆ, ಇದು ಸ್ವಾತಂತ್ರ್ಯ ಹೋರಾಟದ ಮುಂದುವರಿದ ಭಾಗ. ಫ್ಯಾಸಿಸ್ಟ್‌ ಮನೋಧರ್ಮ ಹಾಗೂ ದಮನಕಾರಿ ನೀತಿಗಳ ವಿರುದ್ಧದ ಹೋರಾಟ. ಸರ್ವಾಧಿಕಾರಿ ಹಾಗೂ ಪ್ರಜಾಪ್ರಭುತ್ವದ ನಡುವೆ ನಡೆದ ಸಂಘರ್ಷ. ಇದರಲ್ಲಿ ಪ್ರಜಾಪ್ರಭುತ್ವಕ್ಕೆ ಗೆಲುವಾಗಿದೆ. ಈ ಚಳವಳಿ ವಿಸ್ತೃತವಾಗಿ ಬೆಳೆದಿದೆ. ರೈತರು, ದಲಿತರು, ಕಾರ್ಮಿಕರು ಒಟ್ಟಾಗಿ ಹೋರಾಟ ಮಾಡಿದರೆ ಯಶಸ್ಸು ಸಾಧ್ಯ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

***

ಮೌಲ್ಯಗಳನ್ನು ಕಳೆದುಕೊಂಡಂತೆ ಸರ್ಕಾರಗಳು ವರ್ತಿಸುತ್ತಿವೆ. ಸಮಾಜವನ್ನು ಒಡೆಯುವಂತಹ ಕಾನೂನುಗಳ ವಿರುದ್ಧ ಹೋರಾಡಬೇಕಾಗಿದೆ.

- ಪ.ಮಲ್ಲೇಶ್, ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT