ಬಿದಿರು ಬೆಳೆ; ಯಶಸ್ಸಿನ ಹಾದಿಯಲ್ಲಿ ರಾಜಾ

7
ತಾಲ್ಲೂಕಿನ ಮೊದಲ ರೈತ ಎಂಬ ಹೆಗ್ಗಳಿಕೆಗೂ ಪಾತ್ರ

ಬಿದಿರು ಬೆಳೆ; ಯಶಸ್ಸಿನ ಹಾದಿಯಲ್ಲಿ ರಾಜಾ

Published:
Updated:
Prajavani

ಹುಣಸೂರು: ಕೃಷಿ ಎಂದರೆ ಲಾಭದಾಯಕವಲ್ಲ ಎಂದು ಮೂಗು ಮುರಿಯುವ ಈ ಕಾಲದಲ್ಲಿ ರೈತರು ಇತ್ತೀಚೆಗೆ ಬಿದಿರು ಬೆಳೆಯತ್ತ ಮುಖಮಾಡುತ್ತಿದ್ದಾರೆ.

ಆದರೆ, ಅದನ್ನು ಬೆಳೆಯಲು ಹೋಗಿ ಕೈಸುಟ್ಟುಕೊಂಡವರೇ ಹೆಚ್ಚು. ಆದರೆ,  ಬಾಚಹಳ್ಳಿ ಗ್ರಾಮದ ಪ್ರಗತಿಪರ ರೈತ ರಾಜಾ ವಾಣಿಜ್ಯ ಬೆಳೆಯಾದ ಬಿದಿರನ್ನು ಬೆಳೆಯುವ ಮೂಲಕ ಮೆಚ್ಚುಗೆಗೆಪಾತ್ರರಾಗಿದ್ದಾರೆ. ಅಲ್ಲದೇ, ಬಿದಿರು ಬೆಳೆದು ಯಶಸ್ಸು ಸಾಧಿಸಿದ ತಾಲ್ಲೂಕಿನ ಮೊದಲ ರೈತ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಗದ್ದೆ ಬಯಲಿಗೆ ಹೊಂದಿಕೊಂಡಿರುವ ವ್ಯವಸಾಯಕ್ಕೆ ಯೋಗ್ಯವಲ್ಲದ ಪ್ರದೇಶದಲ್ಲಿ ಬಿದಿರು ಬೆಳೆಸಿದ್ದಾರೆ. ಬೆಂಗಳೂರಿನ ಗ್ರೋ ಲ್ಯಾಬ್‌ನಿಂದ ಸಸಿ ಖರೀದಿಸಿ ನಾಟಿ ಮಾಡಿ 2 ವರ್ಷವಾಗಿದ್ದು ಬೆಳೆ ಸೊಂಪಾಗಿ ಬಂದಿದೆ. ಮುಂದಿನ ವರ್ಷ ಕಟಾವು ಮಾಡಲು ಉದ್ದೇಶಿಸಿದ್ದ ಲಾಭದ ನಿರೀಕ್ಷೆಯಲ್ಲಿದ್ದಾರೆ.

‘ಕೃಷಿಕರು ವಾಣಿಜ್ಯ ಬೆಳೆ ಎಂದಾಕ್ಷಣ ತೆಂಗು, ಅಡಿಕೆ, ತಂಬಾಕು ಮತ್ತು ಬಾಳೆ ಬೇಸಾಯಕ್ಕೆ ಜೋತು ಬೀಳುವ ಸಾಮಾನ್ಯ. ಅದರಾಚೆಗೂ ವಾಣಿಜ್ಯ ಬೇಸಾಯ ಇದೆ ಎಂಬ ಕಲ್ಪಿಸಿಕೊಳ್ಳುವ ಪ್ರಯತ್ನ ಮಾಡದೆ ಸಾಲದ ಶೂಲಕ್ಕೆ ಬಲಿಯಾಗುತ್ತಿದ್ದಾರೆ, ಇದಕ್ಕೆ ಕಾರಣ ಅರಿವಿನ ಕೊರತೆ’ ಎನ್ನುತ್ತಾರೆ ರಾಜಾ.

‘ರಾಜ್ಯದಲ್ಲಿ ದೇವರಾಜ ಅರಸು ಬಿದಿರು ಮಂಡಳಿ ರಚಿಸಲಾಗಿದ್ದು, ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಎ.ಸಿ.ಲಕ್ಷ್ಮಣ್‌ ಅವರ ಅಧ್ಯಕ್ಷತೆಯಲ್ಲಿ ಬಿದಿರು ಬೇಸಾಯ ಮಾಡಲಾಗುತ್ತಿದೆ. ಅನೇಕರು ಮೊದಲಿಗೆ ಆಸಕ್ತಿ ತೋರಿಸಿದರು. ಬಳಿಕ ಕೈಬಿಟ್ಟರು. ಆದರೆ, ನಾನು ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲೂ ಹಠಬಿಡದೆ ಕೃಷಿ ಮುಂದುವರಿಸಿದ್ದೇನೆ’ ಎಂದು ಅವರು ತಿಳಿಸಿದರು.

‘ಒಂದು ಟನ್‌ ಬಿದಿರಿಗೆ ₹ 4 ಸಾವಿರ ದರ ಸಿಗಲಿದ್ದು, ಒಂದು ಎಕರೆ ಪ್ರದೇಶದಲ್ಲಿ 30 ರಿಂದ 40 ಟನ್‌ ಬಿದಿರು ಬೆಳೆಯಬಹುದಾಗಿದೆ. ನಾನು ಮೊದಲ ಪ್ರಯತ್ನದಲ್ಲಿ 500 ಸಸಿ ನಾಟಿ ಮಾಡಿದ್ದೇನೆ. ಭಾರತದಲ್ಲಿ ಬಿದಿರಿನ ಕೊರತೆ ಹೆಚ್ಚಿದ್ದು, ಅನೇಕ ಗೃಹಉಪಯೋಗಿ ಪರಿಕರ ಸಿದ್ಧಪಡಿಸಲು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಬಿದಿರು ಅವಲಂಬಿಸಿದ ಅನೇಕ ಕೈಗಾರಿಕೆಗಳಿದ್ದು, ಗಂಧದ ಕಡ್ಡಿ ಕಾರ್ಖಾನೆ ಅತಿಯಾಗಿ ಬಿದಿರು ಅವಲಂಬಿಸಿದೆ. ಬಿದಿರು ಹೆಚ್ಚಿದರೆ ಪ್ಲಾಸ್ಟಿಕ್‌ ದೂರಮಾಡಲು ಸಹಕಾರಿಯಾಗಲಿದೆ’ ಎಂದು ಅವರು ವಿವರಿಸಿದರು.

‘ಬಿದಿರು ಕಬ್ಬಿಣಕ್ಕಿಂತಲೂ ಗಟ್ಟಿ ಹೀಗಾಗಿ ಚೀನಾ, ನೇಪಾಳ ಮತ್ತು ಕೊರಿಯಾ ದೇಶದಲ್ಲಿ ಮನೆ ಆರ್.ಸಿ.ಸಿ. ಹಾಕಲು ಕಬ್ಬಿಣದ ಬದಲಿಗೆ ಬಿದಿರು ಬಳಸಿದ್ದಾರೆ. ಈ ತಂತ್ರಜ್ಞಾನ ಕಟ್ಟಡ ನಿರ್ಮಾಣ ವಲಯದಲ್ಲಿ ಭಾರಿ ಸದ್ದು ಮಾಡಿದೆ. ತನ್ನ ‘ಕನಸಿನ ಮನೆ’ಯನ್ನೂ ಬಿದಿರು ಬಳಸಿ ನಿರ್ಮಿಸಬೇಕು ಎಂಬ ಆಸೆ ಹೊಂದಿದ್ದೇನೆ ಎಂದು ಆಶಯ ವ್ಯಕ್ತಪಡಿಸಿದರು.

*
ಭೀಮಾ ತಳಿ ಉತ್ತಮವಾಗಿದ್ದು, ಹೂ ಬಿಡುವುದಿಲ್ಲ. ಅಲ್ಲದೇ,ರಂಧ್ರವೂ ಇರುವುದಿಲ್ಲವಾದ್ದರಿಂದ ಗಟ್ಟಿಯಾಗಿರುತ್ತದೆ.
-ರಾಜಾ, ಬಿದಿರು ಕೃಷಿಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !