ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಬೀಜ ಕ್ಷೇತ್ರದಲ್ಲಿ ಖಾಸಗಿ ಪಾರಮ್ಯ ಸಲ್ಲದು: ಅನಂತ ಹೆಗಡೆ ಆಶೀಸರ

ಕರ್ನಾಟಕ ಜೀವವೈ‌ವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಬೇಸರ
Last Updated 30 ಜನವರಿ 2020, 20:11 IST
ಅಕ್ಷರ ಗಾತ್ರ

ಮೈಸೂರು: ಬೀಜ ಉದ್ಯಮ ಇಂದು ಖಾಸಗಿ ಕಂಪೆನಿಗಳ ಪಾಲಾಗಿದೆ. ಇದರಿಂದ ರೈತರ ಸ್ವಾತಂತ್ರ್ಯ ಹರಣವಾಗುತ್ತಿದೆ ಎಂದು ಕರ್ನಾಟಕ ಜೀವವೈ‌ವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಬೇಸರ ವ್ಯಕ್ತಪಡಿಸಿದರು.

ರೈತಮಿತ್ರ ಫಾರ್ಮರ್ಸ್‌ ಪ್ರೊಡ್ಯೂಸರ್ಸ್‌ ಕಂಪೆನಿ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಬೀಜ ಪ್ರಯೋಜನೆ ಬೀಜವೇದಿಕೆ, ಇಲವಾಲದ ತೋಟಗಾರಿಕೆ ಮಹಾವಿದ್ಯಾಲಯ ಗುರುವಾರ ಹಮ್ಮಿಕೊಂಡಿದ್ದ ‘ಬೀಜ ಮಸೂದೆ 2019ರ ಸಾಧಕ– ಬಾಧಕಗಳು’ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗ ಜಾರಿಯಲ್ಲಿರುವ 1966ರ ಬೀಜ ಕಾಯ್ದೆಗೆ ಬೀಜ ಉದ್ಯಮವನ್ನು ನಿರ್ವಹಿಸುವ ಸಾಮರ್ಥ್ಯವಿಲ್ಲ. ಹೀಗಾಗಿ ಹೊಸ ಕಾಯ್ದೆ ರೂಪಿಸುವ ಅಗತ್ಯವಿದೆ ಎನ್ನುವುದು ಒಪ್ಪಿಕೊಳ್ಳಬಹುದು. ಆದರೆ, ರೈತರು ಪರಂಪರಾಗತವಾಗಿ ಉಳಿಸಿಕೊಂಡು ಬಂದಿರುವ ತಳಿಗಳನ್ನು ಪೋಷಿಸುವ ಕೆಲಸವಾಗಬೇಕು. ರೈತರೇ ಉತ್ಪಾದಿಸಿಕೊಳ್ಳುವ ಬಿತ್ತನೆ ಬೀಜಗಳ ರಕ್ಷಣೆ ಹಾಗೂ ಅಭಿವೃದ್ಧಿಯಾಗಬೇಕು. ಈ ಬಗ್ಗೆ ಒತ್ತು ನೀಡದೇ ಖಾಸಗಿ ಕಂಪನಿಗಳಿಗೆ ಬೀಜ ಉತ್ಪಾದನೆಯ ಪೂರ್ಣ ಅವಕಾಶವನ್ನು ನೀಡಿದರೆ ರೈತನನ್ನು ದಾಸ್ಯಕ್ಕೆ ತಳ್ಳಿದಂತೆ ಆಗುವುದು ಎಂದು ವಿಷಾದದಿಂದ ಹೇಳಿದರು.

ಬೀಜ ಉದ್ಯಮದಲ್ಲಿ ಈಗ ವಾರ್ಷಿಕ ₹ 4.3 ಲಕ್ಷ ಕೋಟಿ ವಹಿವಾಟು ನಡೆಯುತ್ತಿದೆ. ಇದರಲ್ಲಿ ಶೇ 50ರಷ್ಟು ಪಾಲು ಖಾಸಗಿ ಕಂಪೆನಿಗಳು ಪಡೆದುಕೊಂಡಿವೆ. ಈಗ ರೂಪಿಸಿರುವ ಮಸೂದೆಯು ಖಾಸಗಿ ಕಂಪೆನಿಗಳಿಗೇ ಹೆಚ್ಚು ಉತ್ತೇಜನ ನೀಡುವಂತಿದೆ. ಇದರಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡು ಬೀಜ ಉತ್ಪಾದನೆಯಲ್ಲಿ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಿದರೆ, ಕೃಷಿಕ ಆರ್ಥಿಕವಾಗಿಯೂ ಶಕ್ತನಾಗಲು ಸಾಧ್ಯವಾಗುವುದು ಎಂದರು.

ಈ ಕುರಿತು ಚರ್ಚೆಗಳನ್ನು ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನು ನೀಡಬೇಕು. ರೈತ ಸಂಘಗಳಿಗೆ ಸರ್ಕಾರವು ಅಭಿಪ್ರಾಯ ಕೇಳಿದಾಗ ಬಲವಾಗಿ ವಾದ ಮಂಡಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ‘ರೈತರು ಈಚಿನ ದಿನಗಳಲ್ಲಿ ಹೆಚ್ಚು ಸಂಕಷ್ಟಕ್ಕೆ ಈಡಾಗಿದ್ದಾರೆ. ಆತ್ಮಹತ್ಯೆಗಳು ಹೆಚ್ಚುತ್ತಿವೆ. ಈ ಮಸೂದೆ ಈ ರೀತಿಯ ಬೆಳವಣಿಗೆಗಳನ್ನು ತಪ್ಪಿಸುವಂತೆ ಇರಬೇಕು. ನಾವೆಲ್ಲರೂ ಸರ್ಕಾರದ ಕಣ್ಣು ತೆರೆಸಲು ಶ್ರಮಿಸಬೇಕು’ ಎಂದರು.

ಬೆಂಗಳೂರಿನ ಕೃಷಿ ವಿ.ವಿ ಕುಲಪತಿ ಡಾ.ರಾಜೇಂದ್ರ ಪ್ರಸಾದ್, ಧಾರವಾಡದ ಕೃಷಿ ವಿ.ವಿ ಪ್ರಾಧ್ಯಾಪಕ ಬಸವೇಗೌಡ, ಆಂಧ್ರಪ್ರದೇಶದ ಬ್ರೆಸ್ಟ್‌ ವಿ.ವಿ ಕುಲಪತಿ ಡಾ.ಅಶೋಕ ಆಲೂರ, ಬಾಗಲಕೋಟೆ ಕೃಷಿ ವಿ.ವಿ ವಿಶ್ರಾಂತ ಕುಲಪತಿ ಡಾ.ಎಸ್‌.ಬಿ.ದುಂಡಿನ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್.ಕಮ್ಮರಡಿ, ‘ಇಕ್ರಿಸ್ಯಾಟ್’ ನಿವೃತ್ತ ಮಹಾ ನಿರ್ದೇಶಕ ಡಾ.ಸಿ.ಎಲ್‌.ಎನ್‌.ಗೌಡ, ರೈತಮಿತ್ರ ಫಾರ್ಮರ್ಸ್‌ ಪ್ರೊಡ್ಯೂಸರ್ಸ್‌ ಕಂಪೆನಿಯ ಗೋಪಿನಾಥ್ ಭಾಗವಹಿಸಿದ್ದರು.

ಶೈಶವಾವಸ್ಥೆಯಲ್ಲಿ ಮಸೂದೆ:ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಮಹಾದೇವಪ್ಪ ಅಧ್ಯಕ್ಷತೆವಹಿಸಿ ಮಾತನಾಡಿ, ಮಸೂದೆ ಇನ್ನೂ ಶೈಶವಾಸ್ಥೆಯಲ್ಲಿದೆ. ಸಾಕಷ್ಟು ಚರ್ಚೆಗಳನ್ನು ನಡೆಸಿ ಕಾಯ್ದೆಯಾಗಿ ರೂಪಿಸಬೇಕಿದೆ. ಇದಾಗದೇ ಇದ್ದಲ್ಲಿ ಕೃಷಿಕರು ಬಳಲುತ್ತಾರೆ. ಇದಕ್ಕೆ ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು, ರೈತ ಸಂಘಟನೆಗಳು ಅವಕಾಶ ಮಾಡಿಕೊಡಬಾರದು ಎಂದು ಕಿವಿಮಾತು ಹೇಳಿದರು.

ಬೀಜ ಉತ್ಪಾದನೆಯಲ್ಲಿ ಕರ್ನಾಟಕ ಮುಂದಿದೆ. ಇಲ್ಲಿನ ರೈತರು ಕೃಷಿ ಸಂಶೋಧಕರು, ವಿಜ್ಞಾನಿಗಳ ಬೆಂಬಲ ಪಡೆದು ತಾವೇ ಸ್ವತಃ ಬಿತ್ತನೆ ಬೀಜಗಳನ್ನು ಉತ್ಪಾದಿಸಿ ಮಾರಿದ್ದಾರೆ. ಆ ಮೂಲಕ ಆರ್ಥಿಕವಾಗಿ ಬಲಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಮತ್ತಷ್ಟು ಉತ್ತೇಜನಾಕಾರಿ ಹೆಜ್ಜೆಗಳನ್ನು ಕೇಂದ್ರ ಸರ್ಕಾರ ಇಡಬೇಕು ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT