ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣಾ: ನೂರು ದಿನ ಪೂರೈಸಿದ ಕೋಚನಹಳ್ಳಿ ರೈತರ ಹೋರಾಟ

ಒಪ್ಪಂದದಂತೆ ಉದ್ಯೋಗ ಕೊಡಿ, ಇಲ್ಲವೇ ಭೂಮಿ ವಾಪಸ್ ಕೊಡಿ ಎಂದು ರೈತರ ಒತ್ತಾಯ
Last Updated 30 ಜೂನ್ 2021, 13:08 IST
ಅಕ್ಷರ ಗಾತ್ರ

ವರುಣಾ: ‘ಭೂಮಿ ಮರಳಿಸಿ, ಇಲ್ಲವೇ ಉದ್ಯೋಗ ನೀಡಿ’ ಎಂದು ಒತ್ತಾಯಿಸಿ ಇಲ್ಲಿನ ಕೋಚನಹಳ್ಳಿ ಹಾಗೂ ತಾಂಡವಪುರದ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆ ಬುಧವಾರ ನೂರು ದಿನ ಪೂರೈಸಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ‘ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು. ರೈತರಿಗೆ ನ್ಯಾಯ ನೀಡಬೇಕು. ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರತಿಭಟನೆ ಸ್ಥಳಕ್ಕೆ ಹತ್ತು ದಿನಗಳ ಒಳಗೆ ಭೇಟಿ ನೀಡಿ ಸೂಕ್ತ ಪರಿಹಾರ ದೊರಕಿಸದಿದ್ದಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ದರಿಕೆ ನೀಡಿದರು.

ರೈತರ ತಾಳ್ಮೆಯನ್ನು ಪರೀಕ್ಷೆ ಮಾಡಬಾರದು. ರೈತರ ಬದುಕು ಬೀದಿ ಪಾಲಾಗಿದ್ದು, ಸರ್ಕಾರ ಎಚ್ಚೆತ್ತುಕೊಂಡು ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಚೆಗೆ ತಂದಿರುವ ಕಾಯ್ದೆಗಳು ರೈತ ವಿರೋಧಿಯಾಗಿವೆ ಎಂದು ಖಂಡಿಸಿದ ರೈತರು, ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಮೊಳಗಿಸಿದರು.

ಹೆರಿಟೇಜ್ ಗಾಲ್ಫ್ ಕಂಪನಿ ಹಾಗೂ ಟೋಟಲ್ ಎನ್ವಿರೋನ್ಮೆಂಟ್ ಎಂಬ ಕಂಪನಿಗಳು ರೈತರಿಗೆ ಉದ್ಯೋಗ ಕೊಡುತ್ತೇವೆ ಎಂದು ನಂಬಿಸಿ ಕಡಿಮೆ ಬೆಲೆಗೆ ಭೂಮಿಯನ್ನು ಖರೀದಿಸಿವೆ. ಈಗ ಕೆಲಸ ನೀಡುತ್ತಿಲ್ಲ. ತಕ್ಷಣ ಕೆಲಸ ನೀಡಬೇಕು, ಇಲ್ಲವೇ ಖರೀದಿಸಿರುವ ಭೂಮಿಯನ್ನು ವಾಪಸ್ ನೀಡಬೇಕು ಎಂದು ಅವರು ಆಗ್ರಹಿಸಿದರು.‌

ಕೋಚನಹಳ್ಳಿ ರೈತರ ಹೋರಾಟ ಸಮಿತಿಯು ಕರ್ನಾಟಕ ರಾಜ್ಯ ರೈತ ಸಂಘ, ಎಐಯುಟಿಯುಸಿ, ಜನಾಂದೋಲನಗಳ ಮಹಾಮೈತ್ರಿ, ದಲಿತ ಸಂಘರ್ಷ ಸಮಿತಿ, ಸ್ವರಾಜ್ ಇಂಡಿಯಾ ಅಭಿಯಾನ, ರೈತ ಕೃಷಿ ಕಾರ್ಮಿಕರ ಸಂಘಟನೆಗಳ ಸಹಯೋಗದಲ್ಲಿ ಕಳೆದ ನೂರು ದಿನಗಳಿಂದ ಕೋಚನಹಳ್ಳಿಯಲ್ಲಿ ಹೋರಾಟ ನಡೆಸುತ್ತಿವೆ.

ಸ್ವರಾಜ್ ಇಂಡಿಯಾ ಅಭಿಯಾನದ ಉಗ್ರ ನರಸಿಂಹಗೌಡ, ಹೋರಾಟಗಾರರಾದ ಚೋರನಹಳ್ಳಿ ಶಿವಣ್ಣ, ಪ್ರತಾಪ್ ಗೌಡ, ಬೊಕ್ಕಳ್ಳಿ ನಂಜುಂಡಸ್ವಾಮಿ, ಹೆಜ್ಜಿಗೆ ಪ್ರಕಾಶ, ಕೋಚನಹಳ್ಳಿ ಗೋವಿಂದರಾಜು ಸೇರಿದಂತೆ ತಾಂಡವಪುರ, ಕೋಚನಹಳ್ಳಿ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT