ಸೋಮವಾರ, ಮೇ 23, 2022
22 °C
ಬೇಸಿಗೆ ಬೆಳೆಗೆ ಅನುಕೂಲ ಮಾಡಿಕೊಡಲು ಆಗ್ರಹ

ನಾಲೆಗೆ ನೀರು ಹರಿಸಲು ಒತ್ತಾಯಿಸಿ ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಜನಗೂಡು: ಕಬಿನಿ ಬಲದಂಡೆ, ರಾಂಪುರ, ಹುಲ್ಲಹಳ್ಳಿ, ಹಲಸೂರು, ನುಗು ನಾಲೆಗಳ ವ್ಯಾಪ್ತಿಯಲ್ಲಿ ಬೇಸಿಗೆ ಬೆಳೆ ಬೆಳೆಯಲು ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಕಚೇರಿ ಮುಂಭಾಗ ಸೇರಿದ ರೈತ ಸಂಘಟನೆಯ ಕಾರ್ಯಕರ್ತರು ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಮಾತನಾಡಿ, ‘ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ನಾಲೆಗಳಿಗೆ ನೀರು ಹರಿಸಲಾಗಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗಿವೆ. ತಾಲ್ಲೂಕಿನಲ್ಲಿ ನೀರು ಬಿಡುವ ಬಗ್ಗೆ ಪ್ರಸ್ತಾಪವೇ ಆಗಿಲ್ಲ. ಈಗಾಗಲೇ ಕಬಿನಿ ಜಲಾಶಯದಲ್ಲಿ 71 ಅಡಿ ನೀರಿದೆ. ಅಲ್ಲದೆ ನುಗು ಅಣೆಕಟ್ಟೆಯಲ್ಲೂ ಕೂಡ 89 ಅಡಿ ನೀರಿದೆ ಆದರೂ ಸಹ ಬೇಸಿಗೆ ಬೆಳೆಗೆ ನಾಲೆಗಳಿಗೆ ನೀರು ಹರಿಸಲು ಅಧಿಕಾರಿಗಳು ಮುಂದಾಗಿಲ್ಲ’ ಎಂದು ದೂರಿದರು.

‘ನಾಲೆಗಳಲ್ಲಿ ಹೂಳು ತುಂಬಿದ್ದು, ಹೂಳು ತೆಗೆಸಿರುವುದಾಗಿ ಅಧಿಕಾರಿಗಳು ಬಿಲ್‍ಪಾಸ್ ಮಾಡಿಕೊಳ್ಳುತ್ತಾರೆ. ಆದರೆ, ಹೂಳು ತೆಗೆಸುತ್ತಿಲ್ಲ. ಇದರಿಂದ ಕಾಲುವೆಯ ಕೊನೆ ಭಾಗದವರೆಗೆ ನೀರು ತಲುಪುತ್ತಿಲ್ಲ. ತಮಿಳುನಾಡಿನಲ್ಲಿ ಖಾಸಗಿ ವಿದ್ಯುತ್ ತಯಾರಿಕೆ ಘಟಕಗಳಿಗೆ ರಾತ್ರಿ ವೇಳೆ ಕದ್ದು ಮುಚ್ಚಿ ನೀರು ಹರಿಸುವ ಎಂಜಿನಿಯರ್‌ಗಳು ಅವರ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಈ ಕೂಡಲೇ ಕಬಿನಿ ಬಲದಂಡೆ ಹಾಗೂ ನುಗು ಮತ್ತು ಹಲಸೂರು ನಾಲೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಶೋಕ್ ಮಾತನಾಡಿ, ‘ಫೆ. 25 ರಿಂದ ಕಬಿನಿ ಬಲದಂಡೆ ನಾಲೆಗಳಿಗೆ ನೀರು ಹರಿಸಲಾಗುವುದು ಜೊತೆಗೆ ಹುಲ್ಲಹಳ್ಳಿ ರಾಂಪುರ ನಾಲೆಗಳಿಗೂ ಸಹ ಕಟ್ಟು ನೀರು ಪದ್ದತಿಯಲ್ಲಿ ನೀರು ಹರಿಸಲಾಗುವುದು. ನುಗು ನಾಲೆಗಳಿಗೆ ಧನ ಕರುಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಮಾಹಿತಿ ನೀಡಿದರು.

ತಹಶೀಲ್ದಾರ್ ಮೋಹನ್‌ಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸತೀಶ್‍ರಾವ್, ದೊಡ್ಡಯ್ಯ, ಸಿದ್ದು, ವೆಂಕಟೇಶ್, ಕೆಂಪಣ್ಣ, ಮಹದೇವ, ಮಹೇಶ್, ಹಿಮ್ಮಾವು ಬಾಲಣ್ಣ,ಶಿವಣ್ಣ, ನಾಗರಾಜು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು