ಶನಿವಾರ, ನವೆಂಬರ್ 28, 2020
18 °C
ರೈತ ವಿರೋಧಿ ತಿದ್ದುಪಡಿಗಳನ್ನು ವಾಪಸ್ ಪಡೆಯಲು ಆಗ್ರಹ

ಹೆದ್ದಾರಿ ತಡೆದು ರೈತರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಮೈಸೂರು– ನಂಜನಗೂಡು ಹೆದ್ದಾರಿಯನ್ನು ತಡೆದ ರೈತರು, ಸರ್ಕಾರದ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು.

ಎಪಿಎಂಸಿ ಬಳಿಯ ರಿಂಗ್‌ ರಸ್ತೆ ಜಂಕ್ಷನ್‌ನಲ್ಲಿ ಪರಸ್ಪರ ಕೈ ಹಿಡಿದು ಮಾನವ ಸರಪಳಿ ರಚಿಸಿದರು. ವಿವಿಧ ಕಾಯ್ದೆಗಳ ತಿದ್ದುಪಡಿ ಸುಗ್ರೀವಾಜ್ಞೆಗಳ ಪ್ರತಿಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು ಸರ್ಕಾರ ಈಗಾಗಲೇ ಜಾರಿಗೆ ತಂದಿರುವ ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ರೈತರು ತಮ್ಮ ಹಸಿರು ಟವೆಲ್‌ಗಳನ್ನು ಕೈಯಲ್ಲಿಡಿದು ಗಾಳಿಯಲ್ಲಿ ಗಿರಕಿ ಹೊಡೆಸುವ ಮೂಲಕ ಸರ್ಕಾರ ಕೂಡಲೇ ತಮ್ಮ ದನಿಯನ್ನು ಕೇಳಬೇಕು ಎಂದು ಗಮನ ಸೆಳೆದರು. ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.

ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ‘ಸರ್ಕಾರ ಕೊರೊನಾದಂತಹ ಸಮಯವನ್ನು ದುರುಪಯೋಗಪಡಿಸಿಕೊಂಡು ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿಗಳು ರೈತರಿಗೆ ಮಾರಕವಾಗಿವೆ. ಹಾಗಾಗಿಯೇ ಸರ್ಕಾರ ಚರ್ಚೆ ಮಾಡಲು ಬಯಸುತ್ತಿಲ್ಲ’ ಎಂದು ಹರಿಹಾಯ್ದರು.

ಹಲವು ತಿಂಗಳುಗಳಿಂದ ಇಡೀ ರಾಜ್ಯದಲ್ಲಿ ರೈತ ಸಂಘಟನೆಗಳು ಸರ್ಕಾರದ ನೀತಿಗಳ ವಿರುದ್ಧ ಭಾರಿ ಪ್ರತಿಭಟನೆ ನಡೆಸುತ್ತಿದ್ದರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ತನ್ನ ವಿನಾಶಕಾರಿ ನೀತಿಯನ್ನು ಕೈಬಿಡುತ್ತಿಲ್ಲ. ಇದು ನಿಜಕ್ಕೂ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಂದ ಡಿಸಿಪಿ ಪ್ರಕಾಶ್‌ಗೌಡ

ರಸ್ತೆತಡೆ ಚಳವಳಿ ಕುರಿತು ಮೊದಲೇ ಮಾಹಿತಿ ಇದ್ದುದ್ದರಿಂದ ಪೊಲೀಸರು ಮೈಸೂರು– ನಂಜನಗೂಡು ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರು. ಆದರೆ, ರಿಂಗ್‌ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. 15 ನಿಮಿಷ ಕಳೆದರೂ ರೈತರು ಮಾನವ ಸರಪಳಿಯನ್ನು ನಡೆಸುವುದನ್ನು ಮುಂದುವರಿಸುವ ಮೂಲಕ ವಾಹನ ಸಂಚಾರಕ್ಕೆ ತಡೆ ಒಡ್ಡಿದರು. ಇದನ್ನು ಅರಿತ ಡಿಸಿಪಿ ಪ್ರಕಾಶ್‌ಗೌಡ ಸ್ಥಳಕ್ಕೆ ಬಂದು, ರೈತರನ್ನು ಮನವೊಲಿಸಿದರು. ಬಳಿಕ ರಸ್ತೆತಡೆ ಚಳವಳಿಯನ್ನು ವಾಪಸ್ ಪಡೆಯಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು