ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತವಾಗಿ ವಿತರಿಸಿ ಪ್ರತಿಭಟನೆ

ಮಂಗಳೂರು ಸೌತೆ ಬೆಲೆ ಕೆ.ಜಿಗೆ ₹ 1
Last Updated 25 ಫೆಬ್ರುವರಿ 2020, 9:38 IST
ಅಕ್ಷರ ಗಾತ್ರ

ನಂಜನಗೂಡು: ಮಂಗಳೂರು (ಸಾಂಬಾರು) ಸೌತೆಯ ದರ ನೆಲಕಚ್ಚಿದ್ದರಿಂದ ನಿರಾಸೆಗೊಂಡ ತಾಲ್ಲೂಕಿನ ರೈತರೊಬ್ಬರು, ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಸೋಮವಾರ ಸಾರ್ವಜನಿಕರಿಗೆ ಉಚಿತವಾಗಿ ಸೌತೆಕಾಯಿ ಹಂಚುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಶಿರಮಹಳ್ಳಿಯ ರೈತ ಮಂಜುನಾಥ್, ನಾಲ್ಕು ಕ್ವಿಂಟಲ್‌ನಷ್ಟು ಸೌತೇಕಾಯಿಯನ್ನು ಉಚಿತವಾಗಿ ಹಂಚಿದ್ದಾರೆ. ತೋಟದಲ್ಲಿ ಇನ್ನೂ ಅಂದಾಜು ಅಷ್ಟೇ ಪ್ರಮಾಣದ ಬೆಳೆ ಇದ್ದು, ಅದನ್ನು ಕೊಯ್ಲು ಮಾಡುವುದಿಲ್ಲ ಎಂದು ಹೇಳಿದರು.

‘ಸೌತೆ ದರ ಕೆ.ಜಿಗೆ ₹ 1ಕ್ಕೆ ಕುಸಿದಿದೆ. ಮಧ್ಯವರ್ತಿಗಳು ₹ 50 ಪೈಸೆಗೆ ಬೀಟ್ ಕೂಗತೊಡಗಿದರು. ಇದರಿಂದ ಸಾಗಾಣಿಕೆ ವೆಚ್ಚವೂ ಸಿಗದಂತಹ ಸ್ಥಿತಿ ನಿರ್ಮಾಣವಾಯಿತು. ಹೀಗಾಗಿ, ಮಾರಾಟ ಮಾಡುವ ಬದಲು ಉಚಿತವಾಗಿ ಹಂಚುವ ನಿರ್ಧಾರಕ್ಕೆ ಬಂದೆ’ ಎಂದು ತಿಳಿಸಿದರು.

ವಿವಿಧ ಕೆಲಸಕಾರ್ಯಗಳಿಗೆ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ್ದ ಸಾರ್ವಜನಿಕರು ಸಂಜೆ 4ರವರೆಗೂ ಸೌತೆಕಾಯಿಯನ್ನು ಉಚಿತವಾಗಿ ಪಡೆದುಕೊಂಡರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿದ್ಯಾಸಾಗರ್, ‘ನಿಜಕ್ಕೂ ಇದೊಂದು ದುರದೃಷ್ಟಕರ ಸಂಗತಿ. ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಲೆಯೂ ದೊರೆಯದೇ ಹೋದರೆ ಅವರ ಪಾಡು ಏನಾಗಬೇಕು? ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇನ್ನಾದರೂ ರೈತರ ಕುರಿತು ಗಂಭೀರವಾಗಿ ಚಿಂತಿಸಬೇಕು’ ಎಂದು ಆಗ್ರಹಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಹೇಶ್‌ಕುಮಾರ್, ‘ರೈತರಿಂದ ಮನವಿ ಸ್ವೀಕರಿಸಲಾಗಿದೆ. ಇದನ್ನು ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ತಿಳಿಸಿದ್ದಾರೆ.

ಜನಸಂಗ್ರಾಮ ಪರಿಷತ್ ವಿಭಾಗೀಯ ಕಾರ್ಯದರ್ಶಿ ವಿಜಯ್ ಕುಮಾರ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸತೀಶ್ ರಾವ್, ಹಿಮ್ಮಾವು ರಘು, ಎಡತಲೆ ರಂಗಸ್ವಾಮಿ ನಾಯಕ, ಕತ್ವಾಡಿಪುರ ಶಿವಣ್ಣ, ಹಿಮ್ಮಾವು ಶಿವರಾಜು, ಮಹೇಶ್ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT