ಬುಧವಾರ, ಡಿಸೆಂಬರ್ 11, 2019
27 °C
ಜಲಾಶಯ ಸುತ್ತ ಶಾಶ್ವತವಾಗಿ ಗಣಿಗಾರಿಕೆ ನಿಷೇಧಕ್ಕೆ ಒತ್ತಾಯ

ಕೆಆರ್‌ಎಸ್‌ ಉಳಿವಿಗಾಗಿ ಜನಾಂದೋಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕಾವೇರಿ ನದಿ ಹಾಗೂ ಕನ್ನಂಬಾಡಿ ಕಟ್ಟೆ ಉಳಿವಿಗಾಗಿ ಮೈಸೂರು, ಮಂಡ್ಯ, ಬೆಂಗಳೂರು ಭಾಗದಲ್ಲಿ ಜನಾಂದೋಲನ ರೂಪಿಸಲು ಶನಿವಾರ ಇಲ್ಲಿ ನಡೆದ ಸಭೆ ನಿರ್ಣಯ ಕೈಗೊಂಡಿದೆ.

ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಲು ಒತ್ತಾಯಿಸಿತು. ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಕೆಆರ್‌ಎಸ್‌ ಅಭಿವೃದ್ಧಿ, ಕಾವೇರಿ ಪ್ರತಿಮೆ ಸ್ಥಾಪನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿತು. ಹೋರಾಟದ ಅಂಗವಾಗಿ ‘ಕಾವೇರಿ, ಕೆಆರ್‌ಎಸ್‌ ಉಳಿವಿಗಾಗಿ ಜನಾಂದೋಲನ ಸಮಿತಿ’ ರಚಿಸಲು ತೀರ್ಮಾನಿಸಲಾಯಿತು.

‘ಕಾವೇರಿ ನೀರು ಸಮುದಾಯದ ಕಡೆ ಹರಿಯುತ್ತಿದೆ. ಹೀಗಾಗಿ, ಇದು ಪ್ರತಿ ಮನೆ ಸಮಸ್ಯೆಯೂ ಆಗಿದೆ. ಆದರೆ, ಈಗ ಕುಡಿಯುವ ನೀರಿನ ತಲೆ ಮೇಲೆ ಗಣಿಗಾರಿಕೆಯ ಅಪಾಯದ ಕತ್ತಿ ನೇತಾಡುತ್ತಿದೆ. ಕೆಆರ್‌ಎಸ್‌ ಉಳಿವಿಗಾಗಿ ವಿದ್ಯಾರ್ಥಿ ಸಮುದಾಯ, ಸಾಂಸ್ಕೃತಿಕ ವಲಯ ಹೋರಾಟ ನಡೆಸಬೇಕು. ಇದು ವಿದ್ಯಾರ್ಥಿಗಳ ಆಂದೋಲನವಾಗಬೇಕು’ ಎಂದು ಸಾಹಿತಿ ದೇವನೂರ ಮಹಾದೇವ ಸಲಹೆ ನೀಡಿದರು.

ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಸ್ವರಾಜ್‌ ಇಂಡಿಯಾ, ದಲಿತ ಸಂಘಟನೆಗಳ ಮುಖಂಡರು, ಪರಿಸರವಾದಿಗಳು, ಆರ್‌ಟಿಐ ಕಾರ್ಯಕರ್ತರು, ಲೇಖಕರು, ಹೋರಾಟಗಾರರು, ಇತಿಹಾಸ ತಜ್ಞರು ಸಮಾಲೋಚನೆ ನಡೆಸಿ ಈ ನಿರ್ಣಯ ಕೈಗೊಂಡರು. ಮಂಡ್ಯ, ಬೆಂಗಳೂರು, ಮೈಸೂರು ಭಾಗದ ಮುಖಂಡರು ಪಾಲ್ಗೊಂಡಿದ್ದರು.

ತಜ್ಞರ ಸಮಿತಿ ರಚನೆ: ಯೋಜನೆ ಜಾರಿಗೂ ಮುನ್ನ ಕಾವೇರಿ ಕಣಿವೆಯ ನಾಲ್ಕೂ ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು, ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ, ಸಲಹೆ ಪಡೆಯಲಾಗುವುದು. ಒಂದು ಶತಮಾನದ ಗುರಿಯೊಂದಿಗೆ ಕಾಮಗಾರಿ ಕೈಗೊಳ್ಳಲಾಗುವುದು. ಸಿನ್ಸಿಯರ್‌ ಆರ್ಕಿಟೆಕ್ಟ್‌ ಕಂಪನಿ ಯೋಜನೆಗೆ ನೀಲನಕ್ಷೆ ಸಿದ್ಧಪಡಿಸಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ಕೆಆರ್‌ಎಸ್‌ಗೆ ಭೇಟಿನೀಡಿ ಪರಿಶೀಲಿಸಿದ ನಂತರ ಮಾತನಾಡಿ, ‘ಕೆಆರ್‌ಎಸ್‌ ವ್ಯಾಪ್ತಿಯಲ್ಲಿ ನೀರಾವರಿ, ತೋಟಗಾರಿಕೆ, ಮೀನುಗಾರಿಕೆ, ಕಂದಾಯ, ಲೋಕೋಪಯೋಗಿ ಇಲಾಖೆಗೆ ಸೇರಿದ 336 ಎಕರೆ ಸರ್ಕಾರಿ ಜಾಗ ಲಭ್ಯ ಇದೆ. ರೈತರ ಜಮೀನು ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಇರುವ ಜಾಗದಲ್ಲೇ ಉದ್ಯಾನ ರೂಪುಗೊಳ್ಳಲಿದೆ. ಸರ್ಕಾರ ಒಂದು ರೂಪಾಯಿಯನ್ನೂ ವಿನಿಯೋಗಿಸುವುದಿಲ್ಲ. ವಿಶ್ವಮಟ್ಟದಲ್ಲಿ ಮನ್ನಣೆ ಪಡೆದಿರುವ ಖಾಸಗಿ ಕಂಪನಿಗೆ ಗುತ್ತಿಗೆಗೆ ನೀಡಲಾಗುವುದು’ ಎಂದರು.

ಮೇಲ್ದರ್ಜೆಗೆ ಕಾರಂಜಿ: ‘ಬೃಂದಾವನ ಸಂಗೀತ ಕಾರಂಜಿಯನ್ನು ಕ್ಯಾಲಿಫೋರ್ನಿಯಾ, ಸಿಂಗಪೂರ್‌ ಸಂಗೀತ ಕಾರಂಜಿಯಂತೆ ಮೇಲ್ದರ್ಜೆಗೆ ಏರಿಸಲಾಗುವುದು. ಉದ್ಯಾನದ ನಡುವೆ ಹಂಪಿ, ಬೇಲೂರು– ಹಳೇಬೀಡು, ತಾಜ್‌ಮಹಲ್‌ ಸೇರಿದಂತೆ ಭವ್ಯ ಸ್ಮಾರಕಗಳ ಪ್ರತಿರೂಪ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು