ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಪ್ರಿಯರ ಸಂತಸ; ಯುವ ಮನೋಲ್ಲಾಸ

ಮೈಸೂರು ಮಾಲ್‌ನ ಐನಾಕ್ಸ್‌ ಮೂವೀಸ್ ಅಂಗಳದಲ್ಲಿ ಹಿರಿ–ಕಿರಿಯರ ಸಮಾಗಮ
Last Updated 1 ಅಕ್ಟೋಬರ್ 2019, 11:18 IST
ಅಕ್ಷರ ಗಾತ್ರ

ಮೈಸೂರು: ಐದು ದಿನದ ದಸರಾ ಚಲನಚಿತ್ರೋತ್ಸವ ಜನರನ್ನು ಆಕರ್ಷಿಸುತ್ತಿದೆ. ಐನಾಕ್ಸ್‌ ಮೂವೀಸ್‌ನ ಮೂರು ಪರದೆಗಳಲ್ಲಿ ನಡೆದಿರುವ ಚಿತ್ರೋತ್ಸವ ಸೋಮವಾರ ಹೌಸ್‌ಫುಲ್‌ ಆಗಿತ್ತು.

ಮೈಸೂರು ಮಾಲ್‌ನಲ್ಲಿರುವ ಐನಾಕ್ಸ್‌ ಮೂವೀಸ್‌ ಅಂಗಳದಲ್ಲಿ ಹಿರಿ–ಕಿರಿಯರ ಸಮಾಗಮವಾಗಿತ್ತು. ಮೂರು ಪರದೆಗಳೂ ಅಕ್ಕಪಕ್ಕದಲ್ಲೇ ಇದ್ದುದರಿಂದ, ತಮಗಿಷ್ಟದ ಸಿನಿಮಾಗಳನ್ನು ವೀಕ್ಷಿಸಿದರು.

ಯುವಕ–ಯುವತಿಯರು ತಂಡೋ ಪತಂಡವಾಗಿ ಸಿನಿಮಾ ವೀಕ್ಷಣೆಗಾಗಿ ಬಂದಿದ್ದರು. ಪತಿ–ಪತ್ನಿ, ಪ್ರೇಮಿಗಳು, ನವ ದಂಪತಿಯೂ ಬಂದಿದ್ದರು.

ಇನ್ನಷ್ಟು ಪನೋರಮಾ, ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ಪ್ರದರ್ಶನ ಇರಬೇಕಿತ್ತು. ಕಮರ್ಷಿಯಲ್ ಚಿತ್ರಗಳ ಸಂಖ್ಯೆಯನ್ನು ಇನ್ನಷ್ಟು ತಗ್ಗಿಸಿ ಕಲಾತ್ಮಕ ಚಿತ್ರಗಳ ಸಂಖ್ಯೆ ಹೆಚ್ಚಿಸಬೇಕಿತ್ತು ಎಂದು ಕೆಲವರು ಹೇಳಿದರೆ; ಯುವ ಸಮೂಹ, ಕನ್ನಡಕ್ಕೆ ಆದ್ಯತೆ ನೀಡಿ ಹೆಚ್ಚಿನ ಜನರನ್ನು ಮೂವೀಸ್‌ ಅಂಗಳಕ್ಕೆ ಸೆಳೆದಿದ್ದಕ್ಕೆ ಖುಷಿ ವ್ಯಕ್ತಪಡಿಸಿದರು.

ನಿರ್ದೇಶಕರೊಂದಿಗೆ ಸಂವಾದ: ಉಪ್ಪಿನ ಕಾಗದ ಸಿನಿಮಾ ನಿರ್ದೇಶಕ ಬಿ.ಸುರೇಶ್‌ ವೀಕ್ಷಕರೊಟ್ಟಿಗೆ ಕೂತು ತಮ್ಮ ಸಿನಿಮಾ ನೋಡಿದರು. ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದರು. ಚಿತ್ರ ಪ್ರದರ್ಶನದ ಬಳಿಕ ಸಂವಾದ ನಡೆಸಿದರು. ವೀಕ್ಷಕರ ಪ್ರಶ್ನೆಗಳಿಗೆ, ಕುತೂಹಲಕ್ಕೆ ಉತ್ತರಿಸಿದರು. ಸಲಹೆಯನ್ನು ಮುಕ್ತ ಮನಸ್ಸಿನಿಂದ ಆಲಿಸಿದರು.

‘ಚಲನಚಿತ್ರೋತ್ಸವ ಎಂಬ ಪದದಲ್ಲೇ ಸಂಭ್ರಮವಿದೆ. ಸಿನಿಮಾ ವೀಕ್ಷಣೆ ಏಕತಾನತೆ ಹೋಗಲಾಡಿಸಲಿದೆ. ಮೈಸೂರಿಗರಿಗೆ ಒಂದೆಡೆಯೇ ಹಲವು ಸಿನಿಮಾಗಳನ್ನು ನೋಡಿ ಸಂಭ್ರಮಿಸುವ ಅವಕಾಶ ಒದಗಿ ಬಂದಿದೆ. ಸಿನಿಮಾ ಪ್ರೇಮಿಗೆ ಇದು ಲಾಭವಾದರೆ, ಸಿನಿ ರಸಿಕನಿಗೆ ಆನಂದವಾಗಿದೆ’ ಎಂದು ಸುರೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತುಳು ಭಾಷೆಯ ‘ದೇಯಿ ಬೈದತಿ’ ಸಿನಿಮಾ ನಿರ್ದೇಶಕ ಸೂರ್ಯೋದಯ್ ಪೆರಂಪಳ್ಳಿ ಸಹ ಪ್ರೇಕ್ಷಕರಲ್ಲೊಬ್ಬರಾಗಿ ತಮ್ಮ ಚಿತ್ರತಂಡದೊಂದಿಗೆ ಸಿನಿಮಾ ವೀಕ್ಷಿಸಿದರು. ನಂತರ ಸಂವಾದ ನಡೆಸಿದರು. ಚಿತ್ರೋತ್ಸವಕ್ಕೆ ತಮ್ಮ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಮೈಸೂರಿಗರ ಆತಿಥ್ಯವನ್ನು ಮನಸಾರೆ ಹೊಗಳಿದರು. ಹಿಂದಿ ಚಿತ್ರವೊಂದನ್ನು ನಿರ್ಮಿಸುವ ತಮ್ಮ ಕನಸನ್ನು ಹಂಚಿಕೊಂಡರು.

‘ದಸರಾ ಚಟುವಟಿಕೆ ನಡೆದಿರುವ ವಿವಿಧೆಡೆ ಒಂದೊಂದು ಪಾರ್ಕ್‌ನಲ್ಲೂ ಬೃಹತ್‌ ಎಲ್‌ಇಡಿ ಸ್ಕ್ರೀನ್‌ ಹಾಕಿ ಚಲನಚಿತ್ರ ಪ್ರದರ್ಶಿಸಬೇಕು ಎಂಬ ಆಲೋಚನೆ ನಡೆದಿದೆ’ ಎಂದು ದಸರಾ ಚಲನಚಿತ್ರೋತ್ಸವ ಉಪಸಮಿತಿಯ ಕಾರ್ಯದರ್ಶಿ ಆರ್‌.ರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT