ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೀಕ್ಷೆ ಮೂಲಕ ಸೋಂಕಿತರ ಪತ್ತೆಗೆ ಕ್ರಮ: ಜಿಲ್ಲಾಧಿಕಾರಿ ಶರತ್‌

ಕೋವಿಡ್‌ ಪರೀಕ್ಷೆ ಮತ್ತಷ್ಟು ಹೆಚ್ಚಳಕ್ಕೆ ನಿರ್ಧಾರ–ಜಿಲ್ಲಾಧಿಕಾರಿ ಶರತ್‌
Last Updated 25 ಸೆಪ್ಟೆಂಬರ್ 2020, 1:50 IST
ಅಕ್ಷರ ಗಾತ್ರ

ಮೈಸೂರು: ದಿನೇದಿನೇ ಕೋವಿಡ್‌ ಪ್ರಕರಣ ಹೆಚ್ಚುತ್ತಿದ್ದು, ನಿಯಂತ್ರಣ ನಿಟ್ಟಿನಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸಲು ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಶರತ್‌ ತಿಳಿಸಿದರು.

‘ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಸಮಸ್ಯೆಗಳಿಂದ ಬಳಲುತ್ತಿರುವವರ (ಕೊಮಾರ್ಬಡಿಟಿ) ಪಟ್ಟಿ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಬಳಿ ಇದೆ. ಆರೋಗ್ಯ ತಂಡ ರಚಿಸಿ ಮನೆಮನೆಗೆ ಹೋಗಿ ಸದ್ಯ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಹಿಂದೆ ಆಶಾ ಕಾರ್ಯಕರ್ತೆಯರು ಸಮೀಕ್ಷೆ ನಡೆಸಿದಾಗ ಪತ್ತೆ ಆದವರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗುವುದು. ಇತರ ಸಮಸ್ಯೆ ಇರುವವರಿಗೆ ಸೋಂಕು ತಗುಲಿದರೆ ಅಪಾಯ ಹೆಚ್ಚಿರುತ್ತದೆ. ಕೊನೆಯ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿತರನ್ನು ಪತ್ತೆ ಹಚ್ಚಿ ಬೇಗನೇ ಚಿಕಿತ್ಸೆ ನೀಡಬೇಕಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕೋವಿಡ್‌ ಪರೀಕ್ಷೆ ಮತ್ತಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್‌ ಹಾಗೂ ಆರ್‌ಟಿ ಪಿಸಿಆರ್‌ ಪರೀಕ್ಷೆ ಹೆಚ್ಚಿಸಲಾಗುವುದು. ಇದುವರೆಗೆ ಮಧ್ಯಾಹ್ನದವರೆಗೆ ಪರೀಕ್ಷೆ ನಡೆಸಲಾಗುತ್ತಿತ್ತು. ಇನ್ನುಮುಂದೆ ಮಧ್ಯಾಹ್ನವೂ ಮುಂದುವರಿಯಲಿದೆ. ಸಾರ್ವಜನಿಕರು ಖುದ್ದಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಕೋರಿದರು.

‘ಐಎಲ್‌ಐ ಹಾಗೂ ಎಸ್‌ಎಆರ್‌ಐ ಪ‍್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಆದರೆ, ಈ ಪ್ರಕರಣಗಳು ಜಿಲ್ಲಾಡಳಿತಕ್ಕೆ ವರದಿ ಆಗುತ್ತಿಲ್ಲ. ಖಾಸಗಿ ಕ್ಲಿನಿಕ್‌ಗಳು ಈ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಅಂಥವರಿಗೆ ಕೋವಿಡ್‌ ಪರೀಕ್ಷೆ ಮಾಡಿಸಲು ಕ್ರಮ ವಹಿಸಬೇಕು’ ಎಂದು ಸೂಚನೆ ನೀಡಿದರು.

‘ತಾಲ್ಲೂಕುಮಟ್ಟದಲ್ಲಿ ಕೋವಿಡ್‌ ಕೇರ್‌ ಕೇಂದ್ರ ತೆರೆಯಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ 50 ಆಕ್ಸಿಜನ್‌ ಹಾಸಿಗೆ ಸ್ಥಾಪಿಸಲು ಕೆಲಸ ನಡೆಯುತ್ತಿದೆ’ ಎಂದರು.

ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮಾಹಿತಿ ಕಲೆಹಾಕುತ್ತಿದ್ದೇವೆ. ಕೆಲವರು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಿಖರ ಮಾಹಿತಿ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಿ.ಭಾರತಿ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT