ಶುಕ್ರವಾರ, ನವೆಂಬರ್ 27, 2020
23 °C
ಪೊಲೀಸರ ಬಳಿ ಪರಿಪರಿಯಾಗಿ ಬೇಡಿಕೊಂಡ ಪಟಾಕಿ ಮಾರಾಟಗಾರರು

ಕೈ ಮುಗಿದರು, ಕಾಲಿಗೆ ಬಿದ್ದರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೈ ಮುಗಿದರು, ಕಾಲಿಗೆ ಬಿದ್ದರು. ಇದೊಂದು ಬಾರಿ ಪಟಾಕಿ ಮಾರಾಟ ಮಾಡಲು ಅವಕಾಶ ಕೊಡಿ. ಮುಂದಿನ ವರ್ಷದಿಂದ ಪಟಾಕಿ ವ್ಯಾಪಾರ ಮಾಡುವುದಿಲ್ಲ. ಈಗ ಸಾಲ ಮಾಡಿ ಪಟಾಕಿ ಖರೀದಿಸಿದ್ದೇವೆ. ಅಂಗಡಿ ತೆರೆಯಲು ಅವಕಾಶ ನೀಡದೇ ಹೋದರೆ ಬದುಕು ಬೀದಿಗೆ ಬೀಳುತ್ತದೆ ಎಂದು ಪಟಾಕಿ ಮಾರಾಟಗಾರರು ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ ಅವರನ್ನು ಪರಿಪರಿಯಾಗಿ ಬೇಡಿಕೊಂಡರು.

‌ಇಲ್ಲಿನ ಜೆ.ಕೆ.ಮೈದಾನದಲ್ಲಿ ಶನಿವಾರ ಪಟಾಕಿ ಅಂಗಡಿಗಳ ತಪಾಸಣೆಗಾಗಿ ಬಂದ ಅವರನ್ನು ವ್ಯಾಪಾರಿಗಳ ಗುಂಪು ಸುತ್ತುವರೆದು ಕೈಮುಗಿದು ನಿಂತುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್‌ಗೌಡ, ‘ಹೈಕೋರ್ಟ್‌ ಸೂಚನೆಯನ್ನು ಮೀರಬಾರದು. ಹಸಿರು ಹಾಗೂ ಟ್ರೇಡ್‌ ಮಾರ್ಕ್‌ ಇರುವ ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡಬೇಕು. ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೂ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿದರು. ಈ ವೇಳೆ ವ್ಯಾಪಾರಸ್ಥರಿಗೂ ಅಧಿಕಾರಿಗಳಿಗೂ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಬಹಳಷ್ಟು ವ್ಯಾಪಾರಿಗಳಿಗೆ ಹಸಿರು ಪಟಾಕಿ ಯಾವುದು ಎಂಬುದರ ಕುರಿತೇ ಬಹಳಷ್ಟು ಗೊಂದಲಗಳಿವೆ. ಅಧಿಕಾರಿಗಳು ಟ್ರೇಡ್‌ ಮಾರ್ಕ್‌ ಎಲ್ಲಿ ಎಂದು ಕೇಳಿದಾಗ ಪಟಾಕಿಗೆ ಉಪಯೋಗಿಸಿದ ರಾಸಾಯನಿಕಗಳು ನಿಯಮಗಳನ್ನು ಮೀರಿಲ್ಲ ಎಂದು ಹೇಳಿ, ಅದರ ಮೇಲಿನ ಚೀಟಿಯನ್ನು ತೋರಿಸುತ್ತಿದ್ದರು. ಆದರೆ, ಅಧಿಕಾರಿಗಳು ಟ್ರೇಡ್‌ ಮಾರ್ಕ್‌ ಕಡ್ಡಾಯ ಎಂದು ಹೇಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.