ಮೊದಲ ಮಹಿಳಾ ಅಭ್ಯರ್ಥಿ ಆಯ್ಕೆ

ಬುಧವಾರ, ಏಪ್ರಿಲ್ 24, 2019
31 °C
1991ರ ಚುನಾವಣೆ; ಒಡೆಯರ್ ಹ್ಯಾಟ್ರಿಕ್ ಕನಸು ಭಗ್ನ,

ಮೊದಲ ಮಹಿಳಾ ಅಭ್ಯರ್ಥಿ ಆಯ್ಕೆ

Published:
Updated:

ಮೈಸೂರು: 1991ರಲ್ಲಿ ನಡೆದ 10ನೇ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾದರು. ಅಲ್ಲಿಂದ ಇಲ್ಲಿಯವರೆಗೂ ಮತ್ತೊಬ್ಬ ಮಹಿಳೆ ಆಯ್ಕೆಯಾಗಿಲ್ಲ. ಈ ಮೂಲಕ ಇದು ಇನ್ನೂ ದಾಖಲೆಯಾಗಿಯೇ ಉಳಿದಿದೆ. ಜತೆಗೆ, ಸತತ 10ನೇ ಬಾರಿಯೂ ಕಾಂಗ್ರೆಸ್‌ ಕ್ಷೇತ್ರದಲ್ಲಿ ತನ್ನ ಪ್ರಾತಿನಿಧ್ಯ ಉಳಿಸಿಕೊಂಡಿತು.

‌ಇದಕ್ಕೂ ಹಿಂದೆ 1989ರ ನವೆಂಬರ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ವಿ.ಪಿ.ಸಿಂಗ್‌ ಪ್ರಧಾನಿಯಾಗಿ ಆಯ್ಕೆಯಾದರು. ಆದರೆ, ಬಿಜೆಪಿ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದರಿಂದ ಇವರ ನೇತೃತ್ವದ ನ್ಯಾಷನಲ್ ಫ್ರಂಟ್ ಸರ್ಕಾರ ವಿಶ್ವಾಸ ಮತ ಕಳೆದುಕೊಂಡಿತು. ನಂತರ, ಸಮಾಜವಾದಿ ಜನತಾಪಾರ್ಟಿ ನೇತೃತ್ವದಲ್ಲಿ ಚಂದ್ರಶೇಖರ್ ಅವರು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿದರೂ ಹೆಚ್ಚು ದಿನ ಉಳಿಯಲಿಲ್ಲ. ಹೀಗಾಗಿ, ದೇಶದಲ್ಲಿ ಉಂಟಾದ ರಾಜಕೀಯ ಅಸ್ಥಿರತೆ ನಿವಾರಿಸಲು 1991ರಲ್ಲಿ ಚುನಾವಣೆ ಘೋಷಿಸಲಾಯಿತು.

ಮೈಸೂರಿನಿಂದ ಸತತ ಎರಡು ಬಾರಿ ಗೆದ್ದು ಸಚಿವ ಸ್ಥಾನ ಸಿಗದೇ ನಿರಾಶರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡಿದ್ದರು. ಇದೇ ವೇಳೆ ರಾಷ್ಟ್ರಮಟ್ಟದಲ್ಲಿ ರಥಯಾತ್ರೆ ಹಾಗೂ ಇನ್ನಿತರ ಚಟುವಟಿಕೆಗಳ ಮೂಲಕ ಬಿಜೆಪಿ ಸಾಕಷ್ಟು ಹೆಸರು ಗಳಿಸಿತ್ತು. ಚುನಾವಣೆಯ ಪೂರ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಹಲವು ವಿಶ್ಲೇಷಣೆಗಳು ಹೇಳಿದ್ದವು. ಬೋಫೋರ್ಸ್ ಹಗರಣ ಸೇರಿದಂತೆ ಹಲವು ಕಾರಣಗಳಿಂದ ರಾಜೀವ್‌ಗಾಂಧಿ ಅವರ ವರ್ಚಸ್ಸೂ ಕಳೆಗುಂದಿತ್ತು.

ಹೀಗಾಗಿ, ಒಡೆಯರ್ ಅವರು ಯಾವುದೇ ಮುನ್ಸೂಚನೆ ನೀಡದೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಇದು ರಾಜ್ಯ ಕಾಂಗ್ರೆಸ್ ಪಾಳೇಯದಲ್ಲಿ ದಿಗ್ಭ್ರಮೆ ಮೂಡಿಸಿತು. ತುಳಸಿದಾಸಪ್ಪ ನಂತರ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದ ಒಡೆಯರ್ ಕೈಕೊಟ್ಟಿದ್ದು, ಒಂದು ರೀತಿಯ ತಳಮಳಕ್ಕೆ ಕಾರಣವಾಯಿತು.

ಬೆಂಗಳೂರಿನಲ್ಲಿ ಹಾಸಿಗೆ ಹಿಡಿದಿದ್ದ ಡಿ.ದೇವರಾಜಅರಸು ಅವರ ಪತ್ನಿ ಚಿಕ್ಕಮ್ಮಣ್ಣಿ ಅವರನ್ನು ರಾಜೀವ್‌ಗಾಂಧಿ ನೋಡಲು ಬಂದು ಅವರ ಪುತ್ರಿ ಚಂದ್ರಪ್ರಭಾ ಅರಸು ಅವರನ್ನು ಕಣಕ್ಕೆ ಇಳಿಯಲು ಸೂಚಿಸಿದರು. ಈ ವೇಳೆ ಚಂದ್ರಪ್ರಭಾ ಹುಣಸೂರಿನಿಂದ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಮೊದಲಿಗೆ ಸ್ಪರ್ಧೆಗೆ ಒಪ್ಪಿಗೆ ನೀಡದ ಅವರು ಕೆ.ಎಸ್.ನಾಗರಾತ್ನಮ್ಮ ಹಾಗೂ ರಾಜಶೇಖರಮೂರ್ತಿ ಅವರ ಹೆಸರನ್ನು ಪ್ರಸ್ತಾಪಿಸಿದರು.

ಕೊನೆಗೆ ಒಲ್ಲದ ಮನಸ್ಸಿನಿಂದಲೇ ಸ್ಪರ್ಧೆಗೆ ಒಪ್ಪಿದ ಚಂದ್ರಪ್ರಭಾ ಅರಸು ಅವರು ಕ್ಷೇತ್ರದಲ್ಲಿ ಸ್ಪರ್ಧಿಸಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು. ಒಡೆಯರ್ ಅವರ ಗೆಲುವಿಗೆ ಅಂದಿನ ಬಿಜೆಪಿಯ ಪ್ರಭಾವಿ ನಾಯಕ ಎನಿಸಿದ್ದ ಎಲ್.ಕೆ.ಅಡ್ವಾಣಿ ಅವರು ಖುದ್ದು ಇಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಚುನಾವಣೆಗೂ ಮುಂಚೆಯೇ ಒಡೆಯರ್ ಗೆದ್ದಾಯಿತು ಎಂಬ ಅಭಿಪ್ರಾಯ ಎಲ್ಲೆಡೆ ಮೂಡಿತು.

ಉಲ್ಟಾ ಹೊಡೆದ ಲೆಕ್ಕಾಚಾರ:

ಚುನಾವಣೆಗೆ ಕೆಲವೇ ದಿನಗಳು ಇರುವಂತೆ ನಡೆದ ರಾಜೀವ್‌ಗಾಂಧಿ ಹತ್ಯಾಕಾಂಡ ಇಡೀ ಚುನಾವಣೆಯ ದಿಕ್ಕುಗಳನ್ನೇ ಬದಲಿಸಿಬಿಟ್ಟಿತು. ದೇಶದೆಲ್ಲೆಡೆ ದಿಗ್ಭ್ರಮೆ ಹಾಗೂ ತಲ್ಲಣಗಳಿಗೆ ಇದು ಕಾರಣವಾಯಿತು. ನಿಗದಿಯಾಗಿದ್ದ ಚುನಾವಣೆಯನ್ನು 20 ದಿನಗಳ ಕಾಲ ಮುಂದೂಡಲಾಯಿತು. ಕಾಂಗ್ರೆಸ್‌ಗೆ ಅನುಕಂಪದ ಅಲೆ ಸಾಥ್ ನೀಡಿತು.

ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತು. ತಮ್ಮ ತಂದೆ ದೇವರಾಜ ಅರಸು ಅವರು ಜಾರಿಗೆ ತಂದಿದ್ದ ಜನಪರ ಕಾರ್ಯಕ್ರಮಗಳನ್ನೇ ಪ್ರಚಾರದ ಪ್ರಮುಖ ವಿಷಯವನ್ನಾಗಿಸಿಕೊಂಡ ಚಂದ್ರಪ್ರಭಾ ಅರಸು ಗೆಲುವಿಗೆ ಕಾರ್ಯತಂತ್ರ ರೂಪಿಸಿದರು. ಈ ಬಾರಿ ಒಡೆಯರ್ ಅವರನ್ನು ಜನರು ಸಾರಸಗಟಾಗಿ ತಿರಸ್ಕರಿಸಿದರು. ‘ಹ್ಯಾಟ್ರಿಕ್’ ಸಾಧನೆ ಮಾಡುವ ಅವರ ಹಂಬಲ ಮಣ್ಣಾಯಿತು. ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾಗುವ ಮೂಲಕ ದಾಖಲೆ ಬರೆದರು.

ಅಭ್ಯರ್ಥಿ ಪಕ್ಷ ಗಳಿಸಿದ ಮತಗಳು ಶೇ. ಪ್ರಮಾಣ
ಚಂದ್ರಪ್ರಭಾ ಅರಸು ಕಾಂಗ್ರೆಸ್ 2,25,881 39.47
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಬಿಜೆಪಿ 2,08,999 36.52
ಡಿ.ಮಾದೇಗೌಡ ಜನತಾ ಪಕ್ಷ 1,17,471 20.53
ರಾಜು ಪಕ್ಷೇತರ 7,611 1.33
ಕೆ.ಎಸ್‌.ನಂಜೇಗೌಡ ಪಕ್ಷೇತರ 3,016 0.53
ಎಚ್‌.ಎಸ್‌.ಸಿದ್ದರಾಜು ಪಕ್ಷೇತರ 2,630 0.46
ಮೂಗೂರು ನಂಜುಂಡಸ್ವಾಮಿ ಪಕ್ಷೇತರ 2,078 0.36
ಎಂ.ಎನ್‌.ರಾಜು ಪಕ್ಷೇತರ 1,618 0.28
ಲಿಂಗಪ್ಪ ಪಕ್ಷೇತರ 1,257 0.22
ವೈ.ಸಿ.ರೇವಣ್ಣ ಪಕ್ಷೇತರ 585 0.19
ಶಫಿ ಅಹಮ್ಮದ್‌ ಷರೀಫ್‌ ಪಕ್ಷೇತರ 1,086 0.10
ಮೈಸೂರು ಕ್ಷೇತ್ರದಲ್ಲಿ ಚಲಾವಣೆಯಾದ ಮತದಾನ ಶೇ 61.25

 

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !