ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಪರಿಹಾರಕ್ಕೆ ತಲಾ ₹ 10,000 ದೇಣಿಗೆ

ಆ.16ರಂದು ಪಾಲಿಕೆ ಸದಸ್ಯರು ಮೂರು ತಂಡಗಳಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಣೆ
Last Updated 13 ಆಗಸ್ಟ್ 2019, 15:00 IST
ಅಕ್ಷರ ಗಾತ್ರ

ಮೈಸೂರು: ಸುದೀರ್ಘ ಚರ್ಚೆಯ ನಂತರ ಮೈಸೂರು ಮಹಾನಗರ ಪಾಲಿಕೆ ಸದಸ್ಯರು ನೆರೆ ಸಂತ್ರಸ್ತರಿಗಾಗಿ ತಲಾ ₹ 10,000 ನಗದನ್ನು ವೈಯಕ್ತಿಕವಾಗಿ ನೀಡಲು ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ನಿರ್ಧರಿಸಿದರು.

ನಗರದ ಪಾಲಿಕೆ ಕಚೇರಿಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು.

ಆ.16ರ ಶುಕ್ರವಾರ ಪಾಲಿಕೆಯ ಎಲ್ಲ 65 ಸದಸ್ಯರು ಒಂದೆಡೆ ಜಮಾಯಿಸಿ, ಮೂರು ತಂಡಗಳಾಗಿ ವಿಂಗಡಣೆಯಾಗಿ ನಗರದ ವಿವಿಧೆಡೆ ಸಂಚರಿಸಿ, ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಲು ನಿರ್ಧರಿಸಿದರು.

ಸಭೆ ಆರಂಭಗೊಳ್ಳುತ್ತಿದ್ದಂತೆ ಮೇಯರ್ ಪುಷ್ಪಲತಾ ಜಗನ್ನಾಥ್ ಈ ವಿಷಯ ಪ್ರಸ್ತಾಪಿಸಿದರು. ಸದಸ್ಯರಾದ ಶಿವಕುಮಾರ್, ಬಿ.ವಿ.ಮಂಜುನಾಥ್, ಎಸ್‌ಬಿಎಂ ಮಂಜು, ರಾಮಪ್ರಸಾದ್, ಆರೀಫ್‌ ಹುಸೇನ್, ಪ್ರೇಮಾ, ರಮೇಶ್‌ ಇನ್ನಿತರರು ಚರ್ಚೆಯಲ್ಲಿ ಭಾಗಿಯಾದರು.

ಪಾಲಿಕೆಯ ಆಯುಕ್ತ ಪಿ.ಎಸ್.ಕಾಂತರಾಜು ನೆರೆಯ ಚಿತ್ರಣವನ್ನು ಸದಸ್ಯರಿಗೆ ಸವಿವರವಾಗಿ ತಿಳಿಸಿದರು. ಉಪ ಆಯುಕ್ತ (ಆಡಳಿತ) ಶಿವಾನಂದ ಮೂರ್ತಿ ಮೈಸೂರು ಮಹಾನಗರ ಪಾಲಿಕೆಗೆ ಉತ್ತಮ ಹೆಸರಿದೆ. ಗೌರವವಾಗಿ ₹ 10 ಲಕ್ಷ ದೇಣಿಗೆ ನೀಡಿದರೆ ಶೋಭೆ ಹೆಚ್ಚಲಿದೆ ಎಂಬ ಸಲಹೆ ನೀಡಿದರು.

ಹಲ ಸದಸ್ಯರು ಎರಡು ತಿಂಗಳ ಗೌರವಧನ, ಮೂರು ತಿಂಗಳ ಗೌರವಧನ ಕೊಡುವ ಪ್ರಸ್ತಾಪ ಮಾಡಿದರು. ಅಂತಿಮವಾಗಿ ಸದಸ್ಯೆ ಪ್ರೇಮಾ ಗೌರವಧನದ ಪ್ರಸ್ತಾಪವೇ ಬೇಡ. ವೈಯಕ್ತಿಕವಾಗಿ ತಲಾ ₹ 10,000 ನೀಡೋಣ ಎಂದು ಹೇಳಿದ್ದಕ್ಕೆ ಎಲ್ಲ ಸದಸ್ಯರು, ಮೇಯರ್ ಸಮ್ಮತಿ ವ್ಯಕ್ತಪಡಿಸಿದರು.

ಸಮಸ್ಯೆಗಳ ಪ್ರಸ್ತಾಪ: ಸಭೆಯಲ್ಲಿ ನೆರೆ ಸಂತ್ರಸ್ತರಿಗೆ ನೆರವು ನೀಡುವ ಜತೆಯಲ್ಲೇ, ಮೈಸೂರು ಮಹಾನಗರದ ಸಮಸ್ಯೆಗಳು ಚರ್ಚೆಯಾದವು. ಯುಜಿಡಿ, ಬೀದಿ ದೀಪದ ಸಮಸ್ಯೆ ಮತ್ತೆ ಪ್ರತಿಧ್ವನಿಸಿತು. ಟೆಂಡರ್ ಸಮಸ್ಯೆಯೂ ಪ್ರಸ್ತಾಪಗೊಂಡಿತು.

ಮಳೆಯಿಂದ ರಸ್ತೆಗಳು ಗುಂಡಿ ಬಿದ್ದಿವೆ. ದಸರೆ ಆರಂಭವಾಗುವ ಒಳಗೆ ದುರಸ್ತಿಗೊಳಿಸಿ. ನಾವು ಸದಸ್ಯರಾಗಿ ಒಂದು ವರ್ಷವಾಯ್ತು. ವಾರ್ಡ್‌ನಲ್ಲಿ ಒಂದೇ ಒಂದು ಬೀದಿ ದೀಪ ಅಳವಡಿಸಲು ಆಗಿಲ್ಲ. ಮೊದಲು ನಮ್ಮೂರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗೋಣ. ನಗರದಲ್ಲಿನ ಹಳೆಯ ಮನೆಗಳು ಜಡಿ ಮಳೆಗೆ ಸೋರಿ ಆತಂಕ ಸೃಷ್ಟಿಸಿವೆ. ಇಂತಹ ಮನೆಗಳ ಸರ್ವೇ ನಡೆಸಿ, ಸೂಕ್ತ ಕ್ರಮ ಜರುಗಿಸಿ... ಎಂಬಿತ್ಯಾದಿ ವಿಷಯಗಳ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT