ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣಾ: ಮಾವಿನ ಮರಗಳಲ್ಲಿ ಪುಷ್ಪರಾಶಿ; ಉತ್ತಮ ಇಳುವರಿ ನಿರೀಕ್ಷೆಯಲ್ಲಿ ರೈತರು

1,331 ಎಕರೆ ಪ್ರದೇಶದಲ್ಲಿ ಮಾವು
Last Updated 21 ಫೆಬ್ರುವರಿ 2022, 5:54 IST
ಅಕ್ಷರ ಗಾತ್ರ

ಜಯಪುರ: ಮೈಸೂರು ತಾಲ್ಲೂಕಿನಾ ದ್ಯಂತ 1,331 ಎಕರೆ ಪ್ರದೇಶದಲ್ಲಿ ಮಾವು ಬೆಳೆದಿದ್ದು, ಜಯಪುರ ಹೋಬಳಿ ವ್ಯಾಪ್ತಿಯಲ್ಲೇ 750 ಎಕರೆ ಜಾಗದಲ್ಲಿ ಮಾವು ಬೆಳೆಯಲಾಗಿದೆ.

ಬೀರಿಹುಂಡಿ, ಡಿಎಂಜಿ ಹಳ್ಳಿ, ಗೋಪಾಲಪುರ, ಧನಗಹಳ್ಳಿ, ಉದ್ಬೂರು, ಮಾರ್ಬಳ್ಳಿ, ಜಯಪುರ, ಡಿ.ಸಾಲುಂಡಿ, ಹಾರೋಹಳ್ಳಿ, ಕಡಕೋಳ, ಸಿಂಧುವಳ್ಳಿ, ತಳೂರು, ದೂರ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಚ್ಚಾಗಿ ಬಾದಾಮಿ, ರಸಪುರಿ, ಮಲಗೋವಾ, ಸೆಂದೂರಾ, ಜೀರಾ, ತೋತಾಪುರಿ ತಳಿಯ ಮಾವನ್ನು ರೈತರು ಬೆಳೆದಿದ್ದಾರೆ.

‘ಕಳೆದ ವರ್ಷ ಉತ್ತಮ ಇಳುವರಿ ಪಡೆದರೂಕೋವಿಡ್ ಲಾಕ್‌ಡೌನ್‌ ನಿಂದಾಗಿ ಸೂಕ್ತ ಮಾರುಕಟ್ಟೆ ಮತ್ತು ದರ ಇಲ್ಲದೆ ರೈತರು ನಷ್ಟ ಅನುಭವಿಸಿದ್ದರು. ಈ ವರ್ಷ ಉತ್ತಮ ಮಳೆಯಾಗಿದ್ದು, ಮಾವಿನ ಮರಗಳು ಚಿಗುರೊಡೆದು ಹೂವು ಬಿಟ್ಟಿವೆ. ಈ ಬಾರಿ ಉತ್ತಮ ಇಳುವರಿ ಹಾಗೂ ಬೆಲೆ ನಿರೀಕ್ಷೆಯಲ್ಲಿ ರೈತರಿದ್ದಾರೆ’ ಎಂದು ಮಾವು ಬೆಳೆಗಾರರಾದ ನವೀನ್, ಮಹೇಶ್, ಆನಂದ್, ಬಸವರಾಜೇಗೌಡ ತಿಳಿಸಿದರು.

‘ಮಾವಿನ ಹೂವು ಉದುರದಂತೆ, ಕೀಟಗಳ ನಿಯಂತ್ರಣಕ್ಕೆ ಸಿಂಪಡಿಸ ಬೇಕಾದ ಔಷಧಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗಿದೆ. ಮಾರ್ಚ್– ಏಪ್ರಿಲ್‌ನಲ್ಲಿ ಮಾವು ಮೊಗರು ಕಚ್ಚುತ್ತವೆ. ಈ ಸಮಯದಲ್ಲಿ ವಾಡಿಕೆ ಮಳೆಯಾದರೆ ಉತ್ಕೃಷ್ಟ ಫಸಲು ಸಿಗುತ್ತದೆ. ಜೂನ್– ಜುಲೈನಲ್ಲಿ ಕಟಾವಿಗೆ ಬರುತ್ತದೆ’ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಡಿ.ವಿನೂತನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮರಗಳಲ್ಲಿ ಹಸಿರು ಎಲೆಗಳು ಕಾಣದಷ್ಟು ಪುಷ್ಪರಾಶಿ ಇದೆ. ಮಾವಿನ ಹೂವು ನೋಡುಗರನ್ನು ಆಕರ್ಷಿಸುತ್ತಿದೆ. ಹೂವಿನ ಮಕರಂದ ಹೀರಲು ದುಂಬಿಗಳು ಮತ್ತು ಜೇನುನೊಣಗಳು ಲಗ್ಗೆಯಿಟ್ಟಿವೆ. ಮಾವಿನ ಘಮಲು ಹಿತವೆನಿಸುವಷ್ಟು ಆಕರ್ಷಿಸುತ್ತಿದೆ. ಈ ಬಾರಿ ಉತ್ತಮ ಫಸಲು ಬರುವ ನಿರೀಕ್ಷೆ ಇದೆ’ ಎಂದು ಗೋಪಾಲಪುರದ ರೈತ ವೆಂಕಟೇಶ್ ಹರ್ಷ ವ್ಯಕ್ತಪಡಿಸಿದರು.

‘ಮಾವು ಮಾರುಕಟ್ಟೆ ಆರಂಭಕ್ಕೆ ಕ್ರಮ’

‘ಹೋಬಳಿಯ ಬೀರಿಹುಂಡಿಯಲ್ಲಿ ಪ್ರತಿವರ್ಷ ಮಾವಿನ ಮಾರುಕಟ್ಟೆ ಮಂಡಿ ತೆರೆಯಲಾಗುತ್ತಿದೆ. ಮಾರುಕಟ್ಟೆ ದರದಲ್ಲಿ ರೈತರಿಂದ ಮಾವು ಖರೀದಿಸಲು ಒತ್ತು ನೀಡಲಾಗಿದೆ. ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ ಸೇರಿ ದಂತೆ ಹೊರರಾಜ್ಯಗಳ ವರ್ತಕರು ಬಂದರೆ ರೈತರಿಗೆ ಉತ್ತಮ ಬೆಲೆ ಲಭಿಸಲಿದೆ. ಮಾವಿನ ರಸ ತಯಾರಿಸುವ ಕಾರ್ಖಾನೆಗಳಿಂದ ಬಾದಾಮಿ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನಿರ್ದೇಶನದಂತೆ ರೈತರಿಂದ ಮಾವು ಖರೀದಿಸಲಾಗುವುದು’ ಎಂದು ಎಚ್ಎಂಐ ಫ್ರೂಟ್ಸ್ ಮಾಲೀಕ ಮಹಮ್ಮದ್ ಆಲಿ ಮತ್ತು ಮೊಹಿದ್ದೀನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT