ಮೈಸೂರು: ಫಲಪುಷ್ಪ ಪ್ರದರ್ಶನ; ಈ ಬಾರಿಯ ಆಕರ್ಷಣೆ ಲೋಟಸ್‌ ಟೆಂಪಲ್‌

7

ಮೈಸೂರು: ಫಲಪುಷ್ಪ ಪ್ರದರ್ಶನ; ಈ ಬಾರಿಯ ಆಕರ್ಷಣೆ ಲೋಟಸ್‌ ಟೆಂಪಲ್‌

Published:
Updated:

ಮೈಸೂರು: ನಗರದ ಕುಪ್ಪಣ್ಣ ಉದ್ಯಾನದಲ್ಲಿ (ನಿಶಾದ್‌ ಬಾಗ್‌) ಅ.10ರಿಂದ 21ರವರೆಗೆ ದಸರಾ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಅ.10ರಂದು ಸಂಜೆ 4.45ಕ್ಕೆ ನಡೆಯುವ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಅವರು ಉದ್ಘಾಟಿಸಲಿದ್ದಾರೆ. ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 9.30ರವರೆಗೆ ಇರಲಿದೆ. 12 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಿಲ್ಲಾ ತೋಟಗಾರಿಕೆ ಸಂಘದ ಅಧ್ಯಕ್ಷೆಯೂ ಆದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಲೋಟಸ್‌ ಟೆಂಪಲ್‌: ದೆಹಲಿಯ ಆಕರ್ಷಣೀಯ ಪ್ರವಾಸಿ ಸ್ಥಳವಾದ ಕಮಲದ ಹೂವಿನ ಕಟ್ಟಡವು (ಲೋಟಸ್‌ ಟೆಂಪಲ್‌) ಈ ವರ್ಷದ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ.  ನೂತನವಾಗಿ ನಿರ್ಮಿಸಿರುವ ಗಾಜಿನ ಮನೆಯಲ್ಲಿ ಲೋಟಸ್‌ ಟೆಂಪಲ್‌ ಮಾದರಿಯನ್ನು ನಿರ್ಮಿಸಲಾಗುತ್ತಿದೆ. ಶ್ವೇತವರ್ಣದ ಗುಲಾಬಿ ಹಾಗೂ ಆಸ್ಪರಾಗಸ್‌ ಹೂವುಗಳಿಂದ ನಿರ್ಮಿಸಲಾಗುತ್ತಿದೆ. ಇದು 8 ಅಡಿ ಎತ್ತರ ಹಾಗೂ 40 ಅಡಿ ಸುತ್ತಳತೆ ಹೊಂದಿದೆ.

ಕ್ಯಾನನ್‌ (ಫಿರಂಗಿ): ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಬಳಸುತ್ತಿದ್ದ ಫಿರಂಗಿಯ ಮಾದರಿಯನ್ನು ಪ್ರದರ್ಶಿಸಲಾಗುತ್ತಿದೆ. ಇದನ್ನು ಬಿಳಿ ಹಾಗೂ ಕೆಂಪು ಗುಲಾಬಿ ಹೂವುಗಳಿಂದ ನಿರ್ಮಿಸಲಾಗುತ್ತಿದೆ.

ಅಶೋಕ ಸ್ತಂಭ: ಮೌರ್ಯ ದೊರೆ ಅಶೋಕನಿಂದ ನಿರ್ಮಿತವಾದ ಅಶೋಕ ಸ್ತಂಭದ ಮಾದರಿಯನ್ನು ಕೆಂಪು, ಬಿಳಿ ಹಾಗೂ ಹಳದಿ ಗುಲಾಬಿ, ಸೇವಂತಿಗೆ ಹೂವುಗಳಿಂದ ನಿರ್ಮಿಸಲಾಗುತ್ತಿದೆ.

ಹೆಲ್ಪಿಂಗ್‌ ಹ್ಯಾಂಡ್‌: ಕೊಡಗು ಹಾಗೂ ಕೇರಳದ ಪ್ರವಾಹ ಪೀಡಿತರ ನೆರವಿನ ಹಸ್ತ ಚಾಚಬೇಕು ಎಂಬ ಉದ್ದೇಶದಿಂದ ಹೆಲ್ಪಿಂಗ್‌ ಹ್ಯಾಂಡ್‌ ಮಾದರಿಯನ್ನು ನಿರ್ಮಿಸಲಾಗುತ್ತಿದೆ. 8 ಅಡಿ ಅಳತೆಯ ಎರಡು ಹೆಲ್ಪಿಂಗ್‌ ಹ್ಯಾಂಡ್‌ ಮಾದರಿಯನ್ನು ಮೆಕ್ಸಿಕನ್‌ ಹುಲ್ಲು ಹಾಗೂ ಕೆಂಪು, ಬಿಳಿ ಬಣ್ಣದ ಗುಲಾಬಿ ಹೂವುಗಳಿಂದ ರೂಪಿಸಲಾಗುತ್ತಿದೆ.

ಅರಮನೆಯ ಪ್ರವೇಶದ್ವಾರದಿಂದ ಹೊರ ಬರುತ್ತಿರುವ ಆನೆ ಮಾದರಿಯನ್ನು ವಿವಿಧ ಬಣ್ಣದ ಹೂವುಗಳಿಂದ ರೂಪಿಸಲಾಗುತ್ತಿದೆ. ಪಾಟರಿ ಡಾಲ್ಸ್‌ ಪರಿಕಲ್ಪನೆಯನ್ನೂ ಕಾರ್ಯಗತಗೊಳಿಸಲಾಗುತ್ತಿದೆ. 5 ಟೇಬಲ್‌ಗಳ ಮೇಲೆ 20 ಗೊಂಬೆಗಳನ್ನು ಗುಲಾಬಿ ಹಾಗೂ ಪೆಟೋನಿಯಸ್‌ ಹೂವುಗಳಿಂದ ಸಿಂಗರಿಸಲಾಗುತ್ತಿದೆ. 5 ಅಡಿ ಎತ್ತರದ ಮಹಿಳೆ ಹಾಗೂ 6 ಅಡಿ ಎತ್ತರದ ಪುರುಷ ಆಕೃತಿಯ ಡ್ಯಾನ್ಸಿಂಗ್‌ ಡಾಲ್ಸ್‌ ಮಾದರಿ, ಟ್ರೀ ಹೌಸ್‌ ಮಾದರಿಯನ್ನೂ ಈ ಪ್ರದರ್ಶನದಲ್ಲಿ ಕಾಣಬಹುದು.

ದೇಶದ ರೈತರ ಬಲಿದಾನದ ಪ್ರತೀಕವಾದ ಅಮರ್‌ ಜವಾನ್‌ ಸ್ಮಾರಕ ಮಾದರಿ, ಟೀ ಕೆಟಲ್‌ ಮಾದರಿ, ಡಾಲ್ಫಿನ್‌, ಪೆಂಗ್ವಿನ್‌, ಡೊರೆಮನ್‌ ವಿತ್‌ ಮಶ್ರೂಮ್‌ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ.

ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷೆ ಡಿ.ಪ್ರಭಾ ಮಂಡಲ್‌ ಇತರರು ಇದ್ದರು.

ಪ್ರವೇಶ ಶುಲ್ಕದ ವಿವರ:

6ರಿಂದ 18 ವರ್ಷದೊಳಗಿನ ಮಕ್ಕಳಿಗೆ ₹ 10

18 ವರ್ಷ ಮೇಲ್ಪಟ್ಟವರಿಗೆ ₹ 25

6 ವರ್ಷದೊಳಗಿನ ಮಕ್ಕಳಿಗೆ ಉಚಿತ

ಬೆಳಿಗ್ಗೆ 10ರಿಂದ 1ರವರೆಗೆ ಶಾಲಾ ಸಮವಸ್ತ್ರದಲ್ಲಿ ಬರುವ ವಿದ್ಯಾರ್ಥಿಗಳಿಗೆ ಉಚಿತ

ಗಾಜಿನ ಮನೆ ಲೋಕಾರ್ಪಣೆ:

ಇದೇ ಉದ್ಯಾನದಲ್ಲಿ ₹ 7.4 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಗಾಜಿನ ಮನೆಯನ್ನು ಅ.10ರಂದು ಸಂಜೆ 4.30ಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಉಪಸ್ಥಿತರಿರಲಿದ್ದಾರೆ.

ಲೋಟಸ್‌ ಟೆಂಪಲ್‌ಗೆ 2.5 ಲಕ್ಷ ಹೂವುಗಳು:

ಲೋಟಸ್‌ ಟೆಂಪಲ್‌ಗೆ 2.5 ಲಕ್ಷ ಗುಲಾಬಿ ಹಾಗೂ ಸೇವಂತಿಗೆ ಹೂವುಗಳನ್ನು ಬಳಸಲಾಗುತ್ತಿದೆ. ಸೆ. 17ರಂದು ಈ ಹೂವುಗಳನ್ನು ಬದಲಿಸಿ ಹೊಸ ಹೂವುಗಳನ್ನು ಅಳವಡಿಸಲಾಗುತ್ತದೆ. ಇದಲ್ಲದೆ, 70 ಸಾವಿರ ಕುಂಡಗಳಲ್ಲಿ 70 ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಮಕ್ಕಳಿಗಾಗಿ ಆಟಿಕೆಗಳನ್ನೂ ಅಳವಡಿಸಲಾಗಿದೆ. ಭದ್ರತೆ ದೃಷ್ಟಿಯಿಂದ 12 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 2 ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಿ.ಮಂಜುನಾಥ್‌ ತಿಳಿಸಿದರು.

ಫಲಪುಷ್ಪ ಪ್ರದರ್ಶನದ ಸಂದರ್ಭದಲ್ಲಿ ಸಂಜೆ 7ರಿಂದ 7.30 ಹಾಗೂ 8ರಿಂದ 8.30ರವರೆಗೆ ಸಂಗೀತ ನೃತ್ಯ ಕಾರಂಜಿ ಇರುತ್ತದೆ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !