ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೈ ಓವರ್‌ ಲೋಕಾರ್ಪಣೆ, ‘ಮೆಮು’ ರೈಲಿಗೆ ಚಾಲನೆ

Last Updated 23 ಡಿಸೆಂಬರ್ 2018, 16:57 IST
ಅಕ್ಷರ ಗಾತ್ರ

ಮೈಸೂರು: ಹಿನಕಲ್‌ ಬಳಿ ನಿರ್ಮಿಸಿರುವ ನಗರದ ಮೊದಲ ಫ್ಲೈ ಓವರ್‌ ಭಾನುವಾರ ಲೋಕಾರ್ಪಣೆಗೊಂಡಿತು. ಅಂತೆಯೇ, ಮೈಸೂರು – ಬೆಂಗಳೂರು ನಡುವೆ ಸಂಚರಿಸುವ ‘ಮೆಮು’ ರೈಲಿಗೆ ಚಾಲನೆಯನ್ನೂ ನೀಡಲಾಯಿತು.

ಹಿನಕಲ್ ಬಳಿ ಹೊರ ವರ್ತುಲ ರಸ್ತೆ ಜಂಕ್ಷನ್‌ನಲ್ಲಿ ನಿರ್ಮಿಸಿರುವ ‘ಗ್ರೇಡ್ ಸೆಪರೇಟರ್’ (ಫ್ಲೈ ಓವರ್) ಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಿದರು. 2014ರಲ್ಲಿ ಮಂಜೂರಾಗಿದ್ದ ಈ ಯೋಜನೆಗೆ ಆರಂಭದಲ್ಲಿ ₹ 15.10 ಕೋಟಿ ವೆಚ್ಚವೆಂದು ಅಂದಾಜಿಸಲಾಗಿತ್ತು. ಅಂತಿಮವಾಗಿ ಒಟ್ಟು ₹ 23.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಾಜ್ಯ ಸರ್ಕಾರ ₹ 4.55 ಕೋಟಿ, ಕೇಂದ್ರ ಸರ್ಕಾರ ₹ 9.10 ಕೋಟಿ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ₹ 9.83 ಹಣ ಭರಿಸಿದೆ.

‘ಈ ಫ್ಲೈ ಓವರ್‌ ಅನ್ನು ಐಶ್ವರ್ಯ ಪೆಟ್ರೋಲ್‌ ಬಂಕ್‌ ಬಳಿಯಿಂದಲೇ ನಿರ್ಮಿಸಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಭವಿಷ್ಯದ ದಿನಗಳಲ್ಲಿ ನಗರದಲ್ಲಿ ಇನ್ನಷ್ಟು ಫ್ಲೈ ಓವರ್‌ಗಳನ್ನು ನಿರ್ಮಿಸಲಾಗುವುದು. ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರವಾಗಲಿದೆ’ ಎಂದು ದೇವೇಗೌಡ ಹೇಳಿದರು.

ಸಂಸದ ಪ್ರತಾ‍ಪ ಸಿಂಹ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಕಾರ್ಯ ನಡೆಸಿವೆ. ಹಾಗಾಗಿ, ಉತ್ತಮ ಕಾರ್ಯ ನಡೆದಿದೆ’ ಎಂದರು.

ಫ್ಲೈ ಓವರ್‌ ಒಟ್ಟು 980 ಮೀಟರ್‌ ಉದ್ದ ಇದೆ. ಚತುಷ್ಪಥ ರಸ್ತೆಯು ಒಟ್ಟು 17.20 ಮೀಟರ್‌ ಅಗಲವಿದೆ. ಎರಡೂ ಬದಿಯಲ್ಲಿ 6 ಮೀಟರ್ ಅಗಲದ ಸೇವಾ ರಸ್ತೆ, 1.5 ಮೀಟರ್‌ ಅಗಲದ ಪಾದಚಾರಿ ಮಾರ್ಗವಿದೆ.

‘ಮೆಮು’ ರೈಲಿಗೆ ಚಾಲನೆ

ಮೈಸೂರು– ಬೆಂಗಳೂರು ನಡುವೆ ಸಂಚರಿಸುವ ‘ಮೆಮು’ ರೈಲಿಗೆ ಭಾನುವಾರ ಸಂಸದ ಪ್ರತಾಪ ಸಿಂಹ ಚಾಲನೆ ನೀಡಿದರು.

ರೈಲು ಸಂಚಾರವು ಡಿ. 26ರಿಂದ ಅಧಿಕೃತವಾಗಿ ಆರಂಭವಾಗಲಿದೆ. ಪ್ರಯಾಣದ ದರ ₹ 30 ಇರಲಿದೆ ಎಂದು ಪ್ರತಾಪ ಸಿಂಹ ತಿಳಿಸಿದರು.

ಶಾಸಕ ಎಲ್‌.ನಾಗೇಂದ್ರ, ವಿಧಾನ ಪರಿಷತ್‌ ಸದಸ್ಯರಾದ ಸಂದೇಶ್‌ ನಾಗರಾಜ್, ಮರಿತಿಬ್ಬೇಗೌಡ, ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗಾರ್ಗ್‌, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಜಯ್ ಸಿನ್ಹಾ ಭಾಗವಹಿಸಿದ್ದರು.

ಸಿಂಹ ಗೆಲ್ಲುತ್ತಾರೆ– ಸಂದೇಶ್ ನಾಗರಾಜ್

ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ ಸಿಂಹ ಗೆಲುವು ಖಚಿತ ಎಂದು ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್ ಹೇಳಿದರು.

ಪ್ರತಾಪ ಸಿಂಹ ಜಿಗಣೆಯಂತೆ. ಹಿಡಿದ ಕೆಲಸ ಮಾಡಿಯೇ ತೀರುತ್ತಾರೆ. ಹಲವು ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಇದೀಗ ‘ಮೆಮು’ ರೈಲು ಬಂದಿದೆ ಎಂದು ಶ್ಲಾಘಿಸಿದರು.

ಮೈಸೂರಿನಿಂದ ಬೆಂಗಳೂರಿಗೆ ಬೆಳಿಗ್ಗೆ 4 ರೈಲುಗಳು ಸಂಚರಿಸುತ್ತಿವೆ. ಇನ್ನೂ ಒಂದು ರೈಲನ್ನು ತರುವ ಪ್ರಯತ್ನ ಮಾಡಲಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT