ಭೋಜನಪ್ರಿಯರನ್ನು ಕೈ ಬೀಸಿ ಕರೆದ ಆಹಾರ ಮೇಳ

7
ರಾಜ್ಯ, ದೇಶದ ಆಹಾರದ ಜತೆಗೆ ವಿದೇಶಿ ತಿನಿಸುಗಳೂ ಲಭ್ಯ

ಭೋಜನಪ್ರಿಯರನ್ನು ಕೈ ಬೀಸಿ ಕರೆದ ಆಹಾರ ಮೇಳ

Published:
Updated:
Deccan Herald

ಮೈಸೂರು: ಇಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್‌ ಮೈದಾನಕ್ಕೆ ಬಂದರೆ ಒಂದು ಕಡೆ ಬುಡಕಟ್ಟು ಜನಾಂಗದವರ ಆಹಾರ ಸಿಗುತ್ತದೆ. ಮತ್ತೊಂದು ಕಡೆ ಮುಖ ಮಾಡಿದರೆ ಅಲ್ಲಿ ವಿದೇಶದ ಊಟದ ಘಮಲು ಮೂಗಿಗೆ ಅಡರುತ್ತದೆ. ಮೊಗದಂದು ಕಡೆ ದೇಸಿ ಆಹಾರದ ಸುವಾಸನೆ ಹೊರಸೂಸುತ್ತಿದೆ.

ಹೌದು, ಒಂದೇ ಸೂರಿನಲ್ಲಿ ಬಗೆಬಗೆ ತಿಂಡಿ ತಿನಿಸುಗಳ ಮಾರಾಟಕ್ಕೆ ಬುಧವಾರ ಚಾಲನೆ ನೀಡಲಾಯಿತು.‌

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ವಿಶೇಷ ಎಂದರೆ ವಿದೇಶದ ಆಹಾರ. ಮೈಸೂರು ವಿಶ್ವವಿದ್ಯಾನಿಲಯ ಅಂತರರಾಷ್ಟ್ರೀಯ ವಿದೇಶಿ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಅಂತರರಾಷ್ಟ್ರೀಯ ಕೇಂದ್ರದ ವತಿಯಿಂದ ನಿತ್ಯ ಒಂದೊಂದು ದೇಶದ ಆಹಾರವನ್ನು ಉಣಬಡಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.

ಪ್ರವೇಶದ್ವಾರದ ಎಡಭಾಗದಲ್ಲಿರುವ ವಿದೇಶಿ ಆಹಾರ ಮಳಿಗೆಯಲ್ಲಿ ಬುಧವಾರ ಯೆಮನ್ ದೇಶದ ವಿದ್ಯಾರ್ಥಿಗಳು ಸುಲಿಯಾ, ರೈಸ್ ಚಿಕನ್‌ನ್ನು ಮಾರಾಟಕ್ಕೆ ಇಟ್ಟಿದ್ದರು. ಮುಂದಿನ ದಿನಗಳಲ್ಲಿ ಇರಾನ್, ಫೂಜಿ, ಉಗಾಂಡ, ಟಿಬೆಟ್, ಜಾಂಬಿಯಾ, ಅಮೆರಿಕಾ ಸೇರಿದಂತೆ ಇನ್ನಿತರ ರಾಷ್ಟ್ರಗಳ ವಿದ್ಯಾರ್ಥಿಗಳು ತಮ್ಮ ದೇಶದ ಆಹಾರವನ್ನು ತಯಾರಿಸಿ ಮಾರಾಟಕ್ಕೆ ಇಡುತ್ತಾರೆ.

ಕರ್ನಾಟಕ ಬುಡಕಟ್ಟು ಪರಿಷತ್ ವೇದಿಕೆಯ ವತಿಯಿಂದ ತೆರೆದಿರುವ ಆಹಾರ ಮಳಿಗೆಯಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ ಬುಡಕಟ್ಟು ಜನಾಂಗದವರು ತಿತ್ತಾರ್ ಎಂಬ ವಿಶಿಷ್ಟ ಬಗೆಯ ಬುಡಕಟ್ಟು ಆಹಾರವನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಇದರ ಜತೆಗೆ, ಏಡಿ (ನಳ್ಳಿ) ಸಾರು ಮುದ್ದೆ, ಮಾಗಳ್ಳಿ ಟೀ ಮೊದಲಾದ ತಿನಿಸುಗಳು ಲಭ್ಯವಿವೆ. ಕಾಡು ಶುಂಠಿ, ಕಾಡು ಅರಿಶಿಣ, ಕಾಡು ಕೊತ್ತಂಬರಿಯಿಂದ ತಯಾರಾಗುವ ತಿತ್ತಾರ್ ಬೆಲೆ ₹ 100. ಏಡಿ ಸಾರು ಶುಕ್ರವಾರದಿಂದ ಲಭ್ಯವಾಗಲಿದ್ದು, ಒಂದು ಮುದ್ದೆ ಜತೆಗೆ ಎರಡು ನಳ್ಳಿ (ಏಡಿ) ಇರಲಿವೆ. ಇದಕ್ಕೂ ₹ 100 ದರ ನಿಗದಿ ಮಾಡಲಾಗಿದೆ. ಮಾಗಳ್ಳಿ ಚಹಾದ ಬೆಲೆ ₹ 20 ಇದ್ದರೆ, ಗೆಣಸು ಜೇನಿಗೆ ₹ 50 ದರ ಇದೆ. ಕಳೆದ ಬಾರಿಯಂತೆ ಬಂಬೂ ಬಿರಿಯಾನಿ ಮತ್ತು ಬಿದಿರಕ್ಕಿ ಪಾಯಸವೂ ಈ ಬಾರಿ ಸಾರ್ವಜನಿಕರಿಗೆ ಲಭ್ಯವಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಜಮೀರ್ ಅಹಮ್ಮದ್ ಖಾನ್ ಆಹಾರ ಮೇಳವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಂಧ ಮತ್ತು ಕಿವುಡ ಶಾಲೆಯ ಮಕ್ಕಳಿಗೆ ಉಚಿತ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 98 ಮಳಿಗೆಗಳು ಇಲ್ಲಿದ್ದು, ಬಗೆ ಬಗೆಯ ಆಹಾರಗಳು ಭೋಜನಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಇದರ ಜತೆಗೆ ಲಲಿತಮಹಲ್‌ ಪ್ಯಾಲೇಸ್ ಮೈದಾನದಲ್ಲೂ ಆಹಾರ ಮೇಳ ಆರಂಭವಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !