ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದೊಳಗಿನ ಅರಣ್ಯದಲ್ಲಿ...

Last Updated 26 ಅಕ್ಟೋಬರ್ 2018, 13:29 IST
ಅಕ್ಷರ ಗಾತ್ರ

ಮೈಸೂರು ಮೃಗಾಲಯ ನೂರಾರು ವರ್ಷಗಳಿಂದ ಪ್ರವಾಸಿಗರ ಪಾಲಿನ ‘ಡಾರ್ಲಿಂಗ್‌’. ಈಗಂತೂ ಅರಣ್ಯದಲ್ಲಿ ತಿರುಗಾಡಿದ ಅನುಭವ ನಗರದ ಹೃದಯಭಾಗದಲ್ಲಿರುವ ಮೃಗಾಲಯ–ಕಾರಂಜಿ ಕೆರೆ ಪ್ರಕೃತಿ ಉದ್ಯಾನದಲ್ಲಿ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಸಿಗುತ್ತಿದೆ.

ಕಾಡುಪ್ರಾಣಿಗಳು, ಪಕ್ಷಿ, ಚಿಟ್ಟೆಗಳ ಜೊತೆಗೆ ಹಸಿರುಮಯ ಪರಿಸರ ಮನಸ್ಸಿಗೆ ಮುದ ನೀಡುವುದಲ್ಲದೆ ಹೃದಯಕ್ಕೆ ಉತ್ತಮ ಗಾಳಿಯನ್ನೂ ಒದಗಿಸುತ್ತಿದೆ. ಈ ಎರಡೂ ತಾಣ ಸೇರಿ 165 ಎಕರೆ ಪ್ರದೇಶವಿದ್ದು, ಶೇ 75ರಷ್ಟು ಹಸಿರಿನಿಂದ ಕೂಡಿದೆ.

ಹೌದು, 125 ವರ್ಷಗಳ ಇತಿಹಾಸ ಹೊಂದಿರುವ ಮೃಗಾಲಯಕ್ಕೆ ಈಗ ಹೊಸ ಸ್ಪರ್ಶ ಲಭಿಸಿದೆ. ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಮೈಸೂರು ಮೃಗಾಲಯ ಹಾಗೂ ಕಾರಂಜಿ ಕೆರೆ ಪ್ರಕೃತಿ ಉದ್ಯಾನಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ಸಿದ್ಧಗೊಂಡಿದೆ.

100 ಮೀಟರ್‌ ಉದ್ದದ ಸುರಂಗ ಮಾರ್ಗ (ಅಂಡರ್‌ಪಾಸ್‌) ನಿರ್ಮಾಣದಿಂದ ಎರಡು ಪ್ರವಾಸಿ ತಾಣಗಳನ್ನು ಸಂಪರ್ಕಿಸಬಹುದು. ಎರಡು ತಾಣಗಳ ಮಧ್ಯೆ ರಸ್ತೆ ಇರುವ ಕಾರಣ ಪ್ರವಾಸಿಗರು ಈ ಹಿಂದೆ ಸುಮಾರು ಒಂದೂವರೆ ಕಿ.ಮೀ ಸುತ್ತು ಬಳಸಿ ಕ್ರಮಿಸಬೇಕಾಗಿತ್ತು. ಈಗ ಕಾರಂಜಿ ಕೆರೆ ಮೂಲಕ ಮೃಗಾಲಯ ಅಥವಾ ಮೃಗಾಲಯದ ಮೂಲಕ ಕಾರಂಜಿ ಕೆರೆಗೆ ಅಂಡರ್‌ಪಾಸ್‌ನಲ್ಲಿ ಸುಲಭವಾಗಿ ಪ್ರವೇಶ ಪಡೆಯಬಹುದು. ಈ ಮಾರ್ಗಕ್ಕೆ ದಸರೆ ಸಂದರ್ಭದಲ್ಲಿ ಅರಣ್ಯ ಸಚಿವ ಆರ್‌.ಶಂಕರ್‌ ಚಾಲನೆ ನೀಡಿದ್ದರು. ‌

ಒಮ್ಮೆ ಒಳ ಹೊಕ್ಕರೆ ಈ ಎರಡೂ ತಾಣಗಳು ಸೇರಿ ಸುಮಾರು ಏಳು ಕಿ.ಮೀ ಸುತ್ತಾಟ ನಡೆಸಬಹುದು. ಈ ಮಾರ್ಗದಲ್ಲಿ ಈಚೆಗೆ ಪ್ರಾಣಿ, ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ ಕೂಡ ಏರ್ಪಡಿಸಲಾಗಿತ್ತು.

‘ಪ್ರವಾಸಿಗರ ಪಾಲಿಗೆ ಇದೊಂದು ಹೊಸ ಆಕರ್ಷಣೆ. ಸಮಯವೂ ಉಳಿತಾಯವಾಗಲಿದೆ. ಜೊತೆಗೆ ಕಾಂಬೊ ಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರು ಈ ಅವಕಾಶ ಬಳಸಿಕೊಳ್ಳಬಹುದು’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಹೇಳುತ್ತಾರೆ.

ಈ ಎರಡೂ ಪ್ರವಾಸಿ ತಾಣಗಳ ವೀಕ್ಷಣೆಗೆ ಒಂದೇ ಟಿಕೆಟ್‌ನಲ್ಲಿ ಪ್ರವೇಶ ಕಲ್ಪಿಸಲು ನಿರ್ಧರಿಸಲಾಗಿದೆ. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ ₹ 80 ಹಾಗೂ ವಾರಾಂತ್ಯದಲ್ಲಿ ₹ 100 ಶುಲ್ಕ ಇರಲಿದೆ. ಮಕ್ಕಳಿಗೆ (5ರಿಂದ 12 ವರ್ಷ) ಮಾಮೂಲಿ ದಿನಗಳಲ್ಲಿ ₹ 40 ಹಾಗೂ ವಾರಾಂತ್ಯದಲ್ಲಿ ₹ 50 ಶುಲ್ಕ ವಿಧಿಸಲಾಗುತ್ತದೆ.

ಈ ಹಿಂದೆ ಮೃಗಾಲಯಕ್ಕೆ ಮತ್ತು ಕಾರಂಜಿ ಕೆರೆಗೆ ಪ್ರತ್ಯೇಕ ಪ್ರವೇಶದ್ವಾರ ಹಾಗೂ ಪ್ರವೇಶ ಶುಲ್ಕ ವ್ಯವಸ್ಥೆ ಇತ್ತು. ಜನದಟ್ಟಣೆ ಕಾರಣ ವಾರಾಂತ್ಯ ಹಾಗೂ ರಜೆ ದಿನಗಳಲ್ಲಿ ಟಿಕೆಟ್‌ ಪಡೆಯಲು ಕಷ್ಟವಾಗುತಿತ್ತು. ಅಲ್ಲದೆ, ವಾಹನ ನಿಲುಗಡೆಗೆ ಸಮಸ್ಯೆ ಉಂಟಾಗುತಿತ್ತು.

ಮತ್ಸ್ಯಾಲಯಕ್ಕೆ ಸಿದ್ಧತೆ: ಮೃಗಾಲಯ ಬಳಿ ನಿರ್ಮಿಸಲು ಉದ್ದೇಶಿಸಿರುವ ಮತ್ಸ್ಯಾಲಯಕ್ಕೂ (ಅಕ್ವೇರಿಯಂ) ಈ ಸುರಂಗ ಮಾರ್ಗ ಸಂಪರ್ಕ ಕಲ್ಪಿಸಲಿದೆ. ಕಾರಂಜಿ ಕೆರೆಯಿಂದ ಬಂದವರು ಈ ಮಾರ್ಗದ ಮೂಲಕ ಮತ್ಸ್ಯಾಲಯ ಪ್ರವೇಶಿಸಬಹುದು.

ಸಾಂಸ್ಕೃತಿಕ ನಗರಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮತ್ಸ್ಯಾಲಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿ ವಿಶೇಷ ಅನುದಾನವಾದ ₹ 5 ಕೋಟಿ ಬಳಸಿಕೊಂಡು 2010ರಲ್ಲಿ ಅಕ್ವೇರಿಯಂ ನಿರ್ಮಿಸಲು ಮಹಾನಗರ ಪಾಲಿಕೆ ಮುಂದಾಗಿತ್ತು. ಕಟ್ಟಡವೇನೊ ತಲೆಎತ್ತಿತು. ಆದರೆ, ಅನುದಾನ ಕೊರತೆಯಿಂದ ಅಭಿವೃದ್ಧಿ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿತು.

ಗಿಡಗಂಟಿ ಬೆಳೆದು ಆ ಕಟ್ಟಡವೇ ಮುಚ್ಚಿ ಹೋಗುವ ಹಂತ ತಲುಪಿತ್ತು. ಅದನ್ನೀಗ ಹಸ್ತಾಂತರಿಸಿದ್ದು, ಮೃಗಾಲಯ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಜಾಗತಿಕ ಇ–ಟೆಂಡರ್‌ ಪ್ರಕ್ರಿಯೆಗೆ ಸಿದ್ಧತೆ ನಡೆಸುತ್ತಿದೆ. ಅಕ್ವೇರಿಯಂ ನಿರ್ಮಾಣ ಹಾಗೂ ನಿರ್ವಹಣೆಗೆ ಸುಮಾರು ₹ 25 ಕೋಟಿ ಅವಶ್ಯವಿದೆ. ಹೀಗಾಗಿ, ನಿರ್ಮಾಣ, ನಿರ್ವಹಣೆಯನ್ನು ಖಾಸಗಿ ಕಂಪನಿಗೆ ನೀಡುವ ಸಾಧ್ಯತೆ ಇದೆ. ಬಳಿಕ ಕಂಪನಿಯಿಂದ ಮೃಗಾಲಯಕ್ಕೆ ವರ್ಗಾವಣೆ ಆಗುತ್ತದೆ.

‘ಅಕ್ವೇರಿಯಂ ಯಾವ ರೀತಿ ಇರಬೇಕೆಂದು ಪರಿಣತರ ನೆರವಿನಿಂದ ನೀಲನಕ್ಷೆ ತಯಾರಿಸಲು ಸಿದ್ಧತೆ ನಡೆದಿದೆ. ಯೋಜನೆ ಪೂರ್ಣವಾಗಲು ವರ್ಷ ಹಿಡಿಯಲಿದೆ. ವಿವಿಧ ಪ್ರಭೇದಗಳ ಮೀನು ತಂದಿಡುವ ಯೋಜನೆ ಇದೆ’ ಎಂದು ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT