ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೇ 74.13 ಮತದಾನ

ಹಿಂದಿನ ಚುನಾವಣೆಗಿಂತ ಶೇ 0.51ರಷ್ಟು ಹೆಚ್ಚಳ: ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಹೇಳಿಕೆ
Last Updated 14 ಮೇ 2018, 11:40 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಲ್ಲಿ ಶನಿವಾರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇ 74.13ರಷ್ಟು ಮತದಾನವಾಗಿದ್ದು, ಹಿಂದಿನ ಚುನಾವಣೆಗಿಂತ 0.51ರಷ್ಟು ಹೆಚ್ಚಳ ಕಂಡಿದೆ. ಸ್ವೀಪ್‌ ಸಮಿತಿಯ ಚಟುವಟಿಕೆಗಳು ಹೆಚ್ಚು ನಡೆದರೂ, ಬಳ್ಳಾರಿ ನಗರ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನವಾಗಿದೆ.

‘ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಕಂಪ್ಲಿ ಕ್ಷೇತ್ರದ 2ನೇ ಸ್ಥಾನದಲ್ಲಿದೆ. ಬರಗಾಲ ಪೀಡಿತ ಕೂಡ್ಲಿಗಿ ಮತದಾನದ ವಿಷಯದಲ್ಲಿ ಮುಂದೆ ಇದ್ದು, ಮೂರನೇ ಸ್ಥಾನ ಪಡೆದಿದೆ. ಹಡಗಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಸಿರುಗುಪ್ಪ ಆರನೇ ಸ್ಥಾನ ಪಡೆದಿದೆ. ಬಳ್ಳಾರಿ ಗ್ರಾಮೀಣ ಮತ್ತು ವಿಜಯನಗರ ಕ್ಷೇತ್ರ ಕ್ರಮವಾಗಿ ಏಳು ಮತ್ತು ಎಂಟನೇ ಸ್ಥಾನ ಪಡೆದಿವೆ’ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್‌ ತಿಳಿಸಿದರು.

ಮತ ಎಣಿಕೆ ನಡೆಯಲಿರುವ ನಗರದ ರಾವ್‌ ಬಹದೂರ್‌ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುರುಷರಿಗೆ ಹೋಲಿಸಿದರೆ ಮತದಾನ ಮಾಡಿದ ಮಹಿಳೆಯರ ಸಂಖ್ಯೆಯೂ ಆಶಾದಾಯಕವಾಗಿದೆ’ ಎಂದರು.

ಬಾರದ ಲಿಂಗತ್ವ ಅಲ್ಪಸಂಖ್ಯಾತರು:
‘ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿದ್ದರೂ ಕೇವಲ ಎಂಟು ಮಂದಿ ಮತದಾನ ಮಾಡಿದ್ದಾರೆ. ಹಗರಿಬೊಮ್ಮನಹಳ್ಳಿ, ಬಳ್ಳಾರಿ ನಗರ, ಸಂಡೂರು ಮತ್ತು ಕೂಡ್ಲಿಗಿಯಲ್ಲಿ ಯಾರೊಬ್ಬರೂ ಮತದಾನ ಮಾಡಿಲ್ಲ. ಹಡಗಲಿ, ವಿಜಯನಗರ ಮತ್ತು ಬಳ್ಳಾರಿ ಗ್ರಾಮೀಣದಲ್ಲಿ ತಲಾ ಒಬ್ಬರು ಮಾತ್ರ ಮತದಾನ ಮಾಡಿದ್ದರೆ, ಕಂಪ್ಲಿಯಲ್ಲಿ ಮೂವರು ಮತ್ತು ಸಿರುಗುಪ್ಪದಲ್ಲಿ ಇಬ್ಬರು ಮಾತ್ರ ಮತದಾನ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಮತಯಂತ್ರ, ಖಾತರಿ ಯಂತ್ರ ತೊಂದರೆ

ಬಳ್ಳಾರಿ: ಜಿಲ್ಲೆಯ 22 ಕಡೆ ಮತಯಂತ್ರ ಹಾಗೂ 82 ಕಡೆ ಮತ ಖಾತರಿ ಯಂತ್ರಗಳು ಕೆಟ್ಟ ಪರಿಣಾಮ ಮತದಾನ ಸ್ಥಗಿತಗೊಂಡಿತ್ತು. ನಂತರ ಅಧಿಕಾರಿಗಳು ಬದಲಾಯಿಸಿದರು ಎಂದು ಜಿಲ್ಲಾಧಿಕಾರಿ ತಿಳಿಸಿದರು. ‘ಮಳೆ ಸುರಿದಿದ್ದು ಮತ್ತು ವಿದ್ಯುತ್‌ ಪೂರೈಕೆ ಸ್ಥಗಿತಗೊಂಡ ಕಾರಣ ಕೆಲವೆಡೆ ಮತದಾನ ಪ್ರಕ್ರಿಯೆ ಪೂರ್ಣಗೊಳಿಸುವುದು ತಡವಾಯಿತು. ರಾತ್ರಿ 11.30ರ ವೇಳೆಗೆ ಮತದಾನದ ಅಂಕಿ ಅಂಶದ ಕ್ರೋಢೀಕರಣ ಕಾರ್ಯ ಮುಗಿಯಿತು’ ಎಂದರು.

**
ಜಿಲ್ಲಾಡಳಿತ ಕೈಗೊಂಡ ಕಾರ್ಯಕ್ರಮಗಳಿಂದ ಮತದಾನದ ಪ್ರಮಾಣ ಹೆಚ್ಚಾಗಿರುವುದು ತೃಪ್ತಿ ತಂದಿದೆ
- ಡಾ.ವಿ.ರಾಮಪ್ರಸಾದ್‌ ಮನೋಹರ್‌ ಜಿಲ್ಲಾ ಚುನಾವಣಾಧಿಕಾರಿ
**

ಗಲಾಟೆ, ಗದ್ದಲಗಳಿಲ್ಲದೆ, ಶಾಂತಿಯುತವಾಗಿ ಮತದಾನ ಪೂರ್ಣಗೊಂಡಿರುವುದು ಹೆಮ್ಮೆಯ ಸಂಗತಿ
- ಅರುಣ್‌ ರಂಗ ರಾಜನ್‌, ಎಸ್ಪಿ
**

ಸ್ವೀಪ್‌ ಚಟುವಟಿಕೆಗಳ ಪರಿಣಾಮವಾಗಿಯೇ ಮತದಾನ ಪ್ರಮಾಣ ಹೆಚ್ಚಾಗಿರುವುದು ಸಂತಸ ತಂದಿದೆ
-  ಡಾ.ಕೆ.ವಿ.ರಾಜೇಂದ್ರ, ಸ್ವೀಪ್‌ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT