ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಿನಗಳಲ್ಲಿ ಇಬ್ಬರಿಗೆ ವಂಚನೆ

ಎಚ್ಚರ, ನಗರದಲ್ಲಿ ಮೋಸಗಾರರ ಜಾಲ, ಸರ್ಕಾರದಿಂದ ಸಾಲ ಕೊಡಿಸುವ ಆಮಿಷ
Last Updated 7 ಡಿಸೆಂಬರ್ 2018, 11:40 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ವ್ಯಕ್ತಿಯೊಬ್ಬ ಎರಡು ದಿನಗಳಲ್ಲಿ ಇಬ್ಬರು ಮಹಿಳೆಯರಿಗೆ ಸರ್ಕಾರದಿಂದ ಸಾಲ ಕೊಡಿಸುವ ಆಮಿಷ ಒಡ್ಡಿ ಚಿನ್ನಾಭರಣಗಳನ್ನು ವಂಚಿಸಿದ್ದಾನೆ. ಈ ಎರಡೂ ಘಟನೆಗಳು ಪುರಭವನ ಮತ್ತು ಕೆ.ಅರ್.ಆಸ್ಪತ್ರೆ ಆವರಣದಲ್ಲಿ ಡಿ.4 ಮತ್ತು 5ರಂದು ನಡೆದಿವೆ.

ಕೆ.ಆರ್.ನಗರ ಜವರಮ್ಮ ಡಿ. 4ರಂದು ತಮ್ಮ ಮಗಳ ಮನೆಗೆ ಹೋಗಲು ನಗರ ಬಸ್‌ನಿಲ್ದಾಣದಲ್ಲಿ ನಿಂತಿದ್ದರು. ಇವರ ಬಳಿ ಬಂದ ವ್ಯಕ್ತಿಯೊಬ್ಬ ಮೊದಲಿಗೆ ತಮ್ಮ ಊರು ಯಾವುದು, ಎಷ್ಟು ಜನ ಮಕ್ಕಳು ಎಂದು ಮಾತಿಗೆ ಇಳಿದಿದ್ದಾನೆ. ನಂತರ, ಮನೆಯಲ್ಲಿ ಕಷ್ಟವಿದೆಯಾ, ಬಡವರಾ ಎಂದು ಕೇಳಿದ್ದಾನೆ. ಈತನನ್ನು ನಂಬಿದ ಜವರಮ್ಮ ಮನೆಯ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಇದರ ಲಾಭ ಪಡೆದ ಆತ ಸರ್ಕಾರದಿಂದ ಈಗಲೇ ಸಾಲ ಕೊಡಿಸುತ್ತೇನೆ ಎಂದು ನಂಬಿಸಿ ಕೆ.ಆರ್.ಆಸ್ಪತ್ರೆ ಆವರಣಕ್ಕೆ ಕರೆದುಕೊಂಡು ಬಂದಿದ್ದಾನೆ. ಮೈಮೇಲೆ ಚಿನ್ನವಿದ್ದರೆ ಸಾಲ ಕೊಡುವುದಿಲ್ಲ ಎಂದು ಹೇಳಿ ಜವರಮ್ಮ ಹಾಕಿದ್ದ 50 ಗ್ರಾಂ ತೂಕದ ಎರಡೆಳೆ ಚಿನ್ನದ ಸರ ಹಾಗೂ ₹ 5 ಸಾವಿರ ನಗದನ್ನು ಬಟ್ಟೆ ಬ್ಯಾಗಿಗೆ ಹಾಕಿಸಿದ್ದಾನೆ. ಸಾಲ ಕೊಡುವವರು ಬ್ಯಾಗ್ ಪರಿಶೀಲಿಸಿದರೆ ಕಷ್ಟ ಎಂದು ಹೇಳಿ ಎಳನೀರಿನ ಅಂಗಡಿಯೊಂದರಲ್ಲಿ ಇರಿಸಿ, ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದತ್ತ ಕರೆದುಕೊಂಡು ಬಂದು, ಅಲ್ಲೊಂದು ಕಡೆ ಸ್ವಲ್ಪ ಕುಳಿತಿರಿ ಬರುತ್ತೇನೆ ಎಂದು ಹೊರಟಿದ್ದಾನೆ. ಹೋಗುವಾಗ ಎಳನೀರಿನ ಅಂಗಡಿಯಲ್ಲಿ ಇರಿಸಿದ್ದ ಬ್ಯಾಗನ್ನು ತೆಗೆದುಕೊಂಡು ಹೋಗಿದ್ದಾನೆ. ಸಾಕಷ್ಟು ಹೊತ್ತಾದರೂ ವ್ಯಕ್ತಿ ಬಾರದೇ ಇದ್ದಾಗ ಜವರಮ್ಮ ಎಳನೀರಿನ ಅಂಗಡಿಗೆ ಬಂದಿದ್ದಾರೆ. ಆಗ ಮೋಸ ಹೋಗಿರುವುದು ಗೊತ್ತಾಗಿದೆ.

ಬೆದರಿಸಿ ವಂಚನೆ: ಮರುದಿನ ಡಿ. 5ರಂದು ಕಮಲಾಬಾಯಿ ಎಂಬ ಮಹಿಳೆ ಮನೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದಾಗ ಮುಖ್ಯಮಂತ್ರಿ ನಿಧಿಯಿಂದ ₹ 10 ಸಾವಿರ ಸಾಲ ಕೊಡಿಸುವುದಾಗಿ ನಂಬಿಸಿದ್ದಾನೆ. ಪುರಭವನದ ಆವರಣಕ್ಕೆ ಕರೆದುಕೊಂಡು ಬಂದ ಆತ ಚಿನ್ನಾಭರಣ ಹಾಕಿಕೊಂಡರೆ ಸಾಲ ಕೊಡುವುದಿಲ್ಲ ಎಂದು ಹೇಳಿ 17 ಗ್ರಾಂ ಚಿನ್ನದ ಸರವನ್ನು ಬಿಚ್ಚಿಸಿ ಪರ್ಸಿಗೆ ಹಾಕಿಸಿದ್ದಾನೆ. ಬಳಿಕ ಚಿನ್ನಾಭರಣ ಹಾಗೂ ₹ 4 ಸಾವಿರ ನಗದು ಇರುವ ಪರ್ಸ್‌ನ್ನು ತಾನು ಇಟ್ಟುಕೊಳ್ಳುವುದಾಗಿ ಹೇಳಿದ್ದಾನೆ. ಈತನ ವರ್ತನೆ ಕಂಡು ಅನುಮಾನಗೊಂಡ ಕಮಲಾಬಾಯಿ ಪರ್ಸ್ ನೀಡಲು ಒಪ್ಪದಿದ್ದಾಗ ಚಾಕು ತೋರಿಸಿ ಪರ್ಸ್‌ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ವೇಳೆ ಆವರಣದಲ್ಲಿ ಹೆಚ್ಚಿನ ಜನಸಂಚಾರ ಇರಲಿಲ್ಲ. ಈ ಎರಡೂ ಪ್ರಕರಣಗಳಲ್ಲೂ ಒಬ್ಬನೇ ವ್ಯಕ್ತಿ ವಂಚಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಎರಡೂ ಪ್ರಕರಣಗಳು ದೇವರಾಜ ಠಾಣೆಯಲ್ಲಿ ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT