ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿನ್ನು’ ಎನ್ನುತ್ತಲೇ ಚಿನ್ನಾಭರಣ ವಂಚಿಸಿದ ಚಾಲಾಕಿ

ಫೇಸ್‌ಬುಕ್‌ನಲ್ಲಿ ನಕಲಿ ಪ್ರೊಫೈಲ್‌ ಪಾಶಕ್ಕೆ ಬಿದ್ದ ಯುವಕರು
Last Updated 18 ಮಾರ್ಚ್ 2021, 4:27 IST
ಅಕ್ಷರ ಗಾತ್ರ

ಮೈಸೂರು: ಇಲ್ಲೊಬ್ಬಳು ಯುವತಿ ಫೇಸ್‌ಬುಕ್‌ನಲ್ಲಿ ‘ಚಿನ್ನು’ ಎನ್ನುತ್ತಲೇ ಯುವಕರಿಂದ ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣ ಪಡೆದು ವಂಚಿಸಿ, ಇದೀಗ ಇಲ್ಲಿನ ಮೇಟಗಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಬೆಂಗಳೂರಿನ ಮೇಘಾ (25) ಬಂಧಿತ ಆರೋಪಿ.

ಈಕೆ ಫೇಸ್‌ಬುಕ್‌ನಲ್ಲಿ ಸುಂದರ ಯುವತಿಯರ ಚಿತ್ರಗಳನ್ನು ಹಾಕಿಕೊಂಡು ಬೇರೆ ಬೇರೆ ಹೆಸರಿನಿಂದ ನಕಲಿ ಪ್ರೊಫೈಲ್‌ ಸೃಷ್ಟಿಸಿ, ಶ್ರೀಮಂತ ಯುವಕರಿಗೆ ‘ಫ್ರೆಂಡ್ ರಿಕ್ವೆಸ್ಟ್‌’ ಕಳುಹಿಸುತ್ತಿದ್ದಳು. ಸುಂದರ ಯುವತಿಯ ಚಿತ್ರಗಳಿಗೆ ಮಾರು ಹೋದ ಯುವಕರು ರಿಕ್ವೆಸ್ಟ್‌ಅನ್ನು ಒಪ್ಪಿ, ಆಕೆಯೊಂದಿಗೆ ಚಾಟಿಂಗ್ ನಡೆಸುತ್ತಿದ್ದರು. ಈ ವೇಳೆ ಆಕೆಯು ಲಕ್ಷಾಂತರ ರೂಪಾಯಿ, ಒಡವೆ ಪಡೆದು ತನ್ನ ಮೊಬೈಲ್‌ ನಂಬರ್‌ಅನ್ನು ಬದಲಿಸಿ, ಪ್ರೊಫೈಲ್‌ ಡಿಲೀಟ್ ಮಾಡಿ ಮತ್ತೊಂದು ಪ್ರೊಫೈಲ್‌ ಸೃಷ್ಟಿಸಿಕೊಂಡು, ಮತ್ತೊಬ್ಬ ಯುವಕನಿಗೆ ಬಲೆ ಬೀಸುತ್ತಿದ್ದಳು.

ಇಲ್ಲಿನ ರವಿ ಎಂಬ ಯುವಕನಿಗೆ ‘ಚಿನ್ನುಗೌಡ’ ಎಂಬ ಪ್ರೊಫೈಲ್‌ ಮೂಲಕ ಗಾಳ ಹಾಕಿದ ಈಕೆ, ತನ್ನನ್ನು ಬಿಂದುಗೌಡ ಎಂದು ಪರಿಚಯಿಸಿಕೊಂಡಿದ್ದಾಳೆ. ತನ್ನ ತಂದೆ 2 ಪೆಟ್ರೋಲ್ ಬಂಕ್‌ ಹೊಂದಿದ್ದು, ಪ್ರೀತಿಸುವುದಾಗಿ ನಾಟಕವಾಡಿದ್ದಾಳೆ. ಜನ್ಮದಿನಕ್ಕೆ ‘ಫಾರ್ಚುನರ್’ ಕಾರು ಕೊಡಿಸುವುದಾಗಿ ನಂಬಿಸಿದ ಈಕೆ, ಅದನ್ನು ಖರೀದಿಸಲು ಕೇವಲ ಒಂದೂವರೆ ಲಕ್ಷ ಮಾತ್ರ ಕಡಿಮೆ ಇದೆ ಎಂದು ಹೇಳಿ, ಸ್ನೇಹಿತ ಶಿವು ಎಂಬಾತನ ಮೂಲಕ ರವಿಯಿಂದ ಹಣವನ್ನು ಪಡೆದಿದ್ದಾಳೆ. ರವಿ ತನ್ನ ತಾಯಿ ಚಿತ್ರವನ್ನು ಈಕೆಗೆ ಕಳಿಸಿದಾಗ, ತಾಯಿಯ ಕುತ್ತಿಗೆಯಲ್ಲಿ ಹಾಕಿದ್ದ ಸರವನ್ನು ನೀಡಿದರೆ, ಅದೇ ಮಾದರಿಯ ಮತ್ತೊಂದು ಸರ ಖರೀದಿಸುವುದಾಗಿಯೂ ನಂಬಿಸಿ, ಒಟ್ಟು 480 ಗ್ರಾಂ ತೂಕದ ಚಿನ್ನಾಭರಣವನ್ನು ಇದೇ ಬಗೆಯಲ್ಲಿ ಈಕೆ ಪಡೆದಿದ್ದಾಳೆ. ಬಳಿಕ ಯಾವುದನ್ನೂ ನೀಡದೇ ವಂಚಿಸಿದ್ದಾಳೆ.

ಈ ಪ್ರಕರಣದಲ್ಲಿ ಹಣ ಮತ್ತು ಚಿನ್ನಾಭರಣ ಪಡೆದ ಶಿವು ಕೂಡ ‘ಫೇಸ್‌ಬುಕ್‌’ನಲ್ಲಿ ಪರಿಚಯವಾದವರೇ ಆಗಿದ್ದು, ಇವರೂ ಈಕೆಯನ್ನು ಖುದ್ದು ನೋಡಿಲ್ಲ. ಶಿವು ಇವುಗಳನ್ನು ಪಡೆದು ವಸಂತ ಎಂಬ ಆಟೊ ಚಾಲಕನಿಗೆ ನೀಡುತ್ತಿದ್ದರು. ವಸಂತ ನೇರವಾಗಿ ಈಕೆಗೆ ಚಿನ್ನಾಭರಣ, ಹಣವನ್ನು ತಲುಪಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT