ಸೋಮವಾರ, ಆಗಸ್ಟ್ 8, 2022
23 °C
ಆಷಾಢ ಶುಕ್ರವಾರಗಳಂದು ಮತ್ತು ವರ್ಧಂತಿ ದಿನಕ್ಕೆ ಅನ್ವಯ

ಚಾಮುಂಡಿ ಬೆಟ್ಟಕ್ಕೆ ಲಲಿತಮಹಲ್‌ ಬಳಿಯಿಂದ ಬಸ್‌ ವ್ಯವಸ್ಥೆ: ಸಚಿವ ಸೋಮಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢ ಶುಕ್ರವಾರಗಳು ಮತ್ತು ಅಮ್ಮನ ವರ್ಧಂತಿಯಂದು (ಜನ್ಮೋತ್ಸವ) ಭಕ್ತರಿಗಾಗಿ ಲಲಿತಮಹಲ್‌ ಪ್ಯಾಲೇಸ್ ಹೋಟೆಲ್ ಬಳಿಯ 18 ಎಕರೆ ಜಾಗದಿಂದ ಸಾರಿಗೆ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುವುದು. ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಅವಕಾಶ ಇರುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವ ಸಿದ್ಧತೆ ಸಭೆಯ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಪ್ರವಾಸೋದ್ಯಮ ಇಲಾಖೆಗೆ ಸೇರಿರುವ ಆ ಜಾಗವನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗುವುದು. ಸ್ವಚ್ಛಗೊಳಿಸಿ, ಸಮತಟ್ಟು ಮಾಡಿ ವಾಹನಗಳ ನಿಲುಗಡೆ ಹಾಗೂ ಬಸ್‌ಗಳ ಓಡಾಟಕ್ಕೆ ತಕ್ಕಂತೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ಉಚಿತವಾಗಿ ಸೇವೆ:

‘ಸಾರ್ವಜನಿಕರು, ಲಲಿತಮಹಲ್ ಬಳಿ ನಿಗದಿಪಡಿಸಿದ ಜಾಗದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಿ ಸಾರಿಗೆ ಬಸ್‌ಗಳಲ್ಲಿ ಬೆಟ್ಟಕ್ಕೆ ಹೋಗಬೇಕು. ಉಚಿತವಾಗಿ ಈ ಸೇವೆ ಕಲ್ಪಿಸಲಾಗಿದೆ. ತಗಲುವ ವೆಚ್ಚವನ್ನು ಚಾಮುಂಡಿಬೆಟ್ಟದ ನಿಧಿಯಿಂದ ಸಾರಿಗೆ ಇಲಾಖೆಗೆ ಪಾವತಿಸಲಾಗುವುದು. ಆ ದಿನಗಳಂದು ಲಕ್ಷಕ್ಕೂ ಅಧಿಕ ಜನರು ಬರುವುದರಿಂದಾಗಿ ಅವರ ಅನುಕೂಲಕ್ಕಾಗಿ 50 ಬಸ್‌ಗಳನ್ನು ಕಾರ್ಯಾಚರಣೆಗೆ ಬಳಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ಆಷಾಢ ಶುಕ್ರವಾರಗಳಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರಲಿಲ್ಲ. ಈ ಬಾರಿ 2 ಡೋಸ್ ಕೋವಿಡ್ ಲಸಿಕೆ ಪಡೆದ ಪ್ರಮಾಣಪತ್ರ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಇಲ್ಲದಿದ್ದರೆ 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ವರದಿ ಪ್ರಸ್ತುತಪಡಿಸಬೇಕು’ ಎಂದು ಸ್ಪಷ್ಟಪಡಿಸಿದರು.

ಪ್ರಸಾದ ಕೊಡುವವರಿಗೆ ವ್ಯವಸ್ಥೆ:

‘ಪ್ರಸಾದ ವಿತರಿಸುವವರಿಗೆ ಬೆಟ್ಟದ ಮಹಿಷಾಸುರ ಪ್ರತಿಮೆ ಬಳಿಯ ಬಸ್‌ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಬಾಳೆಎಲೆಯಲ್ಲಿ ಪ್ರಸಾದ ನೀಡುವವರಿಗೆ ಪಾರ್ಕಿಂಗ್‌ ಲಾಟ್ ಮೇಲೆ ಪೆಂಡಾಲ್‌ ಹಾಕಿಕೊಡಲಾಗುತ್ತದೆ. ಪ್ರಸಾದ ವಿತರಿಸಲು ಬಯಸುವವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು’ ಎಂದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶಿಷ್ಟಾಚಾರದ ಪಟ್ಟಿಯಲ್ಲಿ ಇರುವವರ ವಾಹನಗಳಿಗೆ ಮಾತ್ರ ಪಾಸ್ ಕೊಡಲಾಗುವುದು. ಇತರರ ವಾಹನಗಳನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಆಷಾಢ ಶುಕ್ರವಾರಗಳಂದು ಮೊದಲ ಬಸ್‌ ಮುಂಜಾನೆ 3ಕ್ಕೆ ಹೊರಡುತ್ತದೆ. ಬೆಳಿಗ್ಗೆ 5.30ರಿಂದ ರಾತ್ರಿ 8.30ರವರೆಗೆ ದರ್ಶನಕ್ಕೆ ಅವಕಾಶ ಇರಲಿದೆ. ವರ್ಧಂತಿಯಂದು ಬೆಳಿಗ್ಗೆ 7ರ ಬಳಿಕ ಹೊರಡಲಿದೆ. ಬಡಾವಣೆಗಳಿಂದ ಹೋಗುವವರೂ ಸಾರಿಗೆ ಬಸ್‌ಗಳನ್ನು ಅವಲಂಬಿಸಿದರೆ ಅನುಕೂಲ’ ಎಂದು ತಿಳಿಸಿದರು.

ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ:

‘ಮೆಟ್ಟಿಲುಗಳ ಬಳಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಕ್ಯೂನಲ್ಲಿ ಬರುವವರಿಗೆ ಕಾಣಿಸುವಂತೆ ದೇವಿಯ ಮೂರ್ತಿಯ ಚಿತ್ರ, ವಿಡಿಯೊಗಳನ್ನು ಅಲ್ಲಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಪ್ರಸಾರ ಮಾಡಲಾಗುತ್ತದೆ. ಬೆಟ್ಟದಲ್ಲಿ ವಿದ್ಯುದ್ದೀಪಾಲಂಕಾರ ಮಾಡಲಾಗುತ್ತದೆ’ ಎಂದು ವಿವರ ನೀಡಿದರು.

‘ಸಾಮಾನ್ಯ ದರ್ಶನದೊಂದಿಗೆ, ₹ 50 ಮತ್ತು ₹ 300ಕ್ಕೆ ವಿಶೇಷ ದರ್ಶನ ಇರುತ್ತದೆ. ವಿಶೇಷ ದರ್ಶನ ಟಿಕೆಟ್‌ಗಳನ್ನು ಲಲಿತಮಹಲ್‌ ಪಾರ್ಕಿಂಗ್‌ ತಾಣ, ಮಹಿಷಾಸುರ ವೃತ್ತ ಮತ್ತು ಲಾಡು ಕೌಂಟರ್‌ ಬಳಿ ತೆರೆಯಲಾಗುವುದು’ ಎಂದರು.

ಶಾಸಕ ಎಸ್‌.ಎ. ರಾಮದಾಸ್, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಮೇಯರ್‌ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿ.ಪಂ. ಸಿಇಒ ಬಿ.ಆರ್, ಪೂರ್ಣಿಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಮಂಜುನಾಥಸ್ವಾಮಿ, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್, ಎಎಸ್ಪಿ ಶಿವಕುಮಾರ್ ಪಾಲ್ಗೊಂಡಿದ್ದರು.

ವಿದ್ಯುದ್ದೀ‍ಪದ ವ್ಯವಸ್ಥೆ ಮಾಡಿ: ಜಿ.ಟಿ. ದೇವೇಗೌಡ

ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಟಿ. ದೇವೇಗೌಡ, ‘ಬೆಟ್ಟದಿಂದ ಉತ್ತನಹಳ್ಳಿ ದೇವಸ್ಥಾನ ಸಂಪರ್ಕಿಸುವ ರಸ್ತೆಯಲ್ಲಿ ವಿದ್ಯುತ್‌ದೀಪದ ವ್ಯವಸ್ಥೆ ಮಾಡಬೇಕು’ ಎಂದು ಶಾಸಕ ಜಿ.ಟಿ. ದೇವೇಗೌಡ ಸೂಚಿಸಿದರು.

‘ಪೊಲೀಸರು ಅವರಿಗೆ ಬೇಕಾದವರ ವಾಹನಗಳಿಗೆ ಬೆಟ್ಟಕ್ಕೆ ಅವಕಾಶ ಕೊಡುತ್ತಾರೆ. ಆದರೆ, ಮಾಜಿ ಶಾಸಕರು, ಸಂಸದರು ಮೊದಲಾದ ಜನಪ್ರತಿನಿಧಿಗಳಿಗೆ ತಡೆಯುತ್ತಾರೆ. ಹೀಗಾಗದಂತೆ ನೋಡಿಕೊಳ್ಳಬೇಕು. ಮಾಜಿ ಜನಪ್ರತಿನಿಧಿಗಳಿಗೆ ಆದ್ಯತೆ ಕೊಡಬೇಕು’ ಎಂದು ಶಾಸಕ ಎಲ್.ನಾಗೇಂದ್ರ ಸೂಚಿಸಿದರು. ಇದಕ್ಕೆ ಸಂಸದ ಪ್ರತಾಪ ಸಿಂಹ ದನಿಗೂಡಿಸಿದರು.

****

ಆಷಾಢ ಶುಕ್ರವಾರಗಳಂದು ಭಕ್ತರು ಸುಗಮವಾಗಿ ದರ್ಶನ ಪಡೆಯಲೆಂದು ಜಿಲ್ಲಾಡಳಿತ, ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರದಿಂದ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ.

–ಎಸ್.ಟಿ. ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವ

***
ಆಷಾಢ ಶುಕ್ರವಾರಗಳು

* ಜುಲೈ 1

* ಜುಲೈ 8

* ಜುಲೈ 15

* ಜುಲೈ 22

* ಜುಲೈ 20: ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು