ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಡಾಂತರ

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಕಳವಳ
Last Updated 18 ಮೇ 2019, 20:27 IST
ಅಕ್ಷರ ಗಾತ್ರ

ಮೈಸೂರು: ಸರ್ಕಾರ ಮತ್ತು ಸರ್ಕಾರದ ಯಂತ್ರಗಳು, ಬ್ರಿಟಿಷರ ಕಾಲದ ಕೆಲವು ಕಾನೂನುಗಳು ಮತ್ತು ಕೋಮುವಾದಿ ಶಕ್ತಿಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಡಾಂತರ ಎದುರಾಗಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್ ಕಳವಳ ವ್ಯಕ್ತಪಡಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಸಂಶೋಧನ ವಿದ್ಯಾರ್ಥಿ ವೇದಿಕೆ ಮತ್ತು ಜನಚೇತನ ಟ್ರಸ್ಟ್‌ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಳ್ಳೆಯ ಸಾಹಿತ್ಯ ರಚಿಸಲು, ಪರಿ ಪೂರ್ಣ ಜೀವನ ಸಾಗಿಸಲು ಮತ್ತು ಪ್ರಜಾ ಪ್ರಭುತ್ವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದರೆ ಮಾತ್ರ ಒಬ್ಬ ಸಾಹಿತಿಗೆ ಜನಪರವಾದ ಸಾಹಿತ್ಯ ಕೊಡಲು ಸಾಧ್ಯ ಎಂದು ತಿಳಿಸಿದರು.

‘ಆದರೆ ಇಂದು ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ. ನಾವು ಇಷ್ಟು ವರ್ಷಗಳಲ್ಲಿ ಗಳಿಸಿ ದ್ದನ್ನು ಕಳೆದುಕೊಳ್ಳುವಂಥ ಸ್ಥಿತಿ ಯಲ್ಲಿದ್ದೇವೆ. ಸರ್ಕಾರವನ್ನು ಟೀಕಿ ಸುವವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಬ್ರಿಟಿಷರ ಕಾಲದ ಕೆಲವು ಕಾನೂನುಗಳನ್ನು ಈಗಲೂ ಮುಂದುವರಿಸಿಕೊಂಡು ಹೋಗಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕವಾಗಿದೆ’ ಎಂದು ಎಚ್ಚರಿಸಿದರು.

ಸಾಹಿತಿ ಜನರ ನಡುವೆ ಇರಲಿ: ಇಂಟರ್‌ನೆಟ್‌ನಿಂದ ಮಾಹಿತಿ ಪಡೆದು ರಚಿಸುವ ಸಾಹಿತ್ಯಕ್ಕೆ ಯಾವುದೇ ಮಹತ್ವವಿಲ್ಲ. ಜನರೊಂದಿಗೆ ಬೆರೆತು ಸಾಹಿತ್ಯ ರಚಿಸಿದರೆ ಅದಕ್ಕೆ ಹೆಚ್ಚಿನ ಮೌಲ್ಯವಿರುತ್ತದೆ ಎಂದರು.

ಜನರ ಸಮಸ್ಯೆಗಳನ್ನು ಅರಿತು ಅವು ಗಳನ್ನು ಬಗೆಹರಿಸುವಂತಹ ಸಾಹಿತ್ಯ ರಚಿಸಿದರೆ ಅದಕ್ಕೆ ಮೌಲ್ಯ ಬರುತ್ತದೆ. ನಮ್ಮಲ್ಲಿರುವ ಅನೇಕ ಸಾಹಿತಿಗಳು ಕ್ರಿಯಾಶೀಲತೆ ಪ್ರದರ್ಶಿಸುತ್ತಾ ದೇಶದಲ್ಲಿ ಬೆಂಕಿಯನ್ನು ಹೊತ್ತಿಸಿದ್ದಾರೆ. ಆದರೆ ಜನರಿಗೆ ಬೇಕಿರುವುದು ಬೆಂಕಿಯಲ್ಲ. ಬೆಳಕು ಸೃಷ್ಟಿಮಾಡುವ ಸಾಹಿತ್ಯ ಇಂದಿನ ಸಮಾಜಕ್ಕೆ ಬೇಕಿದೆ ಎಂದು ಹೇಳಿದರು.

ಪುಸ್ತಕದ ಮಹತ್ವ ಕಡಿಮೆಯಾಗಿಲ್ಲ: ಜಗತ್ತಿನಲ್ಲಿ ಹಲವು ಕ್ರಾಂತಿಗಳು ಆಗಿವೆ. ಒಂದೊಂದು ಕ್ರಾಂತಿ ಒಂದೊಂದು ರೀತಿಯಲ್ಲಿ ಬದಲಾವಣೆ ತಂದಿದೆ. ಆದರೆ ಯಾವುದೇ ಕ್ರಾಂತಿಯೂ ತರಲಾಗದಂತಹ ಬದಲಾವಣೆಯನ್ನು ಪುಸ್ತಕಗಳು ತಂದಿವೆ ಎಂದರು.

ನಮ್ಮ ದೇಶದಲ್ಲಿ ವರ್ಷಕ್ಕೆ 80 ರಿಂದ 90 ಸಾವಿರ ಪುಸ್ತಕಗಳು ಪ್ರಕಟಗೊಳ್ಳುತ್ತವೆ. ಕನ್ನಡದಲ್ಲಿ 6 ರಿಂದ 7 ಸಾವಿರ ಪುಸ್ತಕಗಳು ಹೊರಬರುತ್ತಿವೆ. ಮೊಬೈಲ್‌, ಇಂಟರ್‌ನೆಟ್‌ ಮೂಲಕ ಆಧುನಿಕ ವಿಜ್ಞಾನ ಬೆಳೆದರೂ ಪುಸ್ತಕವನ್ನು ಬರೆಯುವ, ಪ್ರಕಟಿಸುವ ಮತ್ತು ಓದುವಂತಹ ಅಭಿರುಚಿ ಇನ್ನೂ ಉಳಿದುಕೊಂಡಿದೆ ಎಂದು ತಿಳಿಸಿದರು.

ಪುಸ್ತಕ ಬಿಡುಗಡೆ: ಡಾ.ಹೊಂಬಯ್ಯ ಹೊನ್ನಲಗೆರೆ ಅವರು ಬರೆದಿರುವ ಕನ್ನಡ ದಲಿತ ಆತ್ಮಕಥೆಗಳು, ನೆಲದ ಮಾತು ಮತ್ತು ಭಾರತೀಯ ದಲಿತ ಆತ್ಮಕಥೆಗಳು ಪುಸ್ತಕಗಳನ್ನು ನಾಗಮೋಹನದಾಸ್‌ ಅವರು ಬಿಡುಗಡೆ ಮಾಡಿದರು.

ಸಾಹಿತಿ ಪ್ರೊ.ಸಿ.ನಾಗಣ್ಣ ಮತ್ತು ಹುಣಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ತ್ರಿವೇಣಿ ಅವರು ಕೃತಿಗಳು ಕುರಿತು ಮಾತನಾಡಿದರು. ಜನಚೇತನ ಟ್ರಸ್ಟ್‌ ಅಧ್ಯಕ್ಷ ಪ್ರಸನ್ನ ಎನ್‌.ಗೌಡ, ಲೇಖಕ ಡಾ.ಹೊಂಬಯ್ಯ ಹೊನ್ನಲಗೆರೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT