ರಸ್ತೆ ಬದಿಯಲ್ಲೇ ಶವಸಂಸ್ಕಾರ

7
ಕಪಿಲಾ ನದಿಯಲ್ಲಿ ಇಳಿಮುಖವಾಗದ ಪ್ರವಾಹ

ರಸ್ತೆ ಬದಿಯಲ್ಲೇ ಶವಸಂಸ್ಕಾರ

Published:
Updated:
Deccan Herald

ನಂಜನಗೂಡು: ಕಬಿನಿ ಜಲಾಶಯದಿಂದ ಕಪಿಲಾ ನದಿಗೆ ಭಾನುವಾರ ಕೂಡ ಹೆಚ್ಚಿನ ನೀರು ಬಿಟ್ಟಿದ್ದರಿಂದ ನಗರದಲ್ಲಿ ಪ್ರವಾಹದ ಭೀತಿ ಮುಂದುವರಿದಿದೆ.

ಪ್ರವಾಹದಿಂದಾಗಿ ಪಟ್ಟಣದ ಎಲ್ಲ ಸ್ಮಶಾನಗಳೂ ಜಲಾವೃತಗೊಂಡಿರುವುದರಿಂದ ಶವಸಂಸ್ಕಾರಕ್ಕೆ ಸಾರ್ವಜನಿಕರು ಪರದಾಡುವಂತಾಯಿತು.

ಕಳೆದ ಮೂರು ದಿನಗಳಿಂದ ಮೈಸೂರು–ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನದಿನೀರು ಉಕ್ಕಿ ಹರಿಯುತ್ತಿದ್ದು, ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು.

ಪ್ರವಾಹದ ನೀರಿನಿಂದ ನಗರದ ಮಲ್ಲನಮೂಲೆ ಮಠದ ಬಳಗೆ 5 ಅಡಿಗಳಷ್ಟು ನೀರು ನಿಂತಿದೆ. ಸ್ನಾನಘಟ್ಟದ ಬಳಿಯ ಹದಿನಾರು ಕಾಲು ಮಂಟಪ ಶೇ 90 ಭಾಗ ಮುಳುಗಿದೆ. ನಗರದ ಹಳ್ಳದಕೇರಿ, ತೋಪಿನ ಬೀದಿ, ವಕ್ಕಲಗೇರಿ, ಸರಸ್ವತಿ ಕಾಲೊನಿಯ 28 ಮನೆಗಳು ನೀರಿನಿಂದ ಅವೃತವಾಗಿದ್ದು, ನಗರದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಪ್ರವಾಹ ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರಯಲಾಗಿದೆ.

ಮೈಸೂರಿನ ಕೈಗಾರಿಕಾ ಅಷೋಸಿಯೇಷನ್ ವತಿಯಿಂದ ಭಾನುವಾರ ಬೆಳಿಗ್ಗೆ ಪ್ರವಾಹ ಸಂತ್ರಸ್ತರಿಗೆ ಬಟ್ಟೆ, ಬೆಡ್ ಶೀಟ್, ಸೋಪು, ಎಣ್ಣೆ, ಆಹಾರವುಳ್ಳ ಕಿಟ್‌ಗಳನ್ನು ವಿತರಿಸಲಾಯಿತು.

ರಸ್ತೆ ಬದಿ ಶವಸಂಸ್ಕಾರ: ನಗರದ ಲಿಂಗಾಭಟ್ಟರ ಗುಡಿಬಳಿಯ ಸ್ಮಶಾನ, ಮುಸ್ಲಿಮರ ಸ್ಮಶಾನ, ಹದಿನಾರು ಕಾಲು ಮಠಪದ ಬಳಿಯ ಸ್ಮಶಾನ ಹಾಗೂ ಪರಶುರಾಮ ದೇವಾಲಯದ ಬಳಿಯ ಸ್ಮಶಾನಗಳು ಮುಳುಗಡೆ ಆಗಿರುವುದರಿಂದ ಶವಸಂಸ್ಕಾರಕ್ಕೆ ಅಡ್ಡಿಯುಂಟಾಗಿದೆ.

ಭಾನುವಾರ ಗೌರಿ ಕಟ್ಟೆ ಬೀದಿಯ ತಮ್ಮಣ್ಣ (65) ಮೃತಪಟ್ಟಿದ್ದು, ಶವ ಸಂಸ್ಕಾರಕ್ಕೆ ಅಡ್ಡಿಯಾಗಿದ್ದರಿಂದ ನಗರಸಭೆಯವರು, ದೇವಾಲಯದ ಬಳಿಯ ಚಾಮರಾಜನಗರ ಬೈಪಾಸ್ ರಸ್ತೆಯ ಮಗ್ಗುಲಲ್ಲಿ ಜೆ.ಸಿ.ಬಿ. ಯಂತ್ರದ ಮೂಲಕ ಗಿಡಗಳನ್ನು ಕಿತ್ತು, ಶವ ಸಂಸ್ಕಾರಕ್ಕಾಗಿ ಸ್ಥಳ ಮಾಡಿಕೊಟ್ಟರು.

ನೀರು ಸರಬರಾಜು ಬಂದ್: ನೀರು ಸರಬರಾಜು ಮಾಡುವ ದೇಬೂರಿನ ಕಪಿಲಾ ನದಿ ಪಕ್ಕದ ಜ್ಯಾಕ್ ವೆಲ್ ಹಾಗೂ ಮೋಟರ್‌ ಕೊಠಡಿ ಪ್ರವಾಹದ ನೀರಿನಿಂದ ಅವೃತವಾಗಿದ್ದು, ಕಳೆದ ಮೂರು ದಿನಗಳಿಂದ ಕುಡಿಯುವ ನೀರಿನ ಸರಬರಾಜು ನಿಂತಿದೆ. 

ನಗರದ ಕೈಗಾರಿಕಾ ಪ್ರದೇಶ ಹಾಗೂ ತಾಂಡ್ಯ ಕೈಗಾರಿಕಾ ಪ್ರದೇಶಗಳ ಕೈಗಾರಿಕೆಗಳಿಗೆ ನೀರು ಒದಗಿಸುವ ನದಿಯ ಪಕ್ಕದ ಪಂಪ್‌ಹೌಸ್‌ಗಳು ಮುಳುಗಿದ್ದು, ನೀರಿನ ಹರಿವು ಇಳಿಯುವವರೆಗೆ ಕೈಗಾರಿಕೆಗಳಿಗೆ ನೀರು ಸರಬರಾಜು ಕಷ್ಟವಾಗಲಿದೆ.

ಜಲಾಶಯದಿಂದ ನದಿಗೆ ಹರಿಸಲಾಗುತ್ತಿರುವ 80 ಸಾವಿರ ಕ್ಯೂಸೆಕ್ ನೀರನ್ನು 65 ಸಾವಿರಕ್ಕೆ ಇಳಿಸುವುದರಿಂದ ಪ್ರವಾಹ ಪರಿಸ್ಥಿತಿ ಹತೋಟಿಗೆ ಬರಲಿದೆ. ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ತಾಲ್ಲೂಕು ಆಡಳಿತದ ವತಿಯಿಂದ ಸೋಮವಾರ ತಲಾ ₹5 ಸಾವಿರ ಸಹಾಯಧನದ ಚೆಕ್ ವಿತರಿಸಲಾಗುವುದು ಎಂದು ತಹಶೀಲ್ದಾರ್ ದಯಾನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

ನದಿಯ ತೀರದಲ್ಲಿ ಪೊಲೀಸ್ ಬಂದೋಬಸ್ತ್

ನಂಜನಗೂಡಿನಿಂದ ಮೈಸೂರಿಗೆ ತಲುಪುವವರು ಬಸವನಪುರ–ಕೆಂಪಿಸಿದ್ದನಹುಂಡಿ ಮಾರ್ಗ ಹಾಗೂ ಹುಲ್ಲಹಳ್ಳಿ ಮಾರ್ಗವಾಗಿ ಬರುತ್ತಿದ್ದಾರೆ.

ಪ್ರವಾಹ ನೀರು ಶ್ರೀಕಂಠೇಶ್ವರ ದೇವಾಲಯದ ಸುತ್ತಮುತ್ತಲ ಭಕ್ತಿಮಾರ್ಗ, ದಾಸೋಹ ಭವನ ರಸ್ತೆಗೂ ವ್ಯಾಪಿಸಿದ್ದು, ದಾಸೋಹ ಭವನ, ಡಾರ್ಮೆಟರಿ ಹಾಗೂ ಅಂಗಡಿ ಮಳಿಗೆಗಳನ್ನು ಮುಚ್ಚಲಾಗಿದೆ.

ಪ್ರವಾಹದ ಭೀಕರತೆ ನೋಡಲು ಜನ ಕುತೂಹಲದಿಂದ ನದಿಯ ತೀರದ ಹಾಗೂ ಹೆಜ್ಜಿಗೆ ಸೇತುವೆ, ಹದಿನಾರು ಕಾಲು ಮಂಟಪದ ಬಳಿ ನೆರೆಯುತ್ತಿದ್ದಾರೆ. ನದಿಯ ತೀರದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !