ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗೆ ಭವಿಷ್ಯವಿದೆ; ಮನೆ ಬಾಗಿಲಲ್ಲೇ ಉದ್ಯೋಗ ಬರಲಿದೆ: ಸಂಸದ ಪ್ರತಾಪ್ ಸಿಂಹ

ನಾಲ್ವಡಿ–ಜಯಚಾಮರಾಜ ಒಡೆಯರ್–ಸರ್‌ ಎಂ.ವಿಶ್ವೇಶ್ವರಯ್ಯ ರಾಜಕಾರಣಿಗಳಿಗೆ ಮಾರ್ಗದರ್ಶಕರು;
Last Updated 15 ಸೆಪ್ಟೆಂಬರ್ 2019, 14:30 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರಿಗೆ ಉಜ್ವಲ ಭವಿಷ್ಯವಿದೆ. ಮುಂದಿನ ವರ್ಷಗಳಲ್ಲಿ ನಿಮ್ಮ ಮನೆ ಬಾಗಿಲಲ್ಲೇ ಕೆಲಸ ಸಿಗುವಂತೆ ನೋಡಿಕೊಳ್ಳುವೆ’ ಎಂದು ಮೈಸೂರು–ಕೊಡಗು ಸಂಸದ ಪ್ರತಾಪ್‌ ಸಿಂಹ ಹೇಳಿದರು.

ಹುಲಗಾದ್ರಿ ಟ್ರಸ್ಟ್‌, ಡಾ.ಮೀರಾ ವಿ.ನಾಥನ್‌ ಸಹಯೋಗದಲ್ಲಿ ಭಾನುವಾರ ಎನ್‌ಐಇ ಕಾಲೇಜಿನಲ್ಲಿ ನಡೆದ ಟಿ.ವಿ.ಅಲಮೇಲು ಸ್ಮಾರಕ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬೆಂಗಳೂರು–ಮೈಸೂರು ನಡುವಿನ ದಶಪಥ ರಸ್ತೆಯನ್ನು 2021ರ ದಸರಾ ಒಳಗೆ ಉದ್ಘಾಟಿಸಿ, ವಾಹನ ಸಂಚಾರಕ್ಕೆ ಅವಕಾಶ ಕೊಡಲಾಗುವುದು. ಇದರಿಂದ ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ಮತ್ತಷ್ಟು ಕಡಿಮೆಯಾಗಲಿದೆ’ ಎಂದು ತಿಳಿಸಿದರು.

‘ಮೈಸೂರು ಈ ಹಿಂದೆ ಚಲನಚಿತ್ರೀಕರಣದ ತಾಣವಾಗಿತ್ತು. ಈಚೆಗೆ ಸಿನಿಮಾ ಶೂಟಿಂಗ್ ನಡೆಯೋದೆ ಕಷ್ಟ. ಮತ್ತೆ ಚಿತ್ರೀಕರಣದ ವೈಭವ ಮರುಕಳಿಸುವಂತೆ ಬಹುಪಯೋಗಿ ಸ್ಟುಡಿಯೋ ಒಂದನ್ನು ಆರಂಭಿಸಲಾಗುವುದು. ಇದಕ್ಕಾಗಿಯೇ ಹೈದರಾಬಾದ್‌ಗೆ ಭೇಟಿ ನೀಡಿ, ರಾಮೋಜಿ ಫಿಲಂ ಸಿಟಿ ನೋಡಿಕೊಂಡು ಬಂದಿರುವೆ’ ಎಂದು ಹೇಳಿದರು.

‘ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಇದೀಗ ಚಟುವಟಿಕೆಯ ತಾಣವಾಗಿದೆ. ನನ್ನ ಈ ಅವಧಿಯಲ್ಲಿ 25ಕ್ಕೂ ಹೆಚ್ಚು ವಿಮಾನ ಇಲ್ಲಿಂದ ಹಾರಾಟ ನಡೆಸುವಂತೆ ನೋಡಿಕೊಳ್ಳುವೆ. ವಿಮಾನ ಸಂಪರ್ಕ ಹೆಚ್ಚಿದಾಗ ಸಾಫ್ಟ್‌ವೇರ್‌ ಕಂಪನಿಗಳು ಇಲ್ಲಿಗೆ ಹೆಚ್ಚೆಚ್ಚು ಬರಲಿವೆ. ಉದ್ಯೋಗ ಸೃಷ್ಟಿಯೂ ಹೆಚ್ಚಲಿದೆ’ ಎಂದರು.

ರಾಜಕಾರಣಿಗಳ ಕೊಡುಗೆ ಶೂನ್ಯ: ‘ಏಳು ದಶಕಗಳಿಂದ ಮೈಸೂರಿನ ಅಭಿವೃದ್ಧಿಗೆ ರಾಜಕಾರಣಿಗಳ ಕೊಡುಗೆ ಶೂನ್ಯ. ನಾಲ್ವಡಿ ಕೃಷ್ಣರಾಜ ಒಡೆಯರ್–ಸರ್‌ ಎಂ.ವಿಶ್ವೇಶ್ವರಯ್ಯ ಜೋಡಿಯ ಅಭಿವೃದ್ಧಿಯ ಪರಿಕಲ್ಪನೆಯಿಂದ ಮೈಸೂರು ಸುಂದರ ನಗರವಾಗಿ ರೂಪುಗೊಂಡಿದೆ. ಬೆಂಗಳೂರಿನ ಅಭಿವೃದ್ಧಿಗೂ ಇವರ ಕೊಡುಗೆ ಸ್ಮರಣಾರ್ಹ’ ಎಂದು ಪ್ರತಾಪ್‌ ಸಿಂಹ ಬಣ್ಣಿಸಿದರು.

‘ಜ್ಯೋತಿ ಬಸು 25 ವರ್ಷ ಪಶ್ಚಿಮ ಬಂಗಾಳ ಆಳಿದರು. ಎಂ.ಕರುಣಾನಿಧಿ 22 ವರ್ಷ ತಮಿಳುನಾಡು ಆಳಿದರು. 20 ವರ್ಷದಿಂದ ನವೀನ್‌ ಪಟ್ನಾಯಕ್‌ ಓಡಿಶಾದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಇವರ ಕೊಡುಗೆ ಏನು ಎಂದು ಪ್ರಶ್ನಿಸಿಕೊಂಡರೆ ಯಾವೊಂದು ನೆನಪಿಗೆ ಬರಲ್ಲ. ಇದೇ ರೀತಿ ಬಹುತೇಕ ರಾಜಕಾರಣಿಗಳ ಸ್ಥಿತಿಯಾಗಿದೆ. ಭಾಷಣ ಜನರಿಗೆ, ಬಂಡವಾಳ ತಮಗೆ ಎಂದೇ ಆಳ್ವಿಕೆ ನಡೆಸುವವರ ಸಂತತಿಯೇ ಹೆಚ್ಚಿದೆ. ಇದಕ್ಕೆ ಹೊರತಾಗಿ ಮೈಸೂರು ಅರಸರು ರಾಜ ಪ್ರಭುತ್ವದಲ್ಲೇ ಜನಪರ ಆಡಳಿತ ನೀಡಿದರು. ಅದಕ್ಕಾಗಿಯೇ ಇಂದಿಗೂ ಪ್ರಾತಃಸ್ಮರಣೀಯರಾಗಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT