ಗುರುವಾರ , ಅಕ್ಟೋಬರ್ 21, 2021
28 °C
ಅಭಿವೃದ್ಧಿ ಕಾರ್ಯಕ್ಕೆ ಒಲಿಯಿತು ಪ್ರಶಸ್ತಿ; ಯೋಜನೆಗಳ ಪರಿಣಾಮಕಾರಿ ಅನುಷ್ಠಾನ

ಮೈಸೂರು: ಹಂಪಾಪುರಕ್ಕೆ ಗಾಂಧಿ ಗ್ರಾಮ ಪುರಸ್ಕಾರ

ರವಿಕುಮಾರ್ Updated:

ಅಕ್ಷರ ಗಾತ್ರ : | |

Prajavani

ಹಂಪಾಪುರ: ಸ್ವಚ್ಛತೆ ಮತ್ತು ಶೌಚಾಲಯ ನಿರ್ಮಾಣದಲ್ಲಿ ಗುರಿ ಸಾಧಿಸಿದ ಹಂಪಾಪುರ ಗ್ರಾಮ ಪಂಚಾಯಿತಿಯು 2020–21ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಜಿಲ್ಲೆಯ ಒಟ್ಟು 8 ಗ್ರಾಮ ಪಂಚಾಯಿತಿಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಎಚ್.ಡಿ. ಕೋಟೆ ತಾಲ್ಲೂಕಿನ ಅಣ್ಣೂರು, ಎನ್. ಬೇಗೂರು, ಮಾದಾಪುರ, ಹೆಬ್ಬಲಗುಪ್ಪೆ ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರದ  ಸ್ಪರ್ಧೆಯಲ್ಲಿದ್ದವು. ಈ ಎಲ್ಲಾ ಗ್ರಾಮ ಪಂಚಾಯಿತಿಗಳಿಗಿಂತ ಹೆಚ್ಚು ಅಂಕ ಪಡೆದ ಹಂಪಾಪುರ ಗ್ರಾಮವು ಈ ಬಾರಿಯ ಪ್ರಶಸ್ತಿಗೆ ಆಯ್ಕೆಯಾಗಿದೆ.

‘ಗ್ರಾಮದಲ್ಲಿ ಶೌಚಾಲಯ ನಿರ್ಮಾಣ, ಸ್ವಚ್ಛತೆ, ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ ಅನುಷ್ಠಾನ, ಗುಳೆ ಹೋಗದಂತೆ ತಡೆಯಲು ಅಭಿಯಾನ ಕೈಗೊಂಡಿರುವುದು, ವಾರ್ಡ್ ಸಭೆ, ಗ್ರಾಮ ಸಭೆ ಸೇರಿದಂತೆ ವಿಶೇಷ ಸಭೆಗಳು, ತೆರಿಗೆ ವಸೂಲಿ, ಅನುದಾನ ಬಳಕೆ, ಪಂಚತಂತ್ರ (ಪಂಚಾಯಿತಿ ತಂತ್ರಾಂಶ) ಅನುಷ್ಠಾನ, ವಾರ್ಷಿಕ ಗುರಿ ಸಾಧನೆ ಆಧಾರದಲ್ಲಿ ಹಂಪಾಪುರ ಗ್ರಾಮ ಪಂಚಾಯಿತಿಯು ಪ್ರಶಸ್ತಿಗೆ ಭಾಜನವಾಗಿದೆ’ ಎಂದು ಪಿಡಿಒ ಎಸ್.ವಿ.ಸೌಮ್ಯಾ ತಿಳಿಸಿದರು.

‘ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಉತ್ತಮ ದರ್ಜೆಯ ಪೀಠೋಪಕರಣ, ನೀರು ಶುದ್ಧೀಕರಿಸುವ ಯಂತ್ರ ಅಳವಡಿಕೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಲಾಗುತ್ತಿದೆ. ಇದೇ ನಮ್ಮ ಪಂಚಾಯಿತಿಗೆ ಪುರಸ್ಕಾರ ಬರಲು ಕಾರಣ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿ.ಸೌಭಾಗ್ಯ ಹೇಳಿದರು.

***

ಅಧಿಕಾರಿಗಳ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರತಿದೆ. ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ.

–ವಿ.ಸೌಭಾಗ್ಯ, ಹಂಪಾಪುರ ಗ್ರಾ.ಪಂ ಅಧ್ಯಕ್ಷೆ

***

ಈ ಪುರಸ್ಕಾರ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಮತ್ತಷ್ಟು ಅಭಿವೃದ್ಧಿ ಮಾಡಲು ಈ ಪ್ರಶಸ್ತಿ ಹುರುಪು ನೀಡಿದೆ.
–ಎಸ್.ವಿ.ಸೌಮ್ಯಾ, ಪಿಡಿಒ, ಹಂಪಾಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು