ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಕಳೆ ಪಡೆದ ಗಣೇಶ ಮೂರ್ತಿ ವಹಿವಾಟು

ಮಾರುಕಟ್ಟೆಯಲ್ಲಿ ಬಣ್ಣಲೇಪಿತ ಮತ್ತು ಬಣ್ಣರಹಿತ ಗಣಪನ ಮಧ್ಯೆ ಪೈಪೋಟಿ
Last Updated 2 ಸೆಪ್ಟೆಂಬರ್ 2019, 13:31 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಭಾನುವಾರ ಗೌರಿ–ಗಣೇಶ ಮೂರ್ತಿಗಳ ವ್ಯಾಪಾರ ವಹಿವಾಟು ಅಕ್ಷರಶಃ ಜೀವ ಕಳೆ ಪಡೆಯಿತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪ್ಲಾಸ್ಟಿಕ್‌ ಆಫ್‌ ಪ್ಯಾರೀಸ್‌ (ಪಿಒಪಿ) ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣಪನ ಮೂರ್ತಿಗೆ ಮಣ್ಣಿನ ಗಣಪನ ಮೂರ್ತಿ ಭಾರಿ ಸ್ಪರ್ಧೆಯನ್ನೇ ಒಡ್ಡಿದ್ದು ಕಂಡು ಬಂತು.

ಬಹುಪಾಲು ಎಲ್ಲ ಅಂಗಡಿಗಳಲ್ಲಿಯೂ ಎರಡೂ ಬಗೆಯ ಗಣಪನ ವಿಗ್ರಹಗಳು ಸ್ಥಾನ ಪಡೆದಿದ್ದವು. ಹಲವೆಡೆ ಎರಡೂ ಸಮಪ್ರಮಾಣದಲ್ಲಿ ಇದ್ದದ್ದು ವಿಶೇಷ ಎನಿಸಿತ್ತು.

ರಸ್ತೆಯಲ್ಲಿ ಗಣಪನನ್ನು ಕೂರಿಸುವ ಯುವ ತಲೆಮಾರು ಹೆಚ್ಚಾಗಿ ‘ಪ್ಲಾಸ್ಟಿಕ್‌ ಆಫ್‌ ಪ್ಯಾರೀಸ್‌’ನಿಂದ ಮಾಡಿದ ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣಪನ ಮೂರ್ತಿಯತ್ತಲೇ ವಾಲಿತ್ತು. ಈ ಬಗೆಯ ಮೂರ್ತಿಗಳನ್ನು ಖರೀದಿಸಿ ಟ್ರಾಕ್ಟರ್‌ಗಳು, ಸರಕು ಸಾಗಣೆ ವಾಹನಗಳು ಸೇರಿದಂತೆ ಮತ್ತಿತ್ತರ ವಾಹನಗಳಲ್ಲಿ ಸಾಗಿಸುತ್ತಿದ್ದ ದೃಶ್ಯಗಳು ನಗರದ ಹಲವೆಡೆ ಕಂಡು ಬಂತು.

ಮನೆಗಳಲ್ಲಿ ಗಣಪನನ್ನು ಕೂರಿಸುವವರ ಗಮನ ಹೆಚ್ಚಾಗಿ ಮಣ್ಣಿನ ಮೂರ್ತಿಯತ್ತಲೇ ನೆಟ್ಟಿದ್ದು ಈ ಬಾರಿಯ ವಿಶೇಷ ಎನಿಸಿತ್ತು. ಹಲವು ಮಂದಿ ತಮಗೆ ಅಪ್ಪಟ್ಟ ಮಣ್ಣಿನ ಗಣಪ, ಬಣ್ಣ ಇಲ್ಲದ ಗಣಪನೇ ಬೇಕು ಎಂದು ಕೇಳಿದರು ಎಂದು ಅಗ್ರಹಾರದಲ್ಲಿದ್ದ ವ್ಯಾಪಾರಿ ಮನೋಹರ್ ತಿಳಿಸಿದರು.

ಮಾವಿನಸೊಪ್ಪು, ಗರಿಕೆ ಹುಲ್ಲು, ಮರ್ಗ, ಜವನದಂತಹ ಸುವಾಸಿತ ಸೊಪ್ಪುಗಳು, ತಾವರೆಯಂತಹ ಹೂಗಳ ಮಾರಾಟ ಹೆಚ್ಚಾಗಿ ನಡೆಯಿತು. ಗಣಪತಿ ಕೂರಿಸಲು ಬೇಕಾಗುವ ತೆಂಗಿನ ಗರಿಗಳ ಮಾರಾಟವೂ ಚುರುಕು ಪಡೆದಿತ್ತು.

ಅಗ್ರಹಾರದ ನೂರೊಂದು ಗಣಪತಿ ಹಾಗೂ ಮಹಾಗಣಪತಿ ದೇಗುಲಗಳಲ್ಲಿ ಸಿಂಗಾರ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಹಲವು ದೇಗುಲಗಳಲ್ಲಿ ಸ್ವರ್ಣಗೌರಿಯ ಪ್ರತಿಷ್ಠಾಪನೆಯನ್ನು ನಸುಕಿನ 4.30ರಿಂದ ಬೆಳಿಗ್ಗೆ 6ರವರೆಗೆ ಆಯೋಜಿಸಿದ್ದರೆ, ಗಣಪನ ಪ್ರತಿಷ್ಠಾಪನೆಯನ್ನು ಬೆಳಿಗ್ಗೆ 9.30ಕ್ಕೆ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT