ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಚತುರ್ಥಿ ಇಂದು: ಮೂರ್ತಿ ಪ್ರತಿಷ್ಠಾಪನೆಗೆ ಕ್ಷಣಗಣನೆ

Last Updated 21 ಆಗಸ್ಟ್ 2020, 15:40 IST
ಅಕ್ಷರ ಗಾತ್ರ

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸ್ವರ್ಣಗೌರಿ ವ್ರತಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಕೆಲ ದೇಗುಲಗಳಲ್ಲೂ ವಿಶೇಷ ಪೂಜೆ ನಡೆಯಿತು.

ವ್ರತಾಚರಣೆಗಾಗಿಯೇ ಹಲವು ದಿನಗಳಿಂದ ಸಿದ್ಧತೆ ನಡೆಸಿದ್ದ ಅಸಂಖ್ಯಾತ ಮಹಿಳೆಯರು ಶುಕ್ರವಾರ ನಸುಕಿನಲ್ಲೇ ತಮ್ಮ ಮನೆಗಳಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದರು. ತವರಿನಿಂದ ತಂದುಕೊಟ್ಟಿದ್ದ ಬಾಗಿನವನ್ನು ಗೌರಿ ಮುಂಭಾಗವಿಟ್ಟು ವಿಶೇಷ ಪೂಜೆ ಸಲ್ಲಿಸಿದರು.

ಮನೆಗಳ ಮುಂಭಾಗ ಬಣ್ಣ ಬಣ್ಣದ ರಂಗೋಲಿ ಬಿಡಿಸಿದರು. ಮನೆಯನ್ನು ತಳಿರು–ತೋರಣಗಳಿಂದ ಸಿಂಗರಿಸಿ, ಗೌರಿ ಮೂರ್ತಿಯನ್ನು ನಾನಾ ಪುಷ್ಪಗಳಿಂದ ಅಲಂಕರಿಸಿದ್ದರು. ಪೂಜೆ ಸಲ್ಲಿಸುವಾಗ ಗೌರಿ ಸ್ತುತಿ ಹಾಡಿದರು. ಮನೆ ಮಂದಿಯೊಟ್ಟಿಗೆ ಪ್ರಾರ್ಥಿಸಿದರು.

ಮಂಗಳಾರತಿ ವೇಳೆಗೆ ಕೊರೊನಾ ಆತಂಕದ ನಡುವೆಯೂ ಅಕ್ಕ–ಪಕ್ಕದ ಮನೆಯ ಮುತ್ತೈದೆಯರನ್ನು ಆಹ್ವಾನಿಸಿ, ಅರಿಸಿನ–ಕುಂಕುಮ, ಬಳೆ, ರವಿಕೆಯ ಪುಟ್ಟ, ಪುಟ್ಟ ಬಾಗಿನ ಕೊಟ್ಟು ಆಶೀರ್ವಾದ ಪಡೆದರು. ಫಲತಾಂಬೂಲ ನೀಡಿದರು. ಗೌರಿಗೆ ಹೋಳಿಗೆಯ ನೈವೇದ್ಯ ಸಮರ್ಪಿಸಿದರು.

ನಸುಕಿನಲ್ಲೇ ಪೂಜೆ: ‘ಗುರುವಾರ ರಾತ್ರಿಯೇ ಬಹುತೇಕ ಸಿದ್ಧತೆ ಮಾಡಿಕೊಂಡಿದ್ದೆ. ಶುಕ್ರವಾರ ನಸುಕಿನಲ್ಲೇ ಎದ್ದು, ಶುಚಿರ್ಭೂತಳಾಗಿ ಗೌರಿಯ ಪುಟ್ಟ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಿದೆ’ ಎಂದು ವಿಜಯನಗರದ ನಾಲ್ಕನೇ ಹಂತದ ನಿವಾಸಿ ಮಂಜುಳಾ ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷವೂ ಹಬ್ಬವನ್ನು ಸಡಗರ–ಸಂಭ್ರಮದಿಂದ ಆಚರಿಸುತ್ತಿದ್ದೆವು. ನಮ್ಮ ಬಡಾವಣೆಯ ಮುತ್ತೈದೆಯರನ್ನು ಆಹ್ವಾನಿಸಿ ಅರಿಸಿನ–ಕುಂಕುಮ ನೀಡಿ, ಹೋಳಿಗೆಯ ಊಟ ಬಡಿಸುತ್ತಿದ್ದೆವು. ಆದರೆ ಈ ಬಾರಿ ಕೊರೊನಾದಿಂದ ಅದ್ದೂರಿಯ ಆಚರಣೆ ಮಾಡಿಲ್ಲ. ಮನೆಯಲ್ಲಿ ಆಚರಿಸುತ್ತಿದ್ದ ಪೂಜೆಯ ಸಂಪ್ರದಾಯದ ಪರಂಪರೆಯನ್ನು ಪಾಲಿಸಿದ್ದೇವಷ್ಟೇ’ ಎಂದು ಅವರು ಹೇಳಿದರು.

ಗಣೇಶ: ಗಣೇಶ ಚತುರ್ಥಿ ಶನಿವಾರ. ನಸುಕಿನಿಂದ ತಡರಾತ್ರಿವರೆಗೂ ಮನೆಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಗಣಪನ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿವೆ.

ರಾಜ್ಯ ಸರ್ಕಾರ ಕೊನೆ ಕ್ಷಣದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಹಲವು ಷರತ್ತುಗಳೊಂದಿಗೆ ಅನುಮತಿ ನೀಡಿದ್ದು, ಹಲವು ಗಣಪತಿ ಮಂಡಲಿಗಳು ಗಣೇಶ ಪ್ರತಿಷ್ಠಾಪನೆಗೆ ಮುಂದಾಗಿದ್ದ ಚಿತ್ರಣ ಶುಕ್ರವಾರ ನಗರದ ವಿವಿಧೆಡೆ ಗೋಚರಿಸಿತ್ತು. ಈ ಹಿಂದಿನ ಸಂಭ್ರಮ ರಾರಾಜಿಸಲಿಲ್ಲ.

ಗಣೇಶ ಚತುರ್ಥಿ: ಸಾರ್ವಜನಿಕರಿಗೆ ನಿರ್ಬಂಧ

ಗಣೇಶ ಚತುರ್ಥಿ ಪ್ರಯುಕ್ತ ಮೈಸೂರು ಅರಮನೆ ಆವರಣದಲ್ಲಿರುವ ಕೋಟೆ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಸಾಧ್ಯತೆಯಿರುವುದರಿಂದ ಆ.22ರ ಶನಿವಾರ ದೇಗುಲಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶಿಸಿದ್ದಾರೆ.

ಕೋವಿಡ್-19 ಹರಡುವುದನ್ನು ತಡೆಗಟ್ಟಲಿಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಶನಿವಾರ ದೇವಾಲಯದಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳನ್ನು, ದೇವಾಲಯದ ಒಳಭಾಗದಲ್ಲೇ ಅರ್ಚಕರು ಮತ್ತು ಸಿಬ್ಬಂದಿ ಉಪಸ್ಥಿತಿಯಲ್ಲಿ ನಡೆಸಬಹುದಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT