ಬುಧವಾರ, ನವೆಂಬರ್ 20, 2019
22 °C
ಒಣಭೂಮಿಯಲ್ಲಿ ಉಕ್ಕುತ್ತಿರುವ ಜಲ; ಕೂಲಿಗೆ ಹೋಗುತ್ತಿದ್ದವರೇ ಕೂಲಿ ಕೊಡುವಂತಾದರು!

ಬದುಕು ಹಸನಾಗಿಸಿದ ‘ಗಂಗಾ ಕಲ್ಯಾಣ ಯೋಜನೆ’

Published:
Updated:
Prajavani

ಮೈಸೂರು: ‘ಅಯ್ಯೋ ಸಾಮಿ... ಒಪ್ಪೊತ್ತಿನ ಊಟಕ್ಕೂ ಪರದಾಡ ಬೇಕಿತ್ತು. ಕೂಲಿ ಕೆಲಸಕ್ಕೆ ಹೋಗಿ ಅಷ್ಟೊ ಇಷ್ಟೊ ಸಂಪಾದಿಸಿ ಅದರಲ್ಲೇ ಕುಟುಂಬ ನಡೆಸುತ್ತಿದ್ದೆವು. ಈಗ ಜಮೀನಿನಲ್ಲಿ ಗಂಗೆ ಉಕ್ಕುತ್ತಿದ್ದಾಳೆ. ನಮ್ಮ ಬದುಕೂ ಹಸನಾಗಿದೆ. ಈಗ ನಾವೇ ಕೂಲಿಗೆ ಜನರನ್ನು ಕರೆದುಕೊಳ್ಳುತ್ತಿದ್ದೇವೆ...’

ಮೈಸೂರು ತಾಲ್ಲೂಕಿನ ವರುಣಾ ವಿಧಾನಸಭೆ ಕ್ಷೇತ್ರದ ದುದ್ದಗೆರೆ ಗ್ರಾಮದ 80 ವರ್ಷದ ರಾಮಮ್ಮ ಅವರು ಹೀಗೆ ಹೇಳುತ್ತಿದ್ದಾಗ, ಅವರ ಮೊಗದಲ್ಲಿ ಸಾರ್ಥಕ ಭಾವ ಕಾಣುತ್ತಿತ್ತು.

2 ಎಕರೆ 16 ಗುಂಟೆ ಒಣಭೂಮಿಗೆ ಮಾಲೀಕರಾಗಿದ್ದ ಅವರ ಮನೆಯ ಭಾಗ್ಯದ ಬಾಗಿಲು ತೆರೆಸಿದ್ದು ಡಿ.ದೇವ ರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ‘ಗಂಗಾ ಕಲ್ಯಾಣ’ ಯೋಜನೆ.

ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರ ಖುಷ್ಕಿ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು, ನಿಗಮವು ವೈಯಕ್ತಿಕವಾಗಿ ಕೊಳವೆಬಾವಿ ಕೊರೆಯಿಸಿಕೊಡುವ ಯೋಜನೆ ಅದು. ರಾಮಮ್ಮ ಅವರಂತೆಯೇ ದುದ್ದಗೆರೆ ಗ್ರಾಮದ ಇನ್ನಿಬ್ಬರು ರೈತರೂ ಈ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದು, ಆ ಮೂವರು ರೈತರ ಯಶೋಗಾಥೆ ಇಲ್ಲಿದೆ.

’ವರ್ಷದಲ್ಲಿ ಹುರುಳಿ, ಜೋಳ, ರಾಗಿಯಲ್ಲಿ ಒಂದನ್ನು ಬೆಳೆಯುತ್ತಿದ್ದೆವು. ಅದೂ ವರುಣ ಕೃಪೆ ತೋರಿದರೆ ಮಾತ್ರ. ಆದರೆ,  ಈಗ ವರ್ಷಕ್ಕೆ ಎರಡು ಬೆಳೆಯನ್ನು ಬೆಳೆಯುತ್ತಿದ್ದೇವೆ. ಒಂದು ಎಕರೆಯಲ್ಲಿ 1,200 ಬಾಳೆ ಗಿಡ ಬೆಳೆದಿದ್ದು, ಈಗಾಗಲೇ 5 ಟನ್‌ ಕಟಾವು ಮಾಡಿದ್ದೇವೆ. ಇನ್ನೂ ಮೂರರಿಂದ ನಾಲ್ಕು ಟನ್‌ ಬರುವ ನಿರೀಕ್ಷೆಯಿದೆ. ಸುಮಾರು ₹80 ಸಾವಿರ ಲಾಭ ಗಳಿಸಿದ್ದೇವೆ ಎಂದು ಮುಖ ಅರಳಿಸುತ್ತಾರೆ‘ ರಾಮಮ್ಮ.

’ಉಳಿದ ಜಾಗದಲ್ಲಿ ಮಂಗಳೂರು ಸೌತೆ ಹಾಕಿದ್ದೇವೆ. 40 ತೆಂಗಿನ ಸಸಿಗಳನ್ನೂ ಹಾಕಿದ್ದೇವೆ. ತಲಾ ಎರಡು ಮಾವು, ದಾಳಿಂಬೆ, ಕರಿಬೇವು, ಹಲಸಿನ ಗಿಡಗಳನ್ನೂ ನೆಟ್ಟಿದ್ದೇವೆ. ಈಗ ಮನೆ ಬಳಕೆಗೆ ತರಕಾರಿಯನ್ನೂ ಬೆಳೆದುಕೊಳ್ಳುತ್ತಿದ್ದೇವೆ. ಪುದೀನಾ, ಕನಕಾಂಬರವನ್ನೂ ಹಾಕಿದ್ದೇವೆ. ಜೊತೆಗೆ, ಹಸು, ಕುರಿಯನ್ನೂ ಸಾಕಿದ್ದೇವೆ. 45 ಅಡಿಗೇ ನೀರು ಸಿಕ್ಕಿದ್ದು ಸಮೃದ್ಧವಾಗಿದೆ‘ ಎನ್ನುತ್ತಾರೆ ಅವರು.

ಇದೇ ಗ್ರಾಮದ ಇನ್ನೊಬ್ಬ ಫಲಾನುಭವಿ ಕೆ.ಎಸ್‌.ಮಂಜುನಾಥ್‌ ಅವರಿಗೆ 3 ಎಕರೆ ಜಮೀನು ಇದ್ದು, ಸದ್ಯ ಅಲಸಂದೆ ಹಾಗೂ ಎಳವನ್ ಬೆಳೆದು ಯಶಸ್ವಿಯಾಗಿದ್ದಾರೆ.

30 ವರ್ಷದ ಅವಿವಾಹಿತ, ಪದವೀ ಧರ ಮಂಜುನಾಥ್‌ ಅವರು 2 ವರ್ಷದ ಹಿಂದಷ್ಟೇ, ಈ ಯೋಜನೆಯಡಿ ಕೊಳವೆ ಬಾವಿ ಕೊರೆಸಿದ ಬಳಿಕ ತೋಟಗಾರಿಕಾ ಬೆಳೆಯನ್ನು ಬೆಳೆಯುತ್ತಿದ್ದಾರೆ.

‘400 ಅಡಿ ಬಾವಿ ಕೊರೆಸಿದ್ದು 200 ಅಡಿಗೇ ನೀರು ಸಿಕ್ಕಿದೆ. ಈ ಯೋಜನೆಗೆ ಆಯ್ಕೆಯಾದ ಬಳಿಕ ಹನಿ ನಿರಾವರಿ ವ್ಯವಸ್ಥೆ ಸೇರಿದಂತೆ ವಿವಿಧ ಕೃಷಿ ಪ‍ರಿಕರಗಳಿಗೆ ಸಬ್ಸಿಡಿಯೂ ದೊರೆಯುತ್ತಿದೆ. ನೀರಿನ ಸೌಲಭ್ಯ ದೊರೆತ ಮೇಲೆ ಆದಾಯ ಗಳಿಸುತ್ತಿದ್ದೇನೆ. 90 ತೆಂಗು, 2 ಮಾವು, 2 ನಿಂಬೆ ಗಿಡಗಳನ್ನು ಬೆಳೆದಿದ್ದೇನೆ. ಈಗ 6 ಟನ್‌ ಅಲಸಂದೆ ಮಾರಿದ್ದು ಇನ್ನೂ 4 ರಿಂದ 5 ಟನ್‌ ಬರುವ ನಿರೀಕ್ಷೆಯಿದೆ. ಸರಾಸರಿ ಎಕರೆಗೆ 7 ಟನ್‌ ಬೆಳೆಯುತ್ತಿದ್ದು, ಕೆ.ಜಿ.ಗೆ ₹5 ಖರ್ಚಾಗುತ್ತಿದೆ’ ಎಂದು ಅವರು ವಿವರಿಸಿದರು.

‘ಈ ಭಾಗದಲ್ಲಿ ಯಾರೂ ಎಳವನ್‌ (ಸೌತೆ ಜಾತಿಯ ತರಕಾರಿ) ಬಳಸುವುದಿಲ್ಲ. ಆದ್ದರಿಂದ ಕೇರಳಕ್ಕೆ ಸಾಗಿಸುತ್ತೇವೆ. ಕೆ.ಜಿಗೆ ಸರಾಸರಿ ₹20  ಇದ್ದು ಸೀಸನ್‌ನಲ್ಲಿ ₹ 40 ದೊರೆಯುತ್ತದೆ. ಹಿಂದೆ ಒಣಭೂಮಿಯಿದ್ದಾಗ ಕೃಷಿ ಮಾಡಲು ಆತಂಕವಾಗುತ್ತಿತ್ತು. ಆದರೆ, ಈಗ ಕೃಷಿಯತ್ತ ಆಕರ್ಷಿತನಾಗಿದ್ದೇನೆ’ ಎನ್ನುತ್ತಾರೆ ಮಂಜುನಾಥ್‌.

ಮತ್ತೊಬ್ಬ ಫಲಾನುಭವಿ ಬಸವ ಲಿಂಗ. ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಸಿಹಿಗುಂಬಳ, ಬದನೆ, ಎಲೆಕೋಸು, ಹೂಕೋಸು ಬೆಳೆದಿದ್ದಾರೆ. ಅಲ್ಲದೇ 5 ಹಸುಗಳನ್ನು ಸಾಕಿದ್ದು ನಿತ್ಯವೂ ಡೇರಿಗೆ 25 ಲೀಟರ್‌ ಹಾಲು ಹಾಕುತ್ತಾರೆ.

’ಪ್ರತಿ ವಿಧಾನಸಭೆ ಕ್ಷೇತ್ರದಿಂದ ಮೂವರು ಫಲಾನುಭವಿಗಳನ್ನು ಕ್ಷೇತ್ರದ ಶಾಸಕ ಅಧ್ಯಕ್ಷರಾಗಿರುವ ಸಮಿತಿ ಆಯ್ಕೆ ಮಾಡುತ್ತದೆ. ₹40 ಸಾವಿರ ವಾರ್ಷಿಕ ಆದಾಯ ಇರುವ, 5 ಎಕರೆಗಿಂತ ಕಡಿಮೆ ಜಮೀನು ಇರುವ ರೈತರನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಕೊಳವೆ ಬಾವಿಗೆ ಉಚಿತವಾಗಿ ವಿದ್ಯುತ್ ಅನ್ನೂ ಒದಗಿಸಲಾಗುತ್ತಿದೆ. ಬೇಸಾಯಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳಿಂದ ಸಬ್ಸಿಡಿಯೂ ದೊರೆಯುತ್ತದೆ. ಈ ಯೋಜನೆಗೆ ಆಯ್ಕೆಯಾದ ಬಹುತೇಕರು ಯಶಸ್ವೀ ರೈತರಾಗಿದ್ದಾರೆ‘ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ನಿಗಮದ ಮೈಸೂರು ವಿಭಾಗ ಸಹಾಯಕ ಪ್ರಧಾನ ವ್ಯವಸ್ಥಾಪಕ ಟಿ.ಶ್ರೀನಿವಾಸ್‌.

ಈ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಮೈಸೂರು ಜಿಲ್ಲಾ ವ್ಯವಸ್ಥಾಪಕರಾದ ಎಚ್‌.ಎ.ಶೋಭಾ ಮುಂದಾಗಿದ್ದು ರೈತರಿಗೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದಾರೆ. ಮಾಹಿತಿಗೆ 0821– 2341194 ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)