ದಸರೆ ಹೊಸ್ತಿಲಲ್ಲಿ ಗಬ್ಬೆದ್ದು ನಾರುತ್ತಿದೆ ಸ್ವಚ್ಚ ನಗರಿ ಮೈಸೂರು

7
ಒಂದೆರಡು ದಿನಗಳಲ್ಲಿ ಗಬ್ಬೆದ್ದು ನಾರುವ ಸ್ವಚ್ಛನಗರಿ

ದಸರೆ ಹೊಸ್ತಿಲಲ್ಲಿ ಗಬ್ಬೆದ್ದು ನಾರುತ್ತಿದೆ ಸ್ವಚ್ಚ ನಗರಿ ಮೈಸೂರು

Published:
Updated:
Deccan Herald

ಮೈಸೂರು: ದೇಶದ ಸ್ವಚ್ಚನಗರಿಗಳ ಪಟ್ಟಿಯಲ್ಲಿ ಮೊದಲ ಹತ್ತರೊಳಗೆ ಸ್ಥಾನ ಪಡೆದಿದ್ದ ಮಲ್ಲಿಗೆ ನಗರಿಯಲ್ಲಿ ಕಸದ ರಾಶಿ ಗುಡ್ಡೆಯಾಗತೊಡಗಿದೆ. ಪೌರಕಾರ್ಮಿಕರು ಸಾಮೂಹಿಕವಾಗಿ ಪ್ರತಿಭಟನೆಗೆ ಕುಳಿತಿರುವುದರಿಂದ ಸ್ವಚ್ಛತಾ ಕಾರ್ಯ ನಡೆದಿಲ್ಲ. ಹೀಗಾಗಿ, ಎಲ್ಲೆಲ್ಲೂ ಕಸದ ತಿಪ್ಪೆಗಳೇ ಸೃಷ್ಟಿಯಾಗಿವೆ.

ನಗರದ ಹೃದಯಭಾಗವಾದ ಅಗ್ರಹಾರ, ದೇವರಾಜ ಮಾರುಕಟ್ಟೆ, ಎಂ.ಜಿ.ರಸ್ತೆ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆಯ ಆಸುಪಾಸು, ಚಾಮರಾಜ ಮೊಹಲ್ಲಾ, ದೇವರಾಜ ಮೊಹಲ್ಲಾ, ಉದಯಗಿರಿ, ರಾಮಕೃಷ್ಣನಗರ ಸೇರಿದಂತೆ ಬಹುತೇಕ ಕಡೆ ಕಸದ ರಾಶಿ ಬಿದ್ದಿದೆ.

ಮುಖ್ಯವಾಗಿ ರಸ್ತೆಬದಿಯ ಮೊಬೈಲ್ ಕ್ಯಾಂಟೀನ್‌ನವರು ಹೆಚ್ಚು ಮನೆಗಳು ಇರದ ಕಡೆ, ಖಾಲಿ ಪ್ರದೇಶಗಳಲ್ಲಿ ಕಸವನ್ನು ಸುರಿಯುತ್ತಾರೆ. ಅಲ್ಲಲ್ಲಿ ಇರಿಸಿರುವ ಕಂಟೇನರ್‌ಗಳಲ್ಲಿ ಕಸ ಹಾಕುತ್ತಾರೆ. ಸಾಮಾನ್ಯವಾಗಿ ಬೆಳಿಗ್ಗೆ ಹೊತ್ತು ಇಲ್ಲಿಗೆ ಬರುವ ಲಾರಿಗಳಲ್ಲಿ ಕಸವನ್ನು ಸಂಗ್ರಹಿಸಿ, ಕಸ ಸಂಗ್ರಹಾಗಾರಕ್ಕೆ ಪೌರ ಕಾರ್ಮಿಕರು ರವಾನಿಸುತ್ತಾರೆ. ಹೀಗಾಗಿ, ನಗರ ಸ್ವಚ್ಛತೆಯನ್ನು ಕಾಣುತ್ತಿತ್ತು.

ಆದರೆ, ಈಗ ಪೌರಕಾರ್ಮಿಕರು ಪ್ರತಿಭಟನೆಯ ಹಾದಿ ತುಳಿದಿರುವುದರಿಂದ ಕಸ ತೆರವು ಸಾಧ್ಯವಾಗಿಲ್ಲ. ಮಾರುಕಟ್ಟೆಗಳಲ್ಲಿ ಕೊಳೆತ ತರಕಾರಿ, ಹಣ್ಣುಗಳು, ಮೊಬೈಲ್ ಕ್ಯಾಂಟೀನ್‌ಗಳಲ್ಲಿನ ತ್ಯಾಜ್ಯಗಳು, ಮಾಂಸದಂಗಡಿಗಳ ತ್ಯಾಜ್ಯಗಳೆಲ್ಲವೂ ಆಯಕಟ್ಟಿನ ಸ್ಥಳಗಳಲ್ಲಿ ಸೇರಿದೆ. ಬುಧವಾರ ಇದು ದುಪ್ಪಟ್ಟಾಗಲಿದೆ. ಗುರುವಾರದ ಹೊತ್ತಿಗೆ ಇವುಗಳಿಂದ ದುರ್ವಾಸನೆ ಹೊರಟು ಅಸಹನೀಯ ವಾತಾವರಣ ಸೃಷ್ಟಿಯಾಗಲಿದೆ.

‌ಮನೆ, ಮನೆಗಳಲ್ಲಿ ಕಸ:

ಒಂದು ಕಡೆ ನಗರದ ಬೀದಿಗಳಲ್ಲಿ ಸಂಗ್ರಹಗೊಂಡ ಕಸ ಒಂದೆಡೆಯಾದರೆ ಮತ್ತೊಂದೆಡೆ ಮನೆಮನೆಗಳಲ್ಲಿ ಕಸವನ್ನು ಸಂಗ್ರಹಿಸುವ ಪೌರಕಾರ್ಮಿಕರು ಬಾರದೇ ಇರುವುದರಿಂದ ಕಸದ ಡಬ್ಬಿಗಳು ತುಂಬಿವೆ. ಗುರುವಾರವೂ ಕಸ ಸಂಗ್ರಹ ಕಾರ್ಯ ನಡೆಯದೇ ಇದ್ದರೆ ಕೆಲವು ಸಾರ್ವಜನಿಕರು ಅನಿವಾರ್ಯವಾಗಿ ಎರಡು ದಿನಗಳಿಂದ ಕೊಳೆತ ಕಸವನ್ನು ಹೋಟೆಲ್‌ನವರು, ಅಂಗಡಿಯವರು ಕಸ ಎಸೆದಿರುವ ಜಾಗಗಳಲ್ಲಿ ಸುರಿಯುವ ಸಾಧ್ಯತೆ ಇದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಕಠಿಣವಾಗಲಿದೆ. ಕೊಳೆಯುತ್ತಿರುವ ಕಸವನ್ನು ಹೊರಗೂ ಎಸೆಯಲಾಗದೆ, ಮನೆಯಲ್ಲೂ ಇಟ್ಟುಕೊಳ್ಳಲಾಗದೇ ಹಲವು ಸಾರ್ವಜನಿಕರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

‌ಹೋಟೆಲ್‌ಗಳಲ್ಲಿ ತೀವ್ರಗೊಂಡ ಸಮಸ್ಯೆ:

ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕಸದ ಸಮಸ್ಯೆ ತೀವ್ರಗೊಂಡಿದೆ. ತುಂಬಿ ತುಳುಕುತ್ತಿರುವ ಕಸದ ಬ್ಯಾರಲ್‌ಗಳನ್ನು ಖಾಲಿ ಮಾಡಲಾಗದೇ ಹೋಟೆಲ್ ಮಾಲೀಕರು ಪರಿತಪಿಸುತ್ತಿದ್ದಾರೆ. ಗುರುವಾರವೂ ಕಸ ಸಂಗ್ರಹಗಾರರು ಬಾರದೇ ಇದ್ದರೆ ಇವರೂ ಅನಿವಾರ್ಯವಾಗಿ ಈಗಾಗಲೇ ಸೃಷ್ಟಿಯಾಗಿರುವ ಕಸದ ತಿಪ್ಪೆಗಳಲ್ಲಿ ತ್ಯಾಜ್ಯ ಹಾಕುವ ಸಂಭವ ಇದೆ. ಇದರಿಂದ ಗುರುವಾರ ಹಾಗೂ ಶುಕ್ರವಾರದ ಹೊತ್ತಿಗೆ ನಗರದ ಅಲ್ಲಲ್ಲಿ ಮತ್ತಷ್ಟು ಕಸದ ಗುಡ್ಡಗಳೇ ನಿರ್ಮಾಣವಾಗಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !