ಮಂಗಳವಾರ, ಏಪ್ರಿಲ್ 13, 2021
30 °C
ಪಂಡಿತ್ ಇಂದೂಧರ ನಿರೋಡಿ ಅಭಿಮತ

‘ಘರಾಣೆಗಳಲ್ಲಿ ಆಗ್ರಾ ಘರಾಣೆ ಪ್ರಮುಖವಾದುದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಹಿಂದೂಸ್ತಾನಿ ಸಂಗೀತದಲ್ಲಿ ಹಲವು ಘರಾಣೆಗಳಿದ್ದು, ಇವುಗಳಲ್ಲಿ ಆಗ್ರಾ ಘರಾಣೆ ಪ್ರಮುಖವಾದುದು’ ಎಂದು ಪಂಡಿತ್ ಇಂದೂಧರ ನಿರೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕಲ್ಪಕ್ಷೇತ್ರ ಸಭಾಂಗಣದಲ್ಲಿ ಗಾಯನಸಭಾ ಸಂಸ್ಥೆ ಶನಿವಾರ ರಾತ್ರಿ ಆಯೋಜಿಸಿದ್ದ ‘ಆಗ್ರಾ ಘರಾಣೆ’ ಉಪನ್ಯಾಸದಲ್ಲಿ ಮಾತನಾಡಿದ ಅವರು, ‘ದ್ರುಪದ್ ಗಾಯನದಿಂದ ಇದು ಹುಟ್ಟಿಕೊಂಡಿದೆ. ಗಗ್ಗೆ ಖುದಾಬಕ್ಷ್ ಇದನ್ನು ರೂಪಿಸಿದಾತ. 19ನೇ ಶತಮಾನದಲ್ಲಿ ಇದು ಸೃಷ್ಟಿಯಾಗಿದ್ದು, ಖುದಾಬಕ್ಷ್ ವಂಶಸ್ಥರು, ರಕ್ತ ಸಂಬಂಧಿಗಳು, ಶಿಷ್ಯ ಪಡೆ ಆಯಾ ಕಾಲಘಟ್ಟದಲ್ಲಿ ಬೆಳೆಸಿಕೊಂಡು ಬಂದಿದೆ’ ಎಂದು ಹೇಳಿದರು.

ರಾಗ ಭೀಮ್ ಪಲಾಸ್‌ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿರೋಡಿ, ಗಾಯನದ ಬಳಿಕ ಅದರ ಮೂಲ, ಸ್ವರೂಪವನ್ನು ಪ್ರಾತ್ಯಕ್ಷಿಕೆ ಮೂಲಕ ನೆರೆದಿದ್ದ ಸಂಗೀತಾಸಕ್ತರ ಮನಮುಟ್ಟುವಂತೆ ತಿಳಿಸಿದರು. ಪ್ರಮುಖ ಗಾಯಕರು ಆಗ್ರಾ ಘರಾಣೆಯ ಬೆಳವಣಿಗೆಯಲ್ಲಿ ಈಚೆಗಿನ ವರ್ಷಗಳಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ ಎಂದರು.

‘ಆಗ್ರಾ ಘರಾಣೆಯಲ್ಲಿ ‘ಚೌ ಮುಖಿ’ ಅಂಶಗಳು ವಿಶೇಷತೆಗಳನ್ನೊಳಗೊಂಡಿವೆ. ನೋಂ ತೋಂ ಆಲಾಪ, ಬೋಲ್ ಅಂಗ, ಉಪಜ್, ಲಯಕಾರಿ ಪ್ರಮುಖವಾದವು’ ಎಂದು ಹೇಳುವ ಜತೆಯಲ್ಲೇ ರಾಗ ಕೇದಾರ್‌ನಲ್ಲಿ ಇವುಗಳ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು.

ಪಂಡಿತ್ ಇಂದೂಧರ ನಿರೋಡಿ ಅವರಿಗೆ ಶ್ರೀರಾಮ್ ಭಟ್ ಹಾರ್ಮೋನಿಯಂ ಸಾಥ್‌ ನೀಡಿದರೆ, ರಮೇಶ ಧನೂರ–ತಬಲಾ, ಪಂಡಿತ್ ವೀರಭದ್ರಯ್ಯ ಹಿರೇಮಠ, ಸುನೀತಾ ಹಿರೇಮಠ ತಂಬೂರಿಯ ಸಾಥ್ ನೀಡಿದರು. ಸಂಗೀತಾಸಕ್ತರು ಆಗ್ರಾ ಘರಾಣೆಯ ಗಾಯನ, ಪ್ರಾತ್ಯಕ್ಷಿಕೆಯನ್ನು ಕೇಳಿ ತಲೆ ತೂಗಿದರು. ಎರಡು ಗಂಟೆಗೂ ಹೆಚ್ಚಿನ ಅವಧಿ ಸಂಗೀತ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.