ಶುಕ್ರವಾರ, ಮಾರ್ಚ್ 31, 2023
32 °C
ಸಕಾಲಕ್ಕೆ ಮಳೆಯಿಲ್ಲದೆ ಇಳುವರಿಯೂ ಕುಂಠಿತ l ದಾಸ್ತಾನಿನಲ್ಲೇ ಉಳಿದಿರುವ ಬೆಳೆ

ಮೈಸೂರು: ಶುಂಠಿ ಬೆಲೆ ಕುಸಿತ, ಬೆಳೆಗಾರ ಕಂಗಾಲು

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯಲ್ಲಿ ಶುಂಠಿ ಕೊಯ್ಲು ಶುರುವಾಗಿದ್ದು, ಹಳೆಯ ಶುಂಠಿ ಮಾರಾಟವಾಗದೇ ಇರುವುದರಿಂದ ಬೆಲೆಯೂ ಕುಸಿದಿದೆ. ಕೋವಿಡ್‌ ಸಂಕಷ್ಟದಲ್ಲೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ಕೃಷಿಕರನ್ನು ಕಂಗಾಲಾಗಿಸಿದೆ.

ಹೊಸ ಶುಂಠಿಗೆ ಮಾರುಕಟ್ಟೆಯಲ್ಲಿ ₹ 900–₹ 1000 (60 ಕೆ.ಜಿ.ತೂಕದ ಬ್ಯಾಗ್‌) ಧಾರಣೆಯಿದ್ದರೆ, ಹಳೆಯ ಶುಂಠಿಗೆ ₹ 2,100–₹ 2,300ರಷ್ಟಿದೆ ಎಂದು ವರ್ತಕ ಸಮೂಹ ತಿಳಿಸಿದೆ.

’ನಮಗೆ ಈ ದರವೇ ಸಿಗುತ್ತಿಲ್ಲ. ಹೊಸ ಶುಂಠಿಗೆ ₹ 600–₹ 700 ಸಿಕ್ಕರೆ, ಹಳೆಯ ಶುಂಠಿಗೆ ₹ 1,700–₹ 1800 ಮಾತ್ರ ಸಿಗುತ್ತಿದೆ’ ಎನ್ನುತ್ತಾರೆ ರೈತರು.

’ಹಿಂದಿನ ವರ್ಷ ಹೊಸ ಶುಂಠಿಯ ಧಾರಣೆ ₹ 1,100–₹ 1,200 ಇದ್ದರೆ, ಹಳೆ ಶುಂಠಿ ₹ 8 ಸಾವಿರದ ತನಕವೂ ಮಾರಾಟವಾಗಿತ್ತು’ ಎಂದು ಬೆಟ್ಟದಪುರದ ಶುಂಠಿ ಬೆಳೆಗಾರ ಆರ್‌.ವೆಂಕಟೇಶ್‌ ಹಾಗೂ ವ್ಯಾಪಾರಿ ಕುಲದೀಪ್‌ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘₹ 4 ಸಾವಿರದ ಆಸುಪಾಸಿನಲ್ಲಿ ಸಿಗುತ್ತಿದ್ದ ಶುಂಠಿ ಬಿತ್ತನೆ ಬೀಜ ₹ 900ಕ್ಕೆ ಸಿಕ್ಕಿತು. ಹಿಂದಿನ ವರ್ಷ ದಾಖಲೆಯ ಬೆಲೆ ದೊರಕಿದ್ದರಿಂದ ಬಿತ್ತನೆಯೂ ಹೆಚ್ಚಿದೆ. ಒಂದು ಎಕರೆಯಲ್ಲಿ ಶುಂಠಿ ಕೃಷಿ ನಡೆಸಲು ₹ 2.5 ಲಕ್ಷ ಖರ್ಚಾಗಿದೆ. ಏಪ್ರಿಲ್‌, ಮೇ, ಜೂನ್‌ನಲ್ಲಿ ಮಳೆಯಾಗದಿ
ದ್ದರಿಂದ ಇಳುವರಿಗೆ ಹೊಡೆತ ಬಿದ್ದಿದೆ. ಕನಿಷ್ಠ 600 ಬ್ಯಾಗ್ ಸಿಗುವ ಜಾಗದಲ್ಲಿ 300 ಬ್ಯಾಗ್‌ ಸಿಕ್ಕರೆ ಹೆಚ್ಚು ಎನ್ನುವಂತಹ ಸ್ಥಿತಿಯಿದೆ. ಈ ಹೊತ್ತಲ್ಲಿ ಧಾರಣೆ ಕುಸಿತಗೊಂಡಿದ್ದು, ಬೆಳೆಗಾರರಿಗೆ ಭಾರಿ ಹೊಡೆತ ನೀಡಿದೆ. ಬೆಲೆ ಹೆಚ್ಚಳಗೊಳ್ಳದಿದ್ದರೆ ಬಹುತೇಕ ಕೃಷಿಕರು ಸಾಲಗಾರರಾಗುವುದು ಖಚಿತ’ ಎನ್ನುತ್ತಾರೆ ಬೆಳೆಗಾರ ಮಹೇಶ್.

‘ಕೋವಿಡ್ ಲಾಕ್‌ಡೌನ್‌ ನಿಂದ ವಹಿವಾಟು ನಡೆಯಲಿಲ್ಲ. ಕೇರಳದಲ್ಲಿ ಪ್ರಕರಣ ಹೆಚ್ಚಿದ್ದರಿಂದ ವಿದೇಶಗಳಿಗೆ ರಫ್ತಾಗಲಿಲ್ಲ. ರಮ್ಜಾನ್‌ ಮಾಸಾಚರಣೆಯ ವೇಳೆ ವ್ಯಾಪಾರಕ್ಕೆ ಅವಕಾಶ ಸಿಗದಿದ್ದರಿಂದ ಹಳೆಯ ಶುಂಠಿ ದಾಸ್ತಾನಿನಲ್ಲಿ ಉಳಿದಿದೆ. ಇವೆಲ್ಲವೂ ಬೆಲೆ ಕುಸಿತಕ್ಕೆ ಕಾರಣವಾಗಿದೆ’ ಎಂದು ವ್ಯಾಪಾರಿ ಸಯ್ಯದ್‌ ತಿಳಿಸಿದರು.

ಶುಂಠಿಗೆ ಕೊಳೆ ರೋಗವೂ ಬಾಧಿಸುತ್ತಿದ್ದು, ಬೆಳೆಗಾರರನ್ನು ಕಂಗಾಲಾಗಿಸಿದೆ.

‘ರಫ್ತಾಗ್ತಿಲ್ಲ; ಮಾರುಕಟ್ಟೆಯೂ ಸಿಗ್ತಿಲ್ಲ’

‘ಶುಂಠಿಯು ದೇಶದ ಗಡಿಗೆ ಹಾಗೂ ವಿದೇಶಗಳಿಗೆ ರಫ್ತಾಗದೇ ಇರುವುದರಿಂದ ಸಹಜವಾಗಿಯೇ ಬೆಲೆ ಕುಸಿದಿದೆ. ಈ ಬಾರಿ ಇಳುವರಿಯೂ ಹೆಚ್ಚಾಗಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕೆ.ರುದ್ರೇಶ್‌.

‘ಜಿಲ್ಲೆಯಲ್ಲಿ 3,500 ಹೆಕ್ಟೇರ್‌ನಲ್ಲಿ ಶುಂಠಿ ಬೆಳೆಯಿದೆ. ಕೊಡಗು, ಹಾಸನ, ಚಾಮರಾಜನಗರ ಸೇರಿ ಮಲೆನಾಡಿನ ಜಿಲ್ಲೆಗಳಲ್ಲೂ ಬೆಳೆಯಲಾಗುತ್ತಿದೆ. ಕೇರಳದಲ್ಲೇ ಹೆಚ್ಚಿನ ವಹಿವಾಟು ನಡೆಯುತ್ತದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು