ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಾಭಿವೃದ್ಧಿಗೆ ಆದ್ಯತೆ ನೀಡಿ

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪ್ರತಿಷ್ಠಾನ ಉದ್ಘಾಟಿಸಿದ ಸದ್ಗುರು
Last Updated 2 ಜೂನ್ 2019, 19:49 IST
ಅಕ್ಷರ ಗಾತ್ರ

ಮೈಸೂರು: ‘ಎಲ್ಲವೂ ತಿಳಿದಿದೆ ಎಂದು ತಿಳಿದರೆ ಬೆಳವಣಿಗೆಗೆ ಆಸ್ಪದವೇ ಇರುವುದಿಲ್ಲ. ಬದಲಿಗೆ ಎಲ್ಲವನ್ನೂ ತಿಳಿಯಬೇಕಿದೆ ಎಂಬ ಹಂಬಲ ಇದ್ದರೆ ಸದಾಕಾಲ ಅಭಿವೃದ್ಧಿ ನಮ್ಮನ್ನು ಹಿಂಬಾಲಿಸುತ್ತದೆ’ ಎಂದು ಈಶ ಪ್ರತಿಷ್ಠಾನದ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಪ್ರತಿಪಾದಿಸಿದರು.

ಮೈಸೂರು ರಾಜವಂಶಸ್ಥರು ಸ್ಥಾಪಿಸಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಪ್ರತಿಷ್ಠಾನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಗಳಿಸುವ ಜ್ಞಾನವನ್ನು ಪ್ರಪಂಚದ ಗಾತ್ರದ ಎದುರು ಹೋಲಿಸಿಕೊಂಡರೆ ಅದು ಸಾಸಿವೆ ಕಾಳಿಗೂ ಸಮನಾಗುವುದಿಲ್ಲ. ಹಾಗಾಗಿ, ತಾನೇ ಜ್ಞಾನಿ ಎನ್ನುವುದನ್ನು ಬಿಡಬೇಕು. ಸದ್ಗುರು ಇನ್ನೊಬ್ಬ ಇಲ್ಲ ಎಂದು ತಿಳಿಯಬಾರದು. ಸದ್ಗುರುವಿಗೂ ದೊಡ್ಡ ಸದ್ಗುರು ಇನ್ನೊಬ್ಬರಿರುತ್ತಾರೆ. ಇನ್ಫೊಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯಂತೆ ಇನ್ನೊಬ್ಬರು ಬರಲಾರರು ಎನ್ನಬಾರದು. ಏಕೆಂದರೆ, ಈಗಾಗಲೇ ಅವರ ಮಾದರಿ ಇದೆ. ಅವರನ್ನು ಮೀರಿಸುವ ನಾರಾಯಣ ಮೂರ್ತಿ ಭವಿಷ್ಯದಲ್ಲಿ ಬೇಕಿರುತ್ತದೆ’ ಎಂದು ವಿಶ್ಲೇಷಿಸಿದರು.

ಪ್ರಶ್ನಿಸುವುದೇ ಮುಖ್ಯ: ಇಡೀ ವಿಶ್ವದಲ್ಲಿ ಅತಿ ಹೆಚ್ಚು ಪ್ರಶ್ನಿಸುವ ಜನರಿದ್ದರೆ ಅವರು ಭಾರತೀಯರೇ. ಏಕೆಂದರೆ, ಭಾರತವು ಜ್ಞಾನದಾಹಿಗಳ ನಾಡು. ಈ ಪ್ರವೃತ್ತಿ ಇನ್ನೂ ಹೆಚ್ಚು ಬೆಳೆಯಬೇಕು ಎಂದು ಅವರು ಸಲಹೆ ನೀಡಿದರು.

‘ಕೆಟ್ಟ ಚಿಂತನೆ ದೂರವಿಡಬೇಕು ಎನ್ನುವುದು ನಮ್ಮ ಸದಾಶಯವಾಗಿರಬೇಕು. ಅಡಾಲ್ಫ್‌ ಹಿಟ್ಲರ್‌ ಮಾತ್ರ ಕೆಟ್ಟವನಲ್ಲ. ಆತ ಸಾಮೂಹಿಕ ಹಿಂಸಾಚಾರಗಳನ್ನು ಮಾಡಲು ಅವನ ಸಂಘಟನಾ ಚತುರತೆ, ಬುದ್ಧಿ ಶಕ್ತಿ ಕಾರಣವಾಗಿತ್ತು. ನಮ್ಮಲ್ಲೂ ಅನೇಕ ಹಿಟ್ಲರ್‌ಗಳು ಇದ್ದಾರೆ. ಆದರೆ, ಹಿಟ್ಲರ್‌ನಂತೆ ಬುದ್ಧಿವಂತರಲ್ಲ. ಅವನ ಬುದ್ಧಿವಂತಿಕೆ ಯಾರಿಗೂ ಮಾದರಿಯಾಗಲೂ ಬಾರದು. ಬದಲಿಗೆ, ಎಲ್ಲರಿಗೂ ಒಳಿತು ಮಾಡುವ ಬುದ್ಧಿ ಬರಬೇಕು’ ಎಂದು ಆಶಿಸಿದರು.

ಕನ್ನಡಿಗರಿಗೆ ಮಾದರಿ: ನಾರಾಯಣ ಮೂರ್ತಿ ಅವರು ಸಮಸ್ತ ಕನ್ನಡಿಗರಿಗೆ ಮಾದರಿಯಾಗಿದ್ದಾರೆ. ಕನ್ನಡಿಗರು ಗುಮಾಸ್ತರಾಗಲು ಮಾತ್ರ ಲಾಯಖ್ಖು ಎಂಬ ಕಾಲವಿತ್ತು. ಆದರೆ, ನಾರಾಯಣ ಮೂರ್ತಿ ಅವರು ಮಾಲೀಕರಾಗಿ ಮಾದರಿ ನಿರ್ಮಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ಫೊಸಿಸ್ ಸಹ ಸಂಸ್ಥಾ‍ಪಕ ಎನ್‌.ಆರ್.ನಾರಾಯಣ ಮೂರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ‘ಉಳ್ಳವರು ಬಡವರಿಗೆ ದಾನ ಮಾಡಬೇಕು. ಅದು ಮಿಕ್ಕೆಲ್ಲಾ ಕ್ರಿಯೆಗಳಿಗಿಂತಲೂ ಶ್ರೇಷ್ಠವಾದುದು’ ಎಂದು ಕಿವಿಮಾತು ಹೇಳಿದರು.

‘ಹಣ ಒಂದೆಡೆ ಸೇರಬಾರದು; ಬದಲಿಗೆ ಅದು ಎಲ್ಲೆಡೆ ಹಂಚಲ್ಪಡಬೇಕು. ಆಗ ಮಾತ್ರ ಸಮಾಜ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಈ ಪ್ರತಿಷ್ಠಾನವು ಪಾರಂಪರಿಕ ಕಟ್ಟಡಗಳ ಉಳಿವಿಗೆ ಆದ್ಯತೆ ನೀಡಲಿದೆ. ಅಲ್ಲದೇ, ಸಮಾಜದ ಶೈಕ್ಷಣಿಕ ಪ್ರಗತಿಗೂ ಕಾಣಿಕೆ ನೀಡಲಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ನವೀಕೃತಗೊಂಡ ಜಗನ್ಮೋಹನ ಅರಮನೆ ಆವರಣದ ಜಯಚಾಮರಾಜೇಂದ್ರ ಆರ್ಟ್‌ ಗ್ಯಾಲರಿಯನ್ನು ಗಣ್ಯರು ವೀಕ್ಷಿಸಿದರು.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ತ್ರಿಷಿಕಾ ಕುಮಾರಿ, ಕಾಮಾಕ್ಷಿ ದೇವಿ, ಇಂದ್ರಾಕ್ಷಿ ದೇವಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT